ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಸರೋಜಿನಿ ಮಹಿಷಿ ವರದಿ ಜಾರಿಯಾಗಲಿ -ಡಾ.ಜಗದೀಶ ಹೊಸಮನಿ

24ನೇ ನಾಡಹಬ್ಬ ಸಮಾರಂಭ
Last Updated 11 ಅಕ್ಟೋಬರ್ 2021, 15:48 IST
ಅಕ್ಷರ ಗಾತ್ರ

ಹಾವೇರಿ: ‘ಕನ್ನಡ ನಾಡಿನಲ್ಲಿ ವಿಶಿಷ್ಟವಾಗಿ ಆಚರಿಸುವ ನಾಡಹಬ್ಬವು ಕನ್ನಡ ನಾಡಿನ ಭವ್ಯ ಸಂಸ್ಕೃತಿ, ಸಂಸ್ಕಾರಗಳ ಪುರಾತನ ಪರಂಪರೆಯ ಅಭಿವ್ಯಕ್ತಿಯ ಆಶಯಗಳನ್ನು ಹೊಂದಿದ್ದು, ಅದು ಜೀವಂತಿಕೆಯ ಪ್ರತಿರೂಪವಾಗಲು ನಾವು ನಮ್ಮ ಅಂತರಂಗದ ಅಭಿಮಾನವನ್ನು ಹೊಂದಬೇಕಾಗಿದೆ’ ಎಂದು ನಗರದ ಜಿ.ಎಚ್. ಕಾಲೇಜಿನ ಪ್ರಾಧ್ಯಾಪಕ ಡಾ.ಜಗದೀಶ ಹೊಸಮನಿ ಹೇಳಿದರು.

ನಗರದ ಗುರುಭವನದಲ್ಲಿ ನಾಡಹಬ್ಬ ಉತ್ಸವ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿರುವ 24ನೇ ನಾಡಹಬ್ಬ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಅದು ಸರ್ಕಾರದ ಮಟ್ಟದಲ್ಲಿ ಅನುಷ್ಠಾನವಾಗಬೇಕು. ಕನ್ನಡ ಭಾಷೆ ಉಳಿಸಲು ಹಲವಾರು ಸರ್ಕಾರದ ಆಯೋಗಗಳು, ಸಮಿತಿಗಳು ಇದ್ದೂ ಸಹ ಕನ್ನಡ ಆಡಳಿತ ಭಾಷೆಯಾಗಿಲ್ಲ. ಸರೋಜಿನಿ ಮಹಿಷಿ ವರದಿ ಸೇರಿದಂತೆ ಎಲ್ಲ ವರದಿ ಯಥಾವತ್ತಾಗಿ ಜಾರಿಯಾಗಬೇಕಾಗಿದೆ’ ಎಂದು ಹೇಳಿದರು.

ಡಿಡಿಪಿಐ ಅಂದಾನಪ್ಪ ವಡಿಗೇರಿ ಮಾತನಾಡಿ, ಕನ್ನಡ ನಾಡು ನುಡಿ ಸೇವೆಗೆ ಸದಾ ನಾವು ಬದ್ಧರಾಗಬೇಕು. ಹಾವೇರಿ ನೆಲವು ಕನ್ನಡ ನಾಡಿಗೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಗಳಗನಾಥರು, ಶಾಂತಕವಿಗಳು, ಗೋಕಾಕರು, ಪಾಪು, ರಾಕು, ಚಂಪಾ ಸೇರಿದಂತೆ ಹಲವಾರು ಮಹನೀಯರು ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಮಹನೀಯರ ಸೇವೆ ನೆನೆಯುವುದು ಅಗತ್ಯ ಎಂದು ಹೇಳಿದರು.

ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಭಾವನಾತ್ಮಕ ಕರ್ನಾಟಕ ಹಾಗೂ ವಾಸ್ತವ ಕರ್ನಾಟಕದ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಕನ್ನಡನಾಡಿನಲ್ಲಿ ನವಾಬರ ಕಾಲದಲ್ಲಿ ಶಾಲೆಯ ಹೊರಗೆ ಉರ್ದು ಬೋರ್ಡನ್ನು ಹಾಕಿ ಒಳಗೆ ಕನ್ನಡ ಕಲಿಸಿದ ಉದಾರಹಣೆಗಳಿವೆ. ಆದರೆ, ಇಂದು ಕನ್ನಡ ಮಾಧ್ಯಮದ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಕಲಿಸುತ್ತಿರುವ ಶಾಲೆಗಳು ಇವೆ. ಕನ್ನಡ ಕೇವಲ ವೇದಿಕೆಗೆ ಮಾತ್ರ ಸೀಮಿತವಾಗದೇ ಅನ್ನದ ಭಾಷೆಯಾಗಬೇಕು. ಕನ್ನಡದ ಎಲ್ಲ ಸಮಿತಿಗಳ ವರದಿಗಳು ಸರ್ಕಾರದಲ್ಲಿ ದೂಳು ತಿನ್ನುತ್ತಿವೆ. ಅವುಗಳ ಅನುಷ್ಠಾನ ಮಾಡಿದಾಗ ಮಾತ್ರ ಕನ್ನಡ ನಾಡಿನಲ್ಲಿ ಕನ್ನಡ ಪರಕೀಯವಾಗುವುದನ್ನು ತಡೆಯಬಹುದು ಎಂದು ಹೇಳಿದರು.

ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ಜಯದೇವಯ್ಯ ಸಾವಿರಮಠ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ನಾಡಹಬ್ಬ ಉತ್ಸವ ಸಮಿತಿ ಕಾರ್ಯದರ್ಶಿ ವೈ.ಬಿ. ಆಲದಕಟ್ಟಿ ಪ್ರಾಸಾವಿಕವಾಗಿ ಮಾತನಾಡಿದರು.

ಸಮಾರಂಭದಲ್ಲಿ ಕೆಪಿಟಿಸಿಎಲ್‍ನ ಉಪಾಧ್ಯಕ್ಷ ವಿಜಯಕುಮಾರ ಮುದಕಣ್ಣನವರ, ಎಂ.ಎಸ್. ಕೋರಿಶೆಟ್ಟರ್‌, ಪ್ರೊ.ಎನ್. ಕೆಂಚವೀರಪ್ಪ, ಪ್ರಭು ಹಿಟ್ನಳ್ಳಿ, ಎಸ್.ಎಲ್. ಕಾಡದೇವರಮಠ, ರಮೇಶ ಆನವಟ್ಟಿ, ಎಸ್.ಎನ್.ದೊಡ್ಡಗೌಡರ, ಮಧುಮತಿ ಚಿಕ್ಕೇಗೌಡರ ಇದ್ದರು.ಎ.ಬಿ.ಗುಡ್ಡಳ್ಳಿ ಪ್ರಾರ್ಥಿಸಿದರು. ಸಮತಾ ಕಲಾ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಎಸ್.ಎಂ.ಬಡಿಗೇರ ಸ್ವಾಗತಿಸಿದರು. ನಾಗರಾಜ ದೇಸಳ್ಳಿ ಮತ್ತು ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT