ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ ಜಿಲ್ಲೆಯಲ್ಲಿ 40 ‘ಕೂಸಿನ ಮನೆ’ ನಿರ್ಮಾಣ

Published 17 ಡಿಸೆಂಬರ್ 2023, 4:33 IST
Last Updated 17 ಡಿಸೆಂಬರ್ 2023, 4:33 IST
ಅಕ್ಷರ ಗಾತ್ರ

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸಕ್ಕೆ ಹೋಗುವ ಮಹಿಳೆಯರ 3 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡುವ ಉದ್ದೇಶದಿಂದ ಹಾವೇರಿ ಜಿಲ್ಲಾ ಪಂಚಾಯಿತಿಯಿಂದ ಜಿಲ್ಲೆಯಲ್ಲಿ ಒಟ್ಟು 40 ‘ಕೂಸಿನ ಮನೆ’ (ಶಿಶುಪಾಲನಾ ಕೇಂದ್ರ) ಆರಂಭಿಸಲಾಗಿದೆ.   

ಜಿಲ್ಲೆಯ ಒಟ್ಟು 223 ಗ್ರಾಮ ಪಂಚಾಯಿತಿಗಳ ಪೈಕಿ, 162 ಗ್ರಾಮ ಪಂಚಾಯಿತಿಗಳು ‘ಕೂಸಿನ ಮನೆ’ ನಿರ್ಮಾಣಕ್ಕೆ ಆಯ್ಕೆಯಾಗಿದ್ದವು. ಇವುಗಳ ಪೈಕಿ, 40 ಕೂಸಿನ ಮನೆಗಳು ಆರಂಭವಾಗಿದ್ದು, ಬಾಕಿ 122 ಶಿಶುಪಾಲನಾ ಕೇಂದ್ರಗಳ ಆರಂಭಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. 

₹1.62 ಕೋಟಿ ಬಿಡುಗಡೆ

‘ಒಂದು ಕೂಸಿನ ಮನೆ ಸ್ಥಾಪನೆ ಮತ್ತು ನಿರ್ವಹಣೆಗೆ ವಾರ್ಷಿಕವಾಗಿ ₹4 ಲಕ್ಷ ವೆಚ್ಚ ತಗಲುತ್ತದೆ. ನರೇಗಾದಿಂದ ₹1.64 ಲಕ್ಷ, ಗ್ರಾಮ ಪಂಚಾಯಿತಿ ನಿಧಿಯಿಂದ ₹1.27 ಲಕ್ಷ, ಪಂಚಾಯತ್‌ ರಾಜ್‌ ಆಯುಕ್ತಾಲಯದಿಂದ ₹1 ಲಕ್ಷ ಮತ್ತು ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ನಿಧಿಯಿಂದ ₹8 ಸಾವಿರ ವೆಚ್ಚ ಭರಿಸಬೇಕು. ಈಗಾಗಲೇ ಪಂಚಾಯತ್‌ರಾಜ್‌ ಇಲಾಖೆಯಿಂದ ಪ್ರತಿ ಕೂಸಿನ ಮನೆಗೆ ತಲಾ ₹1 ಲಕ್ಷದಂತೆ ಒಟ್ಟು ₹1.62 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ್‌ ತಿಳಿಸಿದರು.

520 ಮಹಿಳೆಯರಿಗೆ ತರಬೇತಿ

‘ಶಿಶುಪಾಲನಾ ಕೇಂದ್ರಗಳನ್ನು ನೋಡಿಕೊಳ್ಳುವ 520 ‘ಕೇರ್‌ ಟೇಕರ್‌’ಗಳಿಗೆ ತರಬೇತಿ ನೀಡಿದ್ದೇವೆ. 45 ಮಕ್ಕಳು ಈಗಾಗಲೇ ನೋಂದಣಿಯಾಗಿವೆ. ಕೂಸಿನ ಮನೆಗಳು ಮಕ್ಕಳ ಸ್ನೇಹಿಯಾಗಿರುವಂತೆ ಅಲಂಕಾರ ಮಾಡಿ, ವರ್ಣಚಿತ್ರಗಳನ್ನು ಬಿಡಿಸಲಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ, ಆಟಿಕೆಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್‌.ಬಿ.ಮುಳ್ಳಳ್ಳಿ ತಿಳಿಸಿದರು. 

ಸಮಿತಿಗಳ ರಚನೆ

ಕೂಸಿನ ಮನೆಗಳ ಅನುಷ್ಠಾನ, ಉಸ್ತುವಾರಿ ಮತ್ತು ಸಮರ್ಪಕ ಕಾರ್ಯನಿರ್ವಹಣೆಗಾಗಿ ರಾಜ್ಯ, ಜಿಲ್ಲೆ, ತಾಲ್ಲೂಕು ಹಾಗೂ ಶಿಶುಪಾಲನಾ ಕೇಂದ್ರಗಳ ಹಂತದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯಮಟ್ಟದಲ್ಲಿ ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಶುಪಾಲನಾ ಕೇಂದ್ರಗಳ ಹಂತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮಿತಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾರೆ. ‌

Quote - ಶಿಶುಪಾಲನಾ ಕೇಂದ್ರಗಳ ಸ್ಥಾಪನೆಯಿಂದ ದುಡಿಯುವ ತಾಯಂದಿರರಿಗೆ ಅನುಕೂಲವಾಗಿದೆ. 3 ವರ್ಷದೊಳಗಿನ ಮಕ್ಕಳಿಗೆ ಹಾಲು ಗಂಜಿ ಸೇರಿದಂತೆ ಪೌಷ್ಟಿಕ ಆಹಾರ ನೀಡಲು ಕ್ರಮ ಕೈಗೊಂಡಿದ್ದೇವೆ ಅಕ್ಷಯ ಶ್ರೀಧರ ಸಿಇಒ ಹಾವೇರಿ ಜಿಲ್ಲಾ ಪಂಚಾಯಿತಿ

Quote - ನನ್ನ ಪತಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಮಗುವನ್ನು ನೋಡಿಕೊಳ್ಳುವ ಸಲುವಾಗಿ ನಾನು ಕೂಲಿಗೆ ಹೋಗುತ್ತಿರಲಿಲ್ಲ. ಈಗ ಕೂಸಿನ ಮನೆ ಇರುವ ಕಾರಣ ಮಗುವನ್ನು ಅಲ್ಲಿ ಬಿಟ್ಟು ನೆಮ್ಮದಿಯಿಂದ ದುಡಿಮೆಗೆ ಹೋಗುತ್ತಿದ್ದೇನೆ ನಿರ್ಮಲಾ ಬಾರ್ಕಿ ನರೇಗಾ ಕಾರ್ಮಿಕ ಮಹಿಳೆ ಕಡಕೋಳ

4 ಸಾವಿರ ‘ಕೂಸಿನ ಮನೆ’

ನಿರ್ಮಾಣಕ್ಕೆ ಸಿದ್ಧತೆ ನರೇಗಾ ಯೋಜನೆಯನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸುತ್ತಿರುವ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ರಾಜ್ಯದಾದ್ಯಂತ 4 ಸಾವಿರ ‘ಕೂಸಿನ ಮನೆ’ಗಳನ್ನು ತೆರೆಯಲು ಸರ್ಕಾರ ಸಿದ್ಧತೆ ಕೈಗೊಂಡಿದೆ.  ರಾಜ್ಯದಲ್ಲಿ ಮೊದಲ ಹಂತದಲ್ಲಿ 510 ಕೂಸಿನ ಮನೆಗಳು ಆರಂಭವಾಗಿದ್ದು 3360 ಮಕ್ಕಳು ನೋಂದಣಿಯಾಗಿದ್ದಾರೆ. ಎರಡನೇ ಹಂತದಲ್ಲಿ 165 ಕೂಸಿನ ಮನೆಗಳು ಆರಂಭವಾಗಿದ್ದು 2287 ಮಕ್ಕಳು ನೋಂದಣಿಯಾಗಿವೆ. ಈ 675 ಕೂಸಿನ ಮನೆಗಳು ಸೇರಿದಂತೆ ಒಟ್ಟು 4 ಸಾವಿರ ಶಿಶುಪಾಲನಾ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ಹಾವೇರಿ ಜಿಲ್ಲೆಯ ‘ಕೂಸಿನ ಮನೆ’ಗಳ ವಿವರ 

ತಾಲ್ಲೂಕು;ಗುರಿ;ಪ್ರಗತಿ;ಬಾಕಿ

ಬ್ಯಾಡಗಿ;21;6;15

ಹಾನಗಲ್‌;38;8;30

ಹಾವೇರಿ;22;2;20

ಹಿರೇಕೆರೂರು;19;9;10

ರಾಣೆಬೆನ್ನೂರು;19;3;16

ರಟ್ಟೀಹಳ್ಳಿ;17;4;13

ಸವಣೂರು;11;5;6

ಶಿಗ್ಗಾವಿ;15;3;12

ಒಟ್ಟು;162;40;122

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT