ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಕಿಟ್: ಕಾರ್ಮಿಕರ ಆಕ್ರೋಶ

Last Updated 29 ಮಾರ್ಚ್ 2023, 15:56 IST
ಅಕ್ಷರ ಗಾತ್ರ

ಹಾವೇರಿ: ‘ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ಕಿಟ್‌ ವಿತರಿಸುವುದಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ನಮ್ಮನ್ನು ಕರೆಸಿ, ಕಿಟ್‌ ನೀಡುತ್ತಿಲ್ಲ’ ಎಂದು ಆರೋಪಿಸಿ ನೂರಾರು ಕಾರ್ಮಿಕರು ನಗರದ ಗುತ್ತಲ ರಸ್ತೆಯ ಎಪಿಎಂಸಿ ಬಳಿ ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಹಾವೇರಿ ಜಿಲ್ಲೆಯಲ್ಲಿ 2.50 ಲಕ್ಷಕ್ಕೂ ಅಧಿಕ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದಾರೆ. ಆದರೆ, ಕಾರ್ಮಿಕ ಇಲಾಖೆ ಕೇವಲ 2,000 ವಿದ್ಯಾರ್ಥಿ ಕಿಟ್‌ಗಳನ್ನು ಜಿಲ್ಲೆಗೆ ರವಾನಿಸಿ, ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಕಿಟ್‌ನಲ್ಲಿ ಬ್ಯಾಗ್, ನೋಟ್‌ಬುಕ್, ಜರ್ಕಿನ್, ಮತ್ತಿತರ ವಸ್ತುಗಳನ್ನು ಕಳುಹಿಸಿದೆ. ಇಲಾಖೆ ಸೂಚನೆಯಂತೆ ಅಧಿಕಾರಿಗಳು ಮಾರ್ಚ್‌ 28, 29ರಂದು ಕಿಟ್ ವಿತರಿಸುವುದಾಗಿ ನೋಂದಾಯಿತ ಸದಸ್ಯರಿಗೆ ಸಂದೇಶ ರವಾನಿಸಿದ್ದರು.

ಜಿಲ್ಲೆಯ ಶಿಗ್ಗಾವಿ, ಸವಣೂರು, ಹಾವೇರಿ ಮತ್ತಿತರ ತಾಲ್ಲೂಕಿನ ಸಾವಿರಾರು ಜನರು ಮಾರ್ಚ್‌ 28ರಂದೇ ಎಪಿಎಂಸಿ ಕಡೆ ಜಮಾಯಿಸಿದ್ದರು. ಕೆಲವರಿಗೆ ಮಾತ್ರ ಕಿಟ್ ಹಂಚಿದ್ದು, ಉಳಿದವರಿಗೆ ಮಾರ್ಚ್‌ 29ರಂದು ಕೊಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ವಿದ್ಯಾರ್ಥಿ ಕಿಟ್‌ಗಾಗಿ ಕಾರ್ಮಿಕ ಕುಟುಂಬದವರು ರಾತ್ರಿಯಿಡೀ ಕಾದು ಕುಳಿತು, ಮುಂಜಾನೆಗೆ ಸರದಿಯಲ್ಲಿ ನಿಂತಿದ್ದಾರೆ. ಆ ವೇಳೆಗೆ ಕಿಟ್‌ಗಳು ಖಾಲಿಯಾಗಿವೆ ಎಂಬ ವಿಷಯ ಗೊತ್ತಾಗಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡರು. ಅರ್ಹರಾದ ಎಲ್ಲರಿಗೂ ಕಿಟ್‌ ವಿತರಿಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಅಧಿಕಾರಿಗಳು ಹಾಗೂ ಕಾರ್ಮಿಕರ ನಡುವೆ ಮಾತಿನ ಚಕಮಕಿ ಆಯಿತು. ಸದ್ಯ ನೀತಿಸಂಹಿತೆ ಜಾರಿಯಾಗಿದ್ದು, ನೀತಿ ಸಂಹಿತೆ ಮುಗಿದ ಬಳಿಕ ಹಂಚಿಕೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದರು.

ಮಧ್ಯ ಪ್ರವೇಶಿಸಿದ ಹಾವೇರಿ ಶಹರ ಠಾಣೆ ಸಿಪಿಐ ಸುರೇಶ ಸಗರಿ ಹಾಗೂ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ತಹಶೀಲ್ದಾರ್ ಗಿರೀಶ ಸ್ವಾದಿ ಅವರ ತಂಡ ಗೋದಾಮಿನಲ್ಲಿದ್ದ 135 ಕಿಟ್‌ಗಳನ್ನು ವಶಕ್ಕೆ ಪಡೆಯಿತು.

2 ಸಾವಿರ ಕಿಟ್‌:

‘ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯಿಂದ 2 ಸಾವಿರ ಕಿಟ್ ಬಂದಿದ್ದವು. ನೀತಿಸಂಹಿತೆ ಜಾರಿಯಾಗುವ ಮುಂಚೆಯೇ ಎಂಟು ತಾಲ್ಲೂಕುಗಳಿಗೆ ತಲಾ 250 ಕಿಟ್ ವಿತರಿಸಲು ಮುಂದಾಗಿದ್ದೆವು. ರಾಣೆಬೆನ್ನೂರು ಮೂಲಕ ಹಂಚಿಕೆ ಮಾಡಲು ಸಾವಿರ ಕಿಟ್ ರವಾನಿಸಲಾಗಿತ್ತು. ಉಳಿದ ಕಿಟ್ ಹಾವೇರಿಯಲ್ಲಿ ಹಂಚುವಷ್ಟರಲ್ಲಿ ಸಾವಿರಕ್ಕೂ ಅಧಿಕ ಜನ ಬಂದಿದ್ದರಿಂದ ಸಮಸ್ಯೆ ಉಂಟಾಯಿತು’ ಎಂದು
ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT