ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಅನಿರೀಕ್ಷಿತ ಯಶಸ್ಸು

ಪ್ರಚಾರಕ್ಕೆ ಹೆಚ್ಚಿನ ಒತ್ತು; ದಕ್ಕಿದ ಫಲ
Published 5 ಜೂನ್ 2024, 6:21 IST
Last Updated 5 ಜೂನ್ 2024, 6:21 IST
ಅಕ್ಷರ ಗಾತ್ರ

ಹಾನಗಲ್: ಲೋಕಸಭೆ ಚುನಾವಣೆಯಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ 8,924 ಮತಗಳ ಲೀಡ್ ಪಡೆದುಕೊಂಡಿದ್ದು, ಇದಕ್ಕೆ ಕಾಂಗ್ರೆಸ್‌ ನಾಯಕರ ಅತಿಯಾದ ಆತ್ಮವಿಶ್ವಾಸ ಮುಳುವಾಯಿತೇ ಅಥವಾ ಕೈ ಕಾರ್ಯಕರ್ತರು ಮೈ ಮರೆತರೆ ಎಂಬ ವಿಶ್ಲೇಷಣೆಗಳು ಈಗ ತಾಲ್ಲೂಕಿನಲ್ಲಿ ನಡೆಯುತ್ತಿವೆ.

2021ರ ಅಕ್ಟೋಬರ್‌ನಲ್ಲಿ ನಡೆದ ಉಪ ಚುನಾವಣೆ ಮತ್ತು ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಸತತ ಸೋಲಿನಿಂದ ಕಂಗೆಟ್ಟಿದ್ದ ಹಾನಗಲ್ ಕ್ಷೇತ್ರದ ಬಿಜೆಪಿ ಸಂಘಟನೆಗೆ ಈ ಲೋಕಸಭೆ
ಚುನಾವಣೆ ಫಲಿತಾಂಶ ಹುಮ್ಮಸ್ಸು ಕೊಟ್ಟಿದೆ. ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 22 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಇಲ್ಲಿ ಕಾಂಗ್ರೆಸ್‌ ವಿಜಯ ಸಾಧಿಸಿತ್ತು. ಈಗ ಒಂದೇ ವರ್ಷದ ಅವಧಿಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶವು ಕ್ಷೇತ್ರದ ಎಲ್ಲ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಕೈ ಅಭ್ಯರ್ಥಿ ಘೋಷಣೆಯಾದಾಗಿನಿಂದ ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ಕೈಗೊಂಡಿತ್ತು. ಮೂರು ವರ್ಷದ ಅವಧಿಯಲ್ಲಿ ನಡೆದ
ಎರಡು ವಿಧಾನಸಭೆ ಚುನಾವಣೆಯ ಗೆಲುವು ಕಾಂಗ್ರೆಸ್‌ ಕಾರ್ಯಕರ್ತರಿಗೆ ವಿಜಯದ ವಿಶ್ವಾಸ ಹುಟ್ಟಿಸಿತ್ತು. ಇದಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಓಡಾಡಿ ಚುನಾವಣಾ ಪ್ರಚಾರ ಕಾರ್ಯ ಕೈಗೊಂಡಿದ್ದ ಶಾಸಕ ಶ್ರೀನಿವಾಸ ಮಾನೆ ಅವರು ಕಾರ್ಯಕರ್ತರನ್ನು ಹುರಿದುಂಬಿಸಿದ್ದರು. ಕಳೆದ ವರ್ಷದ ವಿಧಾನಸಭಾ
ಚುನಾವಣೆಯಲ್ಲಿ ಪಡೆದ ಲೀಡ್‌ ಪ್ರಮಾಣವನ್ನು ಈ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿಸಬೇಕು ಎಂಬ ಹಂಬಲವೂ ಇತ್ತು. ಆದರೆ ಯಾವುದೂ ಈಡೇರಿಲ್ಲ.

ಚುರುಕಾದ ಕೇಸರಿ ಪಡೆ: ವಿಧಾನಸಭೆ ಚುನಾವಣೆಯ ಎರಡು ಸತತ ಸೋಲು, ಈ ಲೋಕಸಭೆ ಚುನಾವಣೆ ಸಮಯದಲ್ಲಿ ಸಂಸದ ಶಿವಕುಮಾರ ಉದಾಸಿ ರಾಜಕೀಯ ನಿವೃತ್ತಿಯ ನಿರ್ಧಾರದಿಂದ
ಮಂಕಾಗಿದ್ದ ಕ್ಷೇತ್ರದ ಕೇಸರಿ ಪಡೆಯನ್ನು ಚುರುಕುಗೊಳಿಸುವ ಕೆಲಸಕ್ಕೆ ಬಸವರಾಜ ಬೊಮ್ಮಾಯಿ ಕೈಹಾಕಿದ್ದರು. ಸತತ 9 ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ 4 ಬಾರಿ ಶಾಸಕರಾಗಿದ್ದ ಮಾಜಿ ಸಚಿವ ಮನೋಹರ ತಹಸೀಲ್ದಾರ್‌ ಅವರನ್ನು ಬಿಜೆಪಿ ತೆಕ್ಕೆಗೆ ಪಡೆಯುವಲ್ಲಿ
ಸಫಲರಾದ ಬೊಮ್ಮಾಯಿ, ಈ ಒಂದು ವರ್ಷದ ಅವಧಿಯಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರನ್ನು ಸೆಳೆದುಕೊಂಡು ಪ್ರಚಾರ ಕಾರ್ಯಕ್ಕೆ ಹುರುಪು ಮೂಡಿಸಿದ್ದರು.

ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಪಾಲಿಗೆ ವೀಕ್‌ ಪಾಯಿಂಟ್‌ ಎಂದು ವಿಶ್ಲೇಷಿಸಲಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ಕೊಟ್ಟು ಚದುರಿದ್ದ ಬಿಜೆಪಿ ಮತಗಳನ್ನು ಒಗ್ಗೂಡಿಸುವ ಕೆಲಸ ಮಾಡಿದ ಬೊಮ್ಮಾಯಿ, ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಫಲ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT