ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವರ ದಿಢೀರ್ ಭೇಟಿ: ಸಿಕ್ಕಿಬಿದ್ದ ಮಧ್ಯವರ್ತಿ

ಸರ್ಕಾರಿ ಕಚೇರಿಗಳಲ್ಲಿ ಅವ್ಯವಸ್ಥೆ : ತಿಂಗಳ ಗಡುವು ನೀಡಿದ ಶಿವಾನಂದ ಪಾಟೀಲ
Published 19 ಆಗಸ್ಟ್ 2024, 13:10 IST
Last Updated 19 ಆಗಸ್ಟ್ 2024, 13:10 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿಯ ತಹಶೀಲ್ದಾರ್, ಭೂ ಮಾಪನಾ ಇಲಾಖೆ ಹಾಗೂ ಉಪನೋಂದಣಾಧಿಕಾರಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಸೋಮವಾರ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. ಕಚೇರಿಗಳ ಅವ್ಯವಸ್ಥೆ ಕಂಡು ಗರಂ ಆದ ಸಚಿವ, ‘ತಿಂಗಳೊಳಗಾಗಿ ಅವ್ಯವಸ್ಥೆ ಸರಿಪಡಿಸದಿದ್ದರೆ, ಅಧಿಕಾರಿಗಳ ವಿರುದ್ಧವೇ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

ಉಪನೋಂದಣಾಧಿಕಾರಿ ಕಚೇರಿಗೆ ಸಚಿವರು ಭೇಟಿ ನೀಡಿದಾಗ, ಕಚೇರಿಯಲ್ಲೇ ಮಧ್ಯವರ್ತಿಯೊಬ್ಬ ಸಿಕ್ಕಿಬಿದ್ದ. ಆತ ಯಾರು ? ಎಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಧಿಕಾರಿ ಉತ್ತರಿಸಲು ತಡವರಿಸಿದರು. ‘ಕಚೇರಿ ಸ್ವಚ್ಛಗೊಳಿಸುವ ಸಿಬ್ಬಂದಿ, ಚಹಾ ತರಲು ಇದ್ದಾರೆ’ ಎಂದು ಅಧಿಕಾರಿ ಸಮರ್ಥನೆ ಮಾಡಿಕೊಂಡರು. ಉತ್ತರ ಸಮಂಜಸವಲ್ಲವೆಂದು ಸಚಿವರು ಗರಂ ಆದರು.

ಸಚಿವರು ಕಚೇರಿಗೆ ಭೇಟಿ ನೀಡುತ್ತಿದ್ದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುತಿನ ಚೀಟಿ ಧರಿಸಿದರು. ಆದರೆ, ಮಧ್ಯವರ್ತಿಗೆ ಗುರುತಿನ ಚೀಟಿ ಇರಲಿಲ್ಲ. ತಕ್ಷಣ ಸಚಿವರು ಆತನನ್ನು ಕಚೇರಿಯಿಂದ ಹೊರಗೆ ಕಳುಹಿಸಿದರು.

‘ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಕಚೇರಿಯೊಳಗೆ ಬಿಟ್ಟುಕೊಳ್ಳಬಾರದು. ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಇನ್ನು ಮುಂದೆ ಇಂತಹ ದೂರುಗಳಿಗೆ ಅವಕಾಶ ಇರಬಾರದು’ ಎಂದು ಎಚ್ಚರಿಸಿದರು.

ಸಾರ್ವಜನಿಕರ ದೂರಿಗೆ ಸ್ಪಂದನೆ: ‘ತಹಶೀಲ್ದಾರ್ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಾರ್ವಜನಿಕರ ಅರ್ಜಿಗಳು ಹಾಗೂ ಮನವಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ’ ಎಂದು ಆರೋಪಿಸಿ ಸಾರ್ವಜನಿಕರು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಶಿವಾನಂದ ಪಾಟೀಲ, ಮುನ್ಸೂಚನೆ ನೀಡದೇ ಕಚೇರಿಗಳಿಗೆ ಏಕಾಏಕಿ ಭೇಟಿ ನೀಡಿ, ಕಚೇರಿ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೂರು ಕಚೇರಿಗಳಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ದೂರುಗಳ ಸರಮಾಲೆಯೇ ಹರಿದು ಬಂತು. ಅಹವಾಲು ಆಲಿಸಿದ ಸಚಿವ ಶಿವಾನಂದ ಪಾಟೀಲ, ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮೂರು ಕಚೇರಿಗಳಲ್ಲಿ ಯಾವೆಲ್ಲ ಸಿಬ್ಬಂದಿ, ಎಷ್ಟು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ ? ಸಾರ್ವಜನಿಕರ ಕೆಲಸಗಳನ್ನು ನಿಗದಿತ ದಿನದೊಳಗೆ ಏಕೆ ಮಾಡಿಕೊಡುತ್ತಿಲ್ಲ? ಅವ್ಯವಸ್ಥೆ ಬಗ್ಗೆ ಜನರಿಂದ ಏಕೆ ದೂರುಗಳು ಬರುತ್ತಿವೆ ? ನಿಮ್ಮ ಕೆಲಸ ಏನು ? ದಾಖಲೆಗಳನ್ನು ಏಕೆ ನಿರ್ವಹಣೆ ಮಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಕಚೇರಿಗಳಲ್ಲಿದ್ದ ಅವ್ಯವಸ್ಥೆ ಕಂಡು ಗರಂ ಆದ ಸಚಿವರು, ‘ಒಂದು ತಿಂಗಳೊಳಗೆ ವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ, ನಿಮ್ಮ ವಿರುದ್ಧ (ತಹಶೀಲ್ದಾರ್ ಹಾಗೂ ಉಪ‍ ನೋಂದಣಾಧಿಕಾರಿ) ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರನ್ನು ವಿನಾಕಾರಣ ಕಚೇರಿಗಳಿಗೆ ಅಲೆಸಬೇಡಿ. ತಕ್ಷಣ ಅವರ ಕೆಲಸ ಮಾಡಿಕೊಡಿ, ಇಲ್ಲವಾದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ದಾಖಲಾಗದ ಅರ್ಜಿ ಮಾಹಿತಿ: ಭೂಮಾಪನಾ ಇಲಾಖೆ ಕಚೇರಿಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ, ಅಲ್ಲಿಯ ವ್ಯವಸ್ಥೆ ಕಂಡು ಗರಂ ಆದರು. ಸ್ಥಳದಲ್ಲಿ ಹಾಜರಿದ್ದ ರೈತರೊಬ್ಬರು, ‘ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದೇವೆ. ಇದು ಇಲಾಖೆಯಲ್ಲಿ ದಾಖಲಾಗಿಲ್ಲ’ ಎಂದು ಹೇಳಿದರು. ಅರ್ಜಿ ಇನ್‍ವಾರ್ಡ್ ಆಗಿರುವ ಬಗ್ಗೆ ಸಚಿವರು, ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಆದರೆ, ದಾಖಲಾತಿ ಆಗಿಲ್ಲವೆಂದು ತಿಳಿಯಿತು. ಸಚಿವರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

‘ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ. ಅರ್ಜಿಗಳ ದಾಖಲೆಗಳನ್ನೂ ನಿರ್ವಹಣೆ ಮಾಡುತ್ತಿಲ್ಲ. ಕಚೇರಿ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿ ವರದಿ ಕೊಡಿ’ ಎಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.

‘ಆಧಾರ್ ತಿದ್ದುಪಡಿ ಸರಿಯಾಗುತ್ತಿಲ್ಲ. ತಿದ್ದುಪಡಿ ಮಾಡಿಸಿದರೂ ಮತ್ತೆ ಅದೇ ಲೋಪ ಬರುತ್ತಿವೆ. ಪಡಿತರ ಚೀಟಿಗಳು ಐದು ವರ್ಷಗಳಿಂದ ಬಾಕಿ ಇವೆ. ಬೆಳೆ ವಿಮೆ ಬಿಡುಗಡೆಯಾಗಿಲ್ಲ. ಸಾಮಾಜಿಕ ಯೋಜನೆಯ ಪಿಂಚಣಿ ಸಕಾಲಕ್ಕೆ ಬರುತ್ತಿಲ್ಲ’ ಎಂಬುದಾಗಿ ಜನರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಇನ್ನು ಮುಂದೆ ಈ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ದೂರುಗಳು ಬಂದರೆ ಮುಲಾಜಿಲ್ಲದೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಶಾಸಕ ರುದ್ರಪ್ಪ ಲಮಾಣಿ, ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್ ಶಂಕರ್, ಎಡಿಎಲ್‍ಆರ್ ನಾಗರಾಜ ಚಕ್ರಸಾಲಿ, ಉಪನೋಂದಣಾಧಿಕಾರಿ ವಿದ್ಯಾಸಾಗರ ದೇವರುಷಿ ಹಾಜರಿದ್ದರು.

‘ಅರ್ಜಿ ಸ್ವೀಕರಿಸದ ತಹಶೀಲ್ದಾರ್’

ಕಚೇರಿಗೆ ಬಂದಿದ್ದ ರೈತರೊಬ್ಬರು ‘ಬೆಳೆ ವಿವರಣೆಯನ್ನು ಪಹಣಿ ಪತ್ರದಲ್ಲಿ ಸರಿಪಡಿಸಬೇಕು’ ಎಂದು ಕೋರಿ ರಾಣೆಬೆನ್ನೂರು ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದೆ. ಆದರೆ ಅವರು ಸ್ವೀಕರಿಸಿಲ್ಲ. ಉಪ ವಿಭಾಗಾಧಿಕಾರಿ ಕಚೇರಿಗೆ ಕಳುಹಿಸಿದ್ದಾರೆ’ ಎಂದು ದೂರಿದರು. ಸಮಸ್ಯೆ ಆಲಿಸಿದ ಸಚಿವ ಸಂಬಂಧಪಟ್ಟ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ ವಿಚಾರಣೆ ನಡೆಸಿದರು. ‘ರಾಣೆಬೆನ್ನೂರು ತಹಶೀಲ್ದಾರ್ ಕಚೇರಿ ನಿಮ್ಮ ಅಧೀನದಲ್ಲಿದೆ. ರೈತನ ಅರ್ಜಿ ಬಗ್ಗೆ ಏಕೆ ಗಮನ ಹರಿಸಲಿಲ್ಲ’ ಎಂದು ಉಪವಿಭಾಗಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT