ಅಕ್ಕಿಆಲೂರ: ಹಾನಗಲ್ ತಾಲ್ಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಗೆ ಶಾಸಕ ಶ್ರೀನಿವಾಸ ಮಾನೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿ, ಸೌಲಭ್ಯಗಳ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳ ಕುಂದು, ಕೊರತೆ ಆಲಿಸಿದರು.
ಮೈದಾನದಲ್ಲಿ ಆಟವಾಡುತ್ತಿದ್ದ ಮಕ್ಕಳತ್ತ ತೆರಳಿ ಆತ್ಮೀಯವಾಗಿ ಮಾತನಾಡಿಸಿದರು. ಶಾಲೆಯಲ್ಲಿ ಲಭ್ಯ ಸೌಲಭ್ಯಗಳೇನಿವೆ?, ಊಟ ಹೇಗಿರುತ್ತದೆ?, ಶಿಕ್ಷಣ ವ್ಯವಸ್ಥೆ ಹೇಗಿದೆ? ಎಂದೆಲ್ಲಾ ಕೇಳಿ ತಿಳಿದರು. ಕಂಪ್ಯೂಟರ್ ಇಲ್ಲ, ನೋಟ್‍ಬುಕ್ ಸಪ್ಲೈ ಆಗಿಲ್ಲ, ಡೆಸ್ಕ್ ವ್ಯವಸ್ಥೆ ಆಗಬೇಕು ಎಂದು ವಿದ್ಯಾರ್ಥಿನಿಯರು ವಿನಂತಿಸಿದಾಗ ಸ್ಪಂದಿಸಿದರು.
ಶಾಲೆಯ ಆವರಣದಲ್ಲಿನ ಸುಸಜ್ಜಿತ ಸಿಬ್ಬಂದಿ ವಸತಿ ನಿಲಯಗಳನ್ನು ನಿರ್ಮಿಸಿದ್ದರೂ ಕೂಡ ಅನೇಕ ಶಿಕ್ಷಕರು ಉಳಿದುಕೊಳ್ಳುತ್ತಿಲ್ಲವೇಕೆ? ಈ ಕುರಿತು ನಿಮ್ಮ ಗಮನಕ್ಕಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಾಚಾರ್ಯೆ ಎಸ್.ಜಿ.ಮುಂಡರಗಿ ಅವರನ್ನು ಪ್ರಶ್ನಿಸಿ, ಕೂಡಲೇ ನೋಟಿಸ್ ನೀಡಿ. ಎಲ್ಲರೂ ಇಲ್ಲಿಯೇ ಉಳಿದು ಮಕ್ಕಳ ಮೇಲೆ ನಿಗಾ ವಹಿಸುವಂತೆ ಕ್ರಮ ಕೈಗೊಳ್ಳಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು.
ನೀರಿನ ಸಮಸ್ಯೆ ಕುರಿತು ಗಮನ ಸೆಳೆದಾಗ ಜೆಜೆಎಂ ಅಡಿ ನೀರಿನ ಸಂಪರ್ಕ ಕಲ್ಪಿಸುವಂತೆ ಸ್ಥಳದಲ್ಲಿದ್ದ ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಮಾಳಾಪೂರ, ಉಪಾಧ್ಯಕ್ಷೆ ನನ್ನಿಮಾಬಿ ಬಡಗಿ ಅವರಿಗೆ ಸೂಚಿಸಿ, ಮತ್ತೊಂದು ಕೊಳವೆ ಬಾವಿ ಕೊರೆಸುವ ಭರವಸೆ ನೀಡಿದರು. ವಸತಿ ನಿಲಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯರ ಸಹಕಾರ ಪಡೆಯಿರಿ. ಗ್ರಾಪಂ ಅಧ್ಯಕ್ಷರಿಗೆ ಲಿಖಿತ ಬೇಡಿಕೆ ಸಲ್ಲಿಸಿ. ಡೆಸ್ಕ್, ನೋಟ್‍ಬುಕ್ ಸಪ್ಲೈ ಆಗದಿರುವ ಬಗೆಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಿರಿ ಎಂದು ಪ್ರಾಚಾರ್ಯರಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ ಅವರಿಗೆ ಕರೆ ಮಾಡಿ, ಶಾಲೆಯಲ್ಲಿ ಡ್ರೈನೇಜ್ ವ್ಯವಸ್ಥೆ ಸರಿ ಇಲ್ಲ. ಪಕ್ಕದಲ್ಲಿಯೇ ಹೊಂಡವಿರುವುದರಿಂದ ಮಕ್ಕಳ ಸುರಕ್ಷತೆ ಸವಾಲಿನಿಂದ ಕೂಡಿದೆ. ಉಪ ನಿರ್ದೇಶಕರೊಂದಿಗೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಕ್ಕೆ ವಿನಂತಿಸಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು.
ಸುರೇಶ ನಾಗೋಜಿ, ಮಕ್ಬೂಲ್‍ಅಹ್ಮದ್ ಬಡಗಿ, ಅಶೋಕ ಜಾಧವ್, ರಾಮಚಂದ್ರ ಓಲೇಕಾರ, ಇಸ್ಮೈಲ್ ಬಡಗಿ, ಪ್ರಭುಗೌಡ ಪಾಟೀಲ, ಕೃಷ್ಣಾಜಿ ನಾಗೋಜಿ, ಹೆಗ್ಗಪ್ಪ ಕಾಮನಹಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.