ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ: ಹಣ್ಣುಗಳ ಖರೀದಿ ಭರಾಟೆ

ಹಾವೇರಿ ನಗರಕ್ಕೆ ರವಾನೆಯಾದ ತಮಿಳುನಾಡು ಕಲ್ಲಂಗಡಿ
Published 8 ಮಾರ್ಚ್ 2024, 5:52 IST
Last Updated 8 ಮಾರ್ಚ್ 2024, 5:52 IST
ಅಕ್ಷರ ಗಾತ್ರ

ಹಾವೇರಿ: ಮಹಾಶಿವರಾತ್ರಿ ಹಬ್ಬದ ನಿಮಿತ್ತ ನಗರದ ಮಾರುಕಟ್ಟೆಯಲ್ಲಿ ವೈವಿಧ್ಯಮಯ ಹಣ್ಣುಗಳ ವ್ಯಾಪಾರ ಜೋರಾಗಿದ್ದು, ಶಿವರಾತ್ರಿ ಹಬ್ಬಕ್ಕೆ ಸಾರ್ವಜನಿಕರು ತಯಾರಿ ನಡೆಸುತ್ತಿರುವುದು ಕಂಡುಬಂತು.

ನಗರದ ಎಂ.ಜಿ.ರಸ್ತೆ, ನಗರಸಭೆ ಎದುರು, ಜಿಲ್ಲಾಸ್ಪತ್ರೆ ರಸ್ತೆ, ಜಿ.ಎಚ್. ಕಾಲೇಜು ರಸ್ತೆ, ಬಸ್‍ನಿಲ್ದಾಣ ರಸ್ತೆಗಳಲ್ಲಿ ನೂರಾರು ಹಣ್ಣು ಮಾರಾಟ ಅಂಗಡಿಗಳನ್ನು ತೆರೆಯಲಾಗಿದೆ. ಕಲ್ಲಂಗಡಿ, ಸೇಬು, ದ್ರಾಕ್ಷಿ, ಕರಬೂಜ, ಖರ್ಜೂರ, ಕಿತ್ತಳೆ, ಮೂಸಂಬಿ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳ ಅಂಗಡಿಗಳು ವ್ಯಾಪಾಕವಾಗಿ ತಲೆ ಎತ್ತಿದ್ದು ಎಲ್ಲ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು.

ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಜನರು ಬೆಳಿಗ್ಗೆಯಿಂದಲೇ ಮಾರುಕಟ್ಟೆಯಲ್ಲಿ ವಿವಿಧ ಹಣ್ಣು, ಹೂವುಗಳನ್ನು ಖರೀದಿಸುತ್ತಿರುವುದು ಕಂಡುಬಂತು. ಹಬ್ಬದ ನಿಮಿತ್ತ ಮಾರುಕಟ್ಟೆಗೆ ರಾಶಿ ರಾಶಿ ಕಲ್ಲಂಗಡಿ, ಕರಬೂಜದ ಹಣ್ಣುಗಳು ಬಂದಿದ್ದು, ವ್ಯಾಪಾರಸ್ಥರು ಗ್ರಾಹಕರನ್ನು ಸೆಳೆಯಲು ಪೈಪೋಟಿಗೆ ಬಿದ್ದು ಕೂಗುತ್ತಿದ್ದ ದೃಶ್ಯ ಕಂಡುಬಂತು.

ನಗರಕ್ಕೆ ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣುಗಳು ಬಂದಿದ್ದು, ಒಂದು ಕೆ.ಜಿ.ಗೆ ₹30-40ರವರೆಗೂ ಮಾರಾಟ ಮಾಡಲಾಗುತ್ತಿದೆ. ಇನ್ನು ಆಂಧ್ರಪ್ರದೇಶದಿಂದ ತಂದ ಕರಬೂಜ ಹಣ್ಣುಗಳನ್ನು ಕೆ.ಜಿ.ಗೆ ₹50-60 ರವರೆಗೆ, ಸೇಬು ಕೆ.ಜಿ.ಗೆ ₹140-160, ದ್ರಾಕ್ಷಿ ಕೆ.ಜಿ.ಗೆ ₹80-100, ಕಿತ್ತಳೆ ₹80, ಬಾಳೆಹಣ್ಣು ಒಂದು ಜಡನ್‍ಗೆ ₹40-50, ದಾಳಿಂಬೆ ಕೆ.ಜಿ.ಗೆ ₹160, ಚಿಕ್ಕುಹಣ್ಣು ಕೆ.ಜಿ.ಗೆ ₹70, ಕರಿದ್ರಾಕ್ಷಿ ಕೆ.ಜಿ.ಗೆ ₹140, ಖರ್ಜೂರ ಕೆ.ಜಿ.ಗೆ ₹120-130 ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳ ಖರೀದಿಸುತ್ತಿರುವ ಗ್ರಾಹಕರಿಗೆ ಬಿಸಿಲಿನ ಬೇಗೆಯ ಜೊತೆಗೆ ಬೆಲೆ ಏರಿಕೆ ಬಿಸಿ ತಾಗಿದ್ದು, ಗ್ರಾಹಕರು ಚೌಕಾಸಿ ಮಾಡಿ ಹಣ್ಣುಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು.

‘ಶಿವರಾತ್ರಿ ಹಬ್ಬದ ನಿಮಿತ್ತ ನಗರಕ್ಕೆ ಅಧಿಕ ಪ್ರಮಾಣದಲ್ಲಿ ಕಲ್ಲಂಗಡಿ, ಕರಬೂಜ ಹಣ್ಣುಗಳನ್ನು ತರಿಸಲಾಗಿದೆ. ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳಿಗೆ ಉತ್ತಮ ಬೇಡಿಕೆಯಿದೆ. ಈ ಬಾರಿಯ ಬೇಸಿಗೆ ದಿನಗಳಲ್ಲಿ ಹೆಚ್ಚಿನ ವ್ಯಾಪಾರ ನೀರಿಕ್ಷಿಸಲಾಗಿದೆ’ ಎನ್ನುತ್ತಾರೆ ಹಣ್ಣುಗಳ ವ್ಯಾಪಾರಿ ಮಲ್ಲಿಕ್‌ ರಿಯಾನ್‌. 

ಹಾವೇರಿ ನಗರದಲ್ಲಿ ಹಬ್ಬದ ಮುನ್ನಾ ದಿನವಾದ ಗುರುವಾರ ವಿವಿಧ ಹಣ್ಣುಗಳನ್ನು ಜನರು ಖರೀದಿಸಿದರು 
ಹಾವೇರಿ ನಗರದಲ್ಲಿ ಹಬ್ಬದ ಮುನ್ನಾ ದಿನವಾದ ಗುರುವಾರ ವಿವಿಧ ಹಣ್ಣುಗಳನ್ನು ಜನರು ಖರೀದಿಸಿದರು 

ಎಲ್ಲೆಡೆ ಶಿವನಿಗೆ ಪೂಜೆ 

ಇಂದು  ಶಿವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಮಾರ್ಚ್‌ 8ರಂದು ಶುಕ್ರವಾರ ವಿಶೇಷ ಪೂಜೆಗಳು ನಡೆಯಲಿವೆ. ನಗರದ ಪುರಸಿದ್ಧೇಶ್ವರ ದೇವಸ್ಥಾನ ಹುಕ್ಕೇರಿಮಠ ಬಸವೇಶ್ವರ ನಗರದ ಸಿ. ಬ್ಲಾಕ್‍ನ ಗಣೇಶ ದೇವಸ್ಥಾನ ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಬೆಳಿಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತ ತೆರಳಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT