ರಟ್ಟೀಹಳ್ಳಿ: ‘ತಾಲ್ಲೂಕಿನಲ್ಲಿ ಹಾದುಹೋಗಿರುವ ತುಂಗಾ ಮೇಲ್ದಂಡೆ ಯೋಜನೆ ಮುಖ್ಯಕಾಲುವೆ ನಿರ್ಮಾಣಗೊಂಡು 23 ವರ್ಷಗಳಾಗಿವೆ. ಕೆಲವೊಂದು ಭಾಗದಲ್ಲಿ ಕಾಲುವೆ ಒಡೆದು ಹೊಲಗಳಿಗೆ ನೀರು ನುಗ್ಗಿ ರೈತರ ಬೆಳೆಗಳು ಹಾಳಾಗುತ್ತಿವೆ. ₹39.43 ಕೋಟಿ ಲಕ್ಷ ವೆಚ್ಚದಲ್ಲಿ ಮುಖ್ಯಕಾಲುವೆ ಅಭಿವೃದ್ಧಿಪಡಿಸಲು ಸರ್ಕಾರದಿಂದ ಅನುಮತಿ ದೊರೆತಿದೆ’ ಎಂದು ಶಾಶಕ ಯು.ಬಿ.ಬಣಕಾರ ಹೇಳಿದರು.
ತಾಲ್ಲೂಕಿನ ಜೋಕನಾಳ ಗ್ರಾಮದ ಹತ್ತಿರ ಐತಿಹಾಸಿಕ ಭಗವತಿ ಕೆರೆಗೆ ಭಾನುವಾರ ಬಾಗಿನ ಅರ್ಪಿಸಿ, ಮಾಯಮ್ಮದೇವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ತುಂಗಾ ಮೇಲ್ದಂಡೆ ಮುಖ್ಯಕಾಲುವೆ ನಿರ್ವಹಣೆ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವುದು ಯೋಜನೆಯಲ್ಲಿ ಸೇರಿಸಲಾಗಿದೆ. ಐತಿಹಾಸಿಕ ಭಗವತಿ ಕೆರೆಯ ವಿಸ್ತೀರ್ಣ ಗುರುತಿಸಿ ಹದ್ದುಬಸ್ತ ಮಾಡಿ, ಕೆರೆಯ ಹೂಳೆತ್ತೆಲಾಗುವುದು. ಒಂದು ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಗ್ರಾಮದ ನಾಗರೀಕರೊಂದಿಗೆ ಚರ್ಚಿಸಿ ಕೆರೆಯ ಸಮಗ್ರ ಅಭಿವೃದ್ಧಿ ಜೊತೆಗೆ ಪ್ರವಾಸಿ ತಾಣವನ್ನಾಗಿಸಲು ಯೋಜನೆ ಸಿದ್ಧಪಡಿಸಲಾಗುವುದು’ ಎಂದರು.
ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಮಾತನಾಡಿ, ‘ಜೋಕನಾಳ ಗ್ರಾಮದ ಭಗವತಿ ಕೆರೆ, ಪ್ರಕೃತಿಯೇ ಸೃಷ‍್ಠಿಸಿದ ರಮ್ಯತಾಣ. ನಿಸರ್ಗದತ್ತವಾದ ಈ ಕ್ಷೇತ್ರ ನೀರಾವರಿಗೆ ಅತ್ಯಂತ ಯೋಗ್ಯವಾಗಿದೆ. ತಾಲ್ಲೂಕಿನ ಮದಗದ ಕೆಂಚಮ್ಮನ ಕೆರೆ, ಹಾಗೂ ಜೋಕನಾಳ ಭಗವತಿ ಕೆರೆ ನೀರಾವರಿ ಜೊತೆಗೆ ಪ್ರವಾಸಿತಾಣವಾಗಿ ಬೆಳೆಯಲಿಕ್ಕೆ ಯೋಗ್ಯವಾಗಿದೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ.ಬಸನಗೌಡ್ರ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪ್ರಕಾಶ ಬನ್ನಿಕೋಡ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಮಂಜಮ್ಮ, ಸದಸ್ಯ ಬಸಣ್ಣ, ಮುಖಂಡರಾದ ನಿಂಗಪ್ಪ ಚಳಗೇರಿ, ರವೀಂದ್ರ ಮುದಿಯಪ್ಪನವರ, ಪರಮೇಶಪ್ಪ ಕಟ್ಟೇಕಾರ, ಫಕ್ಕೀರಪ್ಪ ತಮ್ಮಣ್ಣನವರ, ವಕೀಲ ಎಸ್.ಬಿ.ತಿಪ್ಪಣ್ಣನವರ, ರಾಮಣ್ಣ ಗೌರಕ್ಕನವರ, ವಕೀಲರ ಸಂಘದ ಕಾರ್ಯದರ್ಶಿ ಮಾರುತಿ ಜೋಕನಾಳ, ಮಹೇಶ ಗುಬ್ಬಿ, ಸುಜಾತಾ ಬಳೂಲ, ಮಂಜು ಮಾಸೂರು, ಮಂಜು ಎಲಿವಾಳ, ಸಿ.ಎಂ.ತುಮ್ಮಿನಕಟ್ಟಿ, ಬಿರೇಶ ಕರಡೆಣ್ಣನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.