ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಲಂಚ ಕೊಡಲು ಬಂದವನನ್ನೇ ಹಿಡಿದುಕೊಟ್ಟ ಅಧಿಕಾರಿ

Published 11 ಜನವರಿ 2024, 16:19 IST
Last Updated 11 ಜನವರಿ 2024, 16:19 IST
ಅಕ್ಷರ ಗಾತ್ರ

ಹಾವೇರಿ: ‘ಟೆಂಡರ್‌ದಾರನೊಬ್ಬ ಲಂಚ ಕೊಡುವ ಆಮಿಷವೊಡ್ಡುತ್ತಿದ್ದಾನೆ’ ಎಂದು ಸರ್ಕಾರಿ ಅಧಿಕಾರಿಯೇ ದೂರು ನೀಡಿ, ಟೆಂಡರ್‌ದಾರನನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ ಅಪರೂಪದ ಪ್ರಕರಣ ನಗರದಲ್ಲಿ ಗುರುವಾರ ನಡೆದಿದೆ.

 ತಾಲ್ಲೂಕಿನ ಗುತ್ತಲದ ಗುರುಕೃಪಾ ಎಂಟರ್‌ಪ್ರೈಸಸ್‌ ಮಾಲೀಕ ಶರಣಪ್ಪ ಸಿದ್ದಪ್ಪ ಶೆಟ್ಟರ್‌ ಬಂಧಿತ ಟೆಂಡರ್‌ದಾರ. ಇವರ ವಿರುದ್ಧ ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭರತ್‌ ಹೆಗಡೆ ದೂರು ಕೊಟ್ಟಿದ್ದರು.

 ಏನಿದು ಪ್ರಕರಣ:

ಹಾವೇರಿ ತಾಲ್ಲೂಕು ಪಂಚಾಯಿತಿಯಿಂದ ಸಾಮಗ್ರಿ ಪೂರೈಕೆಗಾಗಿ ಕರೆದ ಟೆಂಡರ್‌ನಲ್ಲಿ ಶರಣಪ್ಪ ಅವರು ‘ಈ ಟೆಂಡರ್‌ ನನಗೇ ಸಿಗುವಂತೆ ಮಾಡಿದ್ದಲ್ಲಿ ಟೆಂಡರ್‌ ಮೊತ್ತದ ಶೇ 20ರಷ್ಟು ಹಣವನ್ನು ನಿಮಗೆ ಕೊಡುತ್ತೇನೆ ಎಂದು ಒತ್ತಾಯಿಸಿ, ಲಂಚ ತೆಗೆದುಕೊಳ್ಳುವಂತೆ ಆಮಿಷ ಒಡ್ಡಿದ್ದರು’ ಎಂದು ಇಒ ಭರತ್‌ ಹೆಗಡೆ ಲೋಕಾಯುಕ್ತರಿಗೆ ದೂರು ನೀಡಿದ್ದರು. 

₹2 ಲಕ್ಷವನ್ನು ಮುಂಗಡವಾಗಿ ನೀಡಲು ಭರವಸೆ ನೀಡಿ, ನಗರದ ಖಾಸಗಿ ಹೋಟೆಲ್‌ನಲ್ಲಿ ₹90 ಸಾವಿರ ಲಂಚ ಕೊಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. 

‘ಸರ್ಕಾರಿ ಅಧಿಕಾರಿ ಲಂಚ ಮುಟ್ಟದೆ, ಲಂಚ ಕೊಡುವವನನ್ನೇ ಹಿಡಿದುಕೊಟ್ಟಿದ್ದು, ಲೋಕಾಯುಕ್ತ ಪ್ರಕರಣಗಳಲ್ಲಿಯೇ ವಿರಳ ಘಟನೆ ಎನಿಸಿದೆ. ಇದನ್ನು ‘ರಿವರ್ಸ್ ಟ್ರ್ಯಾಪ್‌’‌ ಎನ್ನುತ್ತೇವೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಚಂದ್ರಶೇಖರ ಬಿ.ಪಿ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT