ಭಾನುವಾರ, ಜನವರಿ 24, 2021
24 °C

ಕಲಾವಿದನ ಮೊದಲ ಹೆಜ್ಜೆ ‘ಭೂದೃಶ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ನಿರ್ಜೀವ ವಸ್ತುಗಳಿಗೆ ಜೀವ ತುಂಬುವ ಭೂದೃಶ್ಯ (ಲ್ಯಾಂಡ್ ಸ್ಕೇಪ್) ಕಲೆಯು ಪ್ರತಿ ಕಲಾವಿದನ ಮೊದಲ ಹೆಜ್ಜೆಯಾಗಿರುತ್ತದೆ’ ಎಂದು ಹಿರಿಯ ಕಲಾವಿದ ಈಶ್ವರ ಎನ್‌.ಜೋಶಿ ಅಭಿಪ್ರಾಯಪಟ್ಟರು. 

ನಗರದ ನಂದಿ ಬಡಾವಣೆಯ ಹಂಚಿನಮನಿ ಆರ್ಟ್‌ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲಾವಿದ ಹರೀಶ ಹೆಡ್ಡನವರ ಮೂರು ದಿನಗಳ ‘ಭೂರಮೆ’ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಕೃತಿಯನ್ನು ಬಣ್ಣ ರೇಖೆಗಳ ಮೂಲಕ ಸೆರೆಹಿಡಿದು ಅದ್ಭುತ ಕಲೆಯನ್ನಾಗಿ ಬೆಳೆಸಿದವರು ಕಲಾತಪಸ್ವಿ ವೆಂಕಟಪ್ಪನವರು. ಮುರಿದು ಬಿದ್ದ ಗತ ಇತಿಹಾಸವನ್ನು ಸರೆ ಹಿಡಿಯುವ ಲ್ಯಾಂಡ್ ಸ್ಕೇಪ್ ಕಲೆ ಬೆರಗು ಮತ್ತು ರಮ್ಯತೆಯನ್ನು ತುಂಬುವಂಥದ್ದು’ ಎಂದು ಹೇಳಿದರು. 

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪಾಧ್ಯಾಪಕ ಜೈರಾಜ ಎಂ. ಚಿಕ್ಕಪಾಟೀಲ ಮಾತನಾಡಿ, ‘ಜ್ಞಾನಕ್ಕಿಂತ ಕಲ್ಪನೆ ದೊಡ್ಡದು. ಜ್ಞಾನಕ್ಕೆ ಮಿತಿ ಇದ್ದರೆ, ಕಲ್ಪನೆ ಕಲ್ಪನಾತೀತ. ಪ್ರತಿ ಚಿತ್ರಕಲೆ ಬಣ್ಣ ಮತ್ತು ರೇಖೆಗಳ ಮೂಲಕ ತನ್ನ ತಾಂತ್ರಿಕತೆಯಲ್ಲಿಯೇ ತಾತ್ವಿಕತೆಯನ್ನು ಪರಿವರ್ತಿಸುತ್ತದೆ. ಧ್ವನಿ ಒಂದಾದರೆ, ಪ್ರತಿಧ್ವನಿ ನೂರು ತರಂಗಗಳನ್ನು ಹುಟ್ಟಿಸುತ್ತದೆ. ಅಂತೆಯೇ ಚಿತ್ರಕಲೆ ಹಲವು ಅರ್ಥಗಳನ್ನು ಪ್ರತಿ ನೋಡುಗನಿಗೆ ಬೇರೆ ಬೇರೆಯಾಗಿಯೇ ಕಾಣುವಂತೆ ಮಾಡುತ್ತದೆ’ ಎಂದರು. 

ಕಲಾ ಬಳಗದ ಹಿರಿಯ ಸದಸ್ಯ ಚಂದ್ರಶೇಖರ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕರಿಯಪ್ಪ ಹಂಚಿನಮನಿ, ನಾಮದೇವ ಕಾಗದಗಾರ, ವಿರೂಪಾಕ್ಷ ಹಾವನೂರ, ಸಿ.ಎಚ್. ಬಾರ್ಕಿ, ಸಿ.ಎಸ್. ಮರಳೀಹಳ್ಳಿ, ಮಾಲತೇಶ ಅಂಗೂರ, ಸಿ.ಎ. ಕೂಡಲಮಠ, ರೇಖಾ ಹಂಚಿನಮನಿ, ಶಂಕರ ತುಮ್ಮಣ್ಣನವರ ಪಾಲ್ಗೊಂಡಿದ್ದರು.

ದೃಶ್ಯಕಲಾ ಮಹಾವಿದ್ಯಾಲಯದ ಹೇಮಲತಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ದತ್ತಾತ್ರೇಯ ಭಟ್ಟ ನಡೆಸಿಕೊಟ್ಟರು. ಹರೀಶ ಮಾಳಾಪುರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.