ಮಂಗಳವಾರ, ಜೂನ್ 28, 2022
21 °C

ಒತ್ತಡದ ಬದುಕಿನಿಂದ ಮಾನಸಿಕ ರೋಗ: ಡಾ.ಪಿ.ಆರ್.ಹಾವನೂರ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಆಧುನಿಕ ಯುಗದ ನಿರಂತರ ಒತ್ತಡದ ಬದುಕಿನಿಂದ ಮನುಷ್ಯ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಹೇಳಿದರು.

ನಗರದ ಜಿ.ಎಚ್.ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ವಿಶ್ವ ಸ್ಕಿಜೋಪ್ರಿನಿಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ 15ರಿಂದ 30 ವರ್ಷ ವಯೋಮಾನದವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ ಎಂದರು.

ಇಂದು ಎಲ್ಲರೂ ತಂತ್ರಜ್ಞಾನಕ್ಕೆ ಅಂಟಿಕೊಂಡು ಅತಿಯಾದ ಆಲೋಚನೆಗೆ ಒಳಗಾಗಿ ಒಂದಿಲ್ಲೊಂದು ಮಾನಸಿಕ ರೋಗಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಗಳು ವಿವಿಧ ರೀತಿಯ ಮಾನಸಿಕ ಕಾಯಿಲೆಗೆ ಒಳಪಡುತ್ತಿದ್ದಾರೆ. ವಿದ್ಯಾಥಿಗಳು ಅತಿಯಾದ ಆಲೋಚನೆ ಮಾಡಬಾರದು ಹಾಗೂ ಮೊಬೈಲ್ ಬಳಕೆ ಕಡಿಮೆ ಮಾಡಿ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಬೇಕು. ರಾತ್ರಿ ಮಲಗುವ ಸಮಯದಲ್ಲಿ ದಿನಚರಿಯಲ್ಲಿ ನಡೆದ ವಿಷಯಗಳ ಬಗ್ಗೆ ಅತಿಯಾದ ಯೋಚನೆ ಒಳ್ಳೆಯದಲ್ಲ ಎಂದು ಸಲಹೆ ನೀಡಿದರು.

ಲಕ್ಷಣಗಳನ್ನು ಗುರುತಿಸಿ:

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಚನ್ನಬಸಯ್ಯ ವಿರಕ್ತಮಠ ಮಾತನಾಡಿ, ‘ಸ್ಕೀಜೊಪ್ರಿನಿಯಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಅರ್ಥವಿಲ್ಲದ ಮತ್ತು ಅಸಂಬದ್ಧ ಮಾತುಗಳು, ಸೂಕ್ತವಲ್ಲದ ಭಾವನೆಗಳನ್ನು ವ್ಯಕ್ತಪಡಿಸುವುದು, ಕಾರಣವಿಲ್ಲದೆ ಅಳುವುದು, ನಗುವುದು ಮತ್ತು ಕೋಪ ಮಾಡಿಕೊಳ್ಳುವುದು, ಭಾವನೆಗಳೇ ಇಲ್ಲದ ಹಾಗೆ ಇರುವುದು, ತನ್ನ ಲೋಕದಲ್ಲಿ ಒಂಟಿಯಾಗಿರುವುದು, ಇಲ್ಲದ ವಾಸನೆ ಇದೆ ಎನ್ನುವುದು, ಸ್ಪರ್ಶಾನುಭವ ಇಲ್ಲದಿರುವುದು, ಸ್ವಚ್ಛತೆ, ಹಸಿವು ಮತ್ತು ಬಾಯಾರಿಕೆ ಬಗ್ಗೆ ನಿರ್ಲಕ್ಷ್ಯ, ಕೆಲಸ ಕರ್ತವ್ಯಗಳನ್ನು ಮಾಡದೇ ಇರುವುದು ಕಂಡುಬರುತ್ತವೆ. ಈ ಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ ಎಂದು ಹೇಳಿದರು.

ಮನೋವೈದ್ಯ ಡಾ.ವಿಜಯಕುಮಾರ ಬಿ. ಉಪನ್ಯಾಸ ನೀಡಿ, ಸ್ಕಿಜೋಪ್ರಿನಿಯಾ ಒಂದು ಅನುಮಾನದ ಕಾಯಿಲೆಯಾಗಿದೆ, ಅನವಶ್ಯಕವಾಗಿ ಆಲೋಚನೆಗೆ ಒಳಪಡಿಸುತ್ತದೆ. ಆದರೆ ರೋಗಿಯನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ಇದೊಂದು ಅನುವಂಶಿಕ ರೋಗವಾಗಿದ್ದು ವಂಶವಾಹಿಯಾಗಿ ಶೇ 10ರಷ್ಟು ಮಕ್ಕಳಿಗೆ ಭಾಧಿಸಿದರೆ, ಶೇ 90ರಷ್ಟು ಇದರ ಲಕ್ಷಣಗಳು ಕಂಡುಬರುವುದಿಲ್ಲ ಎಂದು ಹೇಳಿದರು.

ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಡಿ.ಎ. ಕೊಲ್ಹಾಪುರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಪ್ರಭಾಕರ ಕುಂದೂರು, ಡಾ.ಜೆ.ಎಫ್. ಹೊಸಮನಿ, ಪ್ರೊ.ನಾಗರತ್ನ ಇದ್ದರು. ಪ್ರೊ.ಎಸ್.ಎಸ್. ಸಣ್ಣಶಿವಣ್ಣನವರ ಸ್ವಾಗತಿಸಿದರು. ಯಲ್ಲಪ್ಪ ಓಬಣ್ಣನವರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು