ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್ ಕ್ಷೇತ್ರದಲ್ಲಿ ರಾಜಕೀಯ ಧೃವೀಕರಣ: ಬಿಜೆಪಿಗೆ ಮನೋಹರ ತಹಶೀಲ್ದಾರ್‌

Published 3 ಮಾರ್ಚ್ 2024, 4:31 IST
Last Updated 3 ಮಾರ್ಚ್ 2024, 4:31 IST
ಅಕ್ಷರ ಗಾತ್ರ

ಹಾನಗಲ್: ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಾನಗಲ್ ಕ್ಷೇತ್ರದ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಚಿವ ಮನೋಹರ ತಹಸೀಲ್ದಾರ್‌, ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾದರು.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಬಸವರಾಜ ಬೊಮ್ಮಾಯಿ ಮತ್ತು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.

ಹಾನಗಲ್‌ನಿಂದ ಮಾಜಿ ಶಾಸಕ ಶಿವರಾಜ ಸಜ್ಜನರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ಬಿಜೆಪಿ ಕಾರ್ಯಕರ್ತರು, ತಹಸೀಲ್ದಾರ್‌ ಅಭಿಮಾನಿಗಳು ಹಾಜರಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದ ಮನೋಹರ ತಹಸೀಲ್ದಾರ್‌ ಅವರು ಇತ್ತೀಚೆಗೆ ತಮ್ಮ ಗೃಹ ಕಚೇರಿಯಲ್ಲಿ ಬೆಂಬಲಿಗರು, ಅಭಿಮಾನಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಬಿಜೆಪಿ ಸೇರ್ಪಡೆಯ ಸುಳಿವು ನೀಡಿದ್ದರು.

50 ವರ್ಷ ಕಾಂಗ್ರೆಸ್‌ನಲ್ಲಿದ್ದ ತಹಸೀಲ್ದಾರ್‌, ನಾಲ್ಕು ಬಾರಿ ಹಾನಗಲ್ ಕ್ಷೇತ್ರದ ಶಾಸಕರಾಗಿದ್ದರು. ಒಮ್ಮೆ ವಿಧಾನಸಭೆ ಉಪ ಸಭಾಪತಿ, ಅಬಕಾರಿ ಸಚಿವರಾಗಿ ಕೆಲಸ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಸೇರಿ ಪರಾಭವಗೊಂಡ ಬಳಿಕ, ಅವರು ಮತ್ತೆ ಕಾಂಗ್ರೆಸ್ ಸೇರಲಿದ್ದಾರೆ ಎಂಬ ರಾಜಕೀಯ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈಗ ಹಾನಗಲ್ ಕ್ಷೇತ್ರದ ಬಿಜೆಪಿ ಸಾರಥ್ಯ ವಹಿಸಲು ಸಿದ್ಧರಾಗಿದ್ದಾರೆ.

‘ನನಗೆ ಶಾಸಕ ಅಥವಾ ಸಂಸದನಾಗುವ ಆಸಕ್ತಿ ಇಲ್ಲ’ ಎಂದು ಘೋಷಿಸಿಕೊಂಡಿದ್ದರು. ಬಿಜೆಪಿಗೆ ಬರುವಂತೆ ಶಾಸಕ ಬಸವರಾಜ ಬೊಮ್ಮಾಯಿ ಅವರು ಮನವೊಲಿಸಿದರು. ಪಕ್ಷ ಸೇರ್ಪಡೆಗೂ ಮುನ್ನ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ನಾಯಕರನ್ನು ತಹಸೀಲ್ದಾರ್‌ ಭೇಟಿಯಾಗಿ, ಚರ್ಚಿಸಿದರು.

ಹಿರಿಯ ರಾಜಕಾರಣಿ ಮನೋಹರ ತಹಸೀಲ್ದಾರ್‌ ಬಿಜೆಪಿ ಸೇರ್ಪಡೆ ಸಂತೋಷ ತಂದಿದೆ. ಅವರ ಆಗಮನದಿಂದ ಕ್ಷೇತ್ರದಲ್ಲಿ ಪಕ್ಷ ಮತ್ತಷ್ಟು ಸಂಘಟಿತವಾಗಲಿದೆ
-ಮಹೇಶ ಕಮಡೊಳ್ಳಿ ಬಿಜೆಪಿ ಹಾನಗಲ್ ತಾಲ್ಲೂಕು ಘಟಕದ ಅಧ್ಯಕ್ಷ.
‘ಅನುಭವ ಧಾರೆ ಎರೆದು ಬಿಜೆಪಿ ಸಂಘಟಿಸುವೆ’
‘ದೇಶದ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ಉದ್ದೇಶದಿಂದ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಪಕ್ಷದಲ್ಲಿ ನನಗೆ ಗೌರವದಿಂದ ನಡೆಸಿಕೊಂಡರೆ ಸಾಕು. ನನ್ನ ರಾಜಕೀಯ ಅನುಭವ ಧಾರೆ ಎರೆದು ಕ್ಷೇತ್ರದಲ್ಲಿ ಪಕ್ಷ ಸಂಘಟಿಸುತ್ತೇನೆ. ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತೇನೆ. ಪ್ರಮುಖ ರಾಷ್ಟ್ರೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಜನರ ಸೇವೆ ಮಾಡಲು ಈ ಆಯ್ಕೆ ಮಾಡಿಕೊಂಡಿದ್ದೇನೆ’ ಎಂದು ಮನೋಹರ ತಹಸೀಲ್ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT