ಮಂಗಳವಾರ, ಆಗಸ್ಟ್ 16, 2022
22 °C
ಬಿಜೆಪಿ ಜಿಲ್ಲಾ ಕಾರ್ಯಾಲಯಕ್ಕೆ ಶಿಲಾಫಲಕ ನೆರವೇರಿಸಿದ ನಳೀನ್‌ಕುಮಾರ್‌ ಕಟೀಲ್‌

‘ಕಮಲ ಅರಳಿದ್ದು ಕಾರ್ಯಕರ್ತರ ಶ್ರಮದಿಂದ’

ಪ‍್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಬಿಜೆಪಿ ಬೆಳೆದಿರುವುದು ಮುಖ್ಯಮಂತ್ರಿ ಮನೆಯಿಂದಲ್ಲ, ವಿಧಾನಸೌಧದ ಪಡಸಾಲೆಯಿಂದಲ್ಲ; ಕಾರ್ಯಕರ್ತರ ಪರಿಶ್ರಮ ಮತ್ತು ಕಾರ್ಯಾಲಯಗಳ ಸಕ್ರಿಯ ಚಟುವಟಿಕೆಯಿಂದ. ಆದ್ದರಿಂದ ಜಿಲ್ಲಾ ಕಾರ್ಯಾಲಯಗಳು ಕಾರ್ಯಕರ್ತರ ದೇವಾಲಯಗಳಾಗಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನದ ಕಾಮಗಾರಿ ಪ್ರಾರಂಭೋತ್ಸವ ಹಾಗೂ ಶಿಲಾಫಲಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಡುವಾಗ ನಮ್ಮೆಲ್ಲರ ನಾಯಕರಾದ ಬಿ.ಎಸ್‌. ಯಡಿಯೂರಪ್ಪನವರು ನನಗೆ ಪಕ್ಷದ ಧ್ವಜ ಕೊಟ್ಟು, ರಾಜ್ಯದ ಹಳ್ಳಿ–ಹಳ್ಳಿಗಳಲ್ಲಿ ಪ್ರವಾಸ ಮಾಡಿ ಪಕ್ಷ ಕಟ್ಟಿದ್ದೇನೆ. ಇದನ್ನು ಮುಂದುವರಿಸಿಕೊಂಡು ಹೋಗಿ ಎಂದು ಜವಾಬ್ದಾರಿ ನೀಡಿದರು. ಅವರು ಮಾಡಿದ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ’ ಎಂದು ಹೇಳಿದರು. 

‘ರಾಜ್ಯದಲ್ಲಿ ಬಿಜೆಪಿಗೆ 9 ಕಡೆ ಸ್ವಂತ ಕಟ್ಟಡಗಳಿವೆ. 11 ಕಡೆ ಶಿಲಾನ್ಯಾಸ ನೆರವೇರಿಸಲಾಗಿದೆ. ಉಳಿದ ಜಿಲ್ಲೆಗಳಲ್ಲೂ ಒಂದು ವರ್ಷದೊಳಗೆ ಸ್ವಂತ ಜಿಲ್ಲಾ ಕಾರ್ಯಾಲಯಗಳನ್ನು ತೆರೆಯಲಿದ್ದೇವೆ. ಜತೆಗೆ ಮೂರು ವರ್ಷದೊಳಗೆ ‘ಮಂಡಲ ಕಾರ್ಯಾಲಯ’ಗಳೂ ಸ್ಥಾಪನೆಯಾಗಲಿವೆ. ಈ ಕಾರ್ಯಾಲಯಗಳು ಪ್ರೇರಣಾ ಮಂದಿರವಾಗಿ, ಜನತಾ ಕಾರ್ಯಾಲಯವಾಗಬೇಕು. ಸಮಾಜದ ಕಟ್ಟಕಡೆಯ ಜನರ ಕಣ್ಣೀರು ಒರೆಸುವ ಕೇಂದ್ರವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಗ್ರಂಥಾಲಯ ಸೌಲಭ್ಯ:

‘ಪ್ರತಿ ಕಾರ್ಯಾಲಯಗಳಲ್ಲಿ ಗ್ರಂಥಾಲಯವಿರಬೇಕು. ಅದರಿಂದ ಕಾರ್ಯಕರ್ತರು ಅಧ್ಯಯನಶೀಲರಾಗಿ ವಿಚಾರವಂತಿಕೆ ಬೆಳೆಸಿಕೊಳ್ಳಬೇಕು’ ಎಂಬುದು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಪೇಕ್ಷೆಯಾಗಿದೆ. ಬಿಜೆಪಿಗೆ ಕಾರ್ಯಕರ್ತನಿಗೆ ‘ರಾಜಕೀಯ ಮುಖ’ ಮತ್ತು ‘ಸೇವಾ ಮುಖ’ ಎಂಬ ಎರಡು ಮುಖಗಳಿವೆ. ಕೋವಿಡ್‌ ಸಂದರ್ಭ 1.68 ಕೋಟಿ ಜನರ ಮನೆಬಾಗಿಲಿಗೆ ಆಹಾರ ಪೊಟ್ಟಣ ತಲುಪಿಸುವ ಸೇವಾ ಕಾರ್ಯ ಮಾಡಿದ್ದು ಬಿಜೆಪಿ ಕಾರ್ಯಕರ್ತರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಪಷ್ಟ ನೀತಿ; ದಕ್ಷ ನಾಯಕತ್ವ:

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ಪಕ್ಷದ ಕಾರ್ಯಾಲಯಗಳು ವ್ಯಕ್ತಿತ್ವ ರೂಪಿಸುವ ಸಂಸ್ಥೆಗಳು. ಸಂಘದ ಸಂಸ್ಕೃತಿ, ವಿಚಾರಗಳು ಸದಾಕಾಲ ಮಾರ್ಗದರ್ಶನ ಮಾಡುತ್ತವೆ. ಬಿಜೆಪಿಯಲ್ಲಿ ಸ್ಪಷ್ಟ ನೀತಿಯಿದೆ, ದಕ್ಷ ನಾಯಕತ್ವವಿದೆ. ಇತರೆ ಪಕ್ಷಗಳು ಸಮರ್ಥ ನಾಯಕರಿಲ್ಲದೆ ಬಳಲುತ್ತಿವೆ. ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಬಿಜೆಪಿ ಕಟಿಬದ್ಧವಾಗಿದೆ’ ಎಂದರು. 

ಕೃಷಿ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ವಿಧಾನ ಪರಿಷತ್‌ ಸದಸ್ಯ ಆರ್.ಶಂಕರ್‌, ಶಾಸಕರಾದ ನೆಹರು ಓಲೇಕಾರ, ಅರುಣ್‌ಕುಮಾರ್‌ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನ, ಲಿಂಗರಾಜ ಪಾಟೀಲ, ಮಂಜುನಾಥ ಕುನ್ನೂರ, ಮಹೇಶ ತೆಂಗಿನಕಾಯಿ, ಮಾ.ನಾಗರಾಜ್‌ ಮುಂತಾದವರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು