ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಪ್ರೋಗ್ರೆಸ್ ವರ್ಸಸ್ ಕಾಂಗ್ರೆಸ್: ಶಿವಕುಮಾರ ಉದಾಸಿ

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್’ ಆಯ್ಕೆಯ ನಿರೀಕ್ಷೆಯಲ್ಲಿರುವ ಬಿಜೆಪಿ ಅಭ್ಯರ್ಥಿ
Last Updated 30 ಏಪ್ರಿಲ್ 2019, 16:33 IST
ಅಕ್ಷರ ಗಾತ್ರ

ಹಾವೇರಿ: ಇದು ‘ಪ್ರೋಗ್ರೆಸ್‌ (ಅಭಿವೃದ್ಧಿ) ವರ್ಸಸ್ ಕಾಂಗ್ರೆಸ್’ ನಡುವಿನ ಚುನಾವಣೆ. ಈ ಬಾರಿ ಮೋದಿ ವಿಶ್ವಾಸರ್ಹತೆ, ಕೇಂದ್ರದ ಯೋಜನೆಗಳ ಫಲ, ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಭದ್ರತೆ, ಅಭಿವೃದ್ಧಿಗಳಿಗೆ ಜನಾಶೀರ್ವಾದ ಸಿಗಲಿದೆ ಎಂದು ‘ಪ್ರಜಾವಾಣಿ’ ಜೊತೆ ಮಾತಿಗಳಿದವರು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ. ಹ್ಯಾಟ್ರಿಕ್ ಯತ್ನದ ಅವರ ಮಾತುಗಳು ಇಲ್ಲಿವೆ.

*ಈ ಬಾರಿ ಚುನಾವಣೆ ಹೇಗಿದೆ?

ಇದು ದೇಶದ ‘pro and con’ (ಸಾಧಕ–ಬಾಧಕಗಳ) ಚರ್ಚೆ. ‘ಪ್ರೋಗ್ರೆಸ್ ಮತ್ತು ಕಾಂಗ್ರೆಸ್’ ನಡುವಿನ ಚುನಾವಣೆ. ಮೋದಿ ನೀಡಿದಪ್ರೋಗ್ರೆಸ್ (ಅಭಿವೃದ್ಧಿ) ಹಾಗೂ ಬಾಧಕ ಕಾಂಗ್ರೆಸ್ ನಡುವಿನ ಸಮರ. ನಾವು ಅಭಿವೃದ್ಧಿಯ ಕೊಡ ಅರ್ಧ ತುಂಬಿದೆ, ಇನ್ನರ್ಧ ತುಂಬಿಸಲು ಅವಕಾಶ ಕೊಡಿ ಎನ್ನುತ್ತಿದ್ದೇವೆ. ಅವರು, ಕೊಡ ಅರ್ಧ ಖಾಲಿ ಇದೆ. ಫೂರ್ತಿ ಖಾಲಿ ಮಾಡಲು ಅವಕಾಶ ಕಲ್ಪಿಸಿ ಎನ್ನುತ್ತಿದ್ದಾರೆ.

*2014ರ ಬಿಜೆಪಿ ಭರವಸೆಗಳು ಏನಾಗಿವೆ?

ಗುಜರಾತ್ ಮಾದರಿ ಅಭಿವೃದ್ಧಿ, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯನ್ನು ಮೋದಿ ನೀಡಿದ್ದರು. ಅಭಿವೃದ್ಧಿ ಯೋಜನೆಗಳು ಆರಂಭಗೊಂಡಿವೆ. ಸೋರಿಕೆಗೆ ತಡೆ ಬಿದ್ದಿದೆ. ಭ್ರಷ್ಟಾಚಾರ ನಡೆದಿಲ್ಲ. ಆರಂಭಿಕ ಹಂತ (1ಜಿ, 2ಜಿ, 3ಜಿ) ಯಶಸ್ವಿಯಾಗಿದೆ. ‘5 ಜಿ’ ಗಾಗಿ ನೀಡಲು ಜನಾದೇಶ ಕೇಳುತ್ತಿದ್ದೇವೆ.

*ನಿಮ್ಮ ಕೊಡುಗೆಗಳೇನು?

ಆಯುಷ್ಮಾನ್ ಭಾರತ್, ಉಜ್ವಲ, ಕಿಸಾನ್ ಸಮ್ಮಾನ್, ಆವಾಸ್, ವಿಮಾ ಯೋಜನೆ, ಫಸಲ್‌ ಬಿಮಾ, ಜನ್‌ ಧನ್ ಮತ್ತಿತರ ಯೋಜನೆಗಳು ಫಲಾನುಭವಿಗಳಿಗೆ ತಲುಪಿವೆ. ಹಳ್ಳಿಯಲ್ಲಿ ಅಜ್ಜಿಯೊಬ್ಬರು ಅಡುಗೆ ಅನಿಲಕ್ಕೆ ಹಾಗೂ ಹಿರಿಯ ರೈತರೊಬ್ಬರು ವಿಮೆಯಿಂದ ನೆರವಾದ ಬಗ್ಗೆ ಕೃತಜ್ಞತೆ ಹೇಳಿದರು. ಹಲವು ಹಳ್ಳಿಗಳಲ್ಲಿಈ ಅನುಭವವಾಗಿದೆ. ಈ ನೆಮ್ಮದಿಯೇ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’.

ಕ್ಷೇತ್ರದಲ್ಲಿ 1.92 ಲಕ್ಷ ಜನರಿಗೆ ಉಜ್ವಲ ಯೋಜನೆ, 815 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, ₹260 ಕೋಟಿ ನೆರವು, ಪಾಸ್‌ ಪೋರ್ಟ್ ಸೇವಾ ಕೇಂದ್ರ, 20 ರೈಲ್ವೆ ಸೇತುವೆಗಳು, ರೈಲು ನಿಲ್ದಾಣಗಳ ಅಭಿವೃದ್ಧಿ, ಹಳಿ ಡಬ್ಲಿಂಗ್ ಸೇರಿದಂತೆ ದೊಡ್ಡ ಪಟ್ಟಿಯೇ ಇದೆ.

*ದೇಶದ ಭದ್ರತೆ ಬಗ್ಗೆ ಬಿಜೆಪಿ ಪದೇ ಪದೇ ಪ್ರಸ್ತಾಪಿಸುತ್ತಿದೆಯಲ್ಲಾ?

ಒಂದನೇ ತರಗತಿಗೆ ಸೇರಿದ ಬಾಲಕನೂ, ದೇಶಕ್ಕೆ ಮೊದಲ ಆದ್ಯತೆ ಎನ್ನುತ್ತಾನೆ. ಆದರೆ, ಕಾಂಗ್ರೆಸಿಗರು ಮಾತ್ರ, ‘ದೇಶದ್ರೋಹಿ ಕಾಯಿದೆ’ಯನ್ನೇ ಹಿಂತೆಗೆದುಕೊಳ್ಳುತ್ತೇವೆ ಎನ್ನುತ್ತಾರಲ್ಲಾ... ಜನತೆ ಸಹಿಸುತ್ತಾರಾ... ಭಯೋತ್ಪಾದನೆಗೆ ಪ್ರೋತ್ಸಾಹವನ್ನು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.

*ಆಡಳಿತ ವಿರೋಧಿ ಅಲೆ ಇದೆಯಾ?

ಈ ಬಾರಿ ರಾಜ್ಯ ಸಮ್ಮಿಶ್ರ ಸರ್ಕಾರ ವಿರೋಧಿ ಅಲೆ ಇದೆ. ಅಲ್ಲದೇ, ಮೋದಿ ಪರ ಅಲೆ ಇದೆ. 2009ರಲ್ಲಿ ಕೇಂದ್ರದ ಯುಪಿಎ–1ರ ವಿರೋಧ ಹಾಗೂ ಬಿ.ಎಸ್. ಯಡಿಯೂರಪ್ಪ ಆಡಳಿತದ ಪರ ಅಲೆ ಇತ್ತು. 2014ರಲ್ಲಿ ಯುಪಿಎ–2 ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು.

*ಗೆದ್ದರೆ ನಿಮ್ಮ ಮೊದಲ ಆದ್ಯತೆಗಳು ಯಾವುವು?

ಕ್ಷೇತ್ರದಲ್ಲಿ– ಕೃಷಿ, ನೀರಾವರಿ, ಕೆರೆಗಳಿಗೆ ನೀರು, ಆಹಾರ–ಜವಳಿ ಪಾರ್ಕ್, ಗದಗದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಿಸುವ ಯೋಜನೆ ಇದೆ. ಕೇಂದ್ರದಲ್ಲಿ– ಸುಭದ್ರ ರಾಷ್ಟ್ರ, ಸಶಕ್ತ, ಬಲಿಷ್ಠ, ಸದೃಢ, ನವಭಾರತ ನಿರ್ಮಾಣದ ಕನಸು ಸಾಕಾರ ಮಾಡಬೇಕಾಗಿದೆ.

*ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತೀರಲ್ಲಾ?

ಕಾಂಗ್ರೆಸ್‌ ಮುಕ್ತ ಭಾರತ ಎಂದರೆ, ವಿರೋಧ ಪಕ್ಷವಾಗಿ ಕಾಂಗ್ರೆಸ್ ಇರಬೇಕು. ಆದರೆ, ‘ಕಾಂಗ್ರೆಸ್ ಸಂಸ್ಕೃತಿ’ ಹೋಗಬೇಕು ಎಂದರ್ಥ. ‘ಹಸಿ ಸುಳ್ಳು, ಕಾಮಲೆ ಕಣ್ಣು, ಹಿತ್ತಾಳೆ ಕಿವಿ, ಬಾಡಿಗೆ ಬುದ್ಧಿ’ಯಿಂದ ಕಾಂಗ್ರೆಸಿಗರು ಮುಕ್ತ ಆಗಬೇಕು.

*ಕಾಂಗ್ರೆಸ್ ಅಭ್ಯರ್ಥಿ ಗದಗಿನವರು. ಈ ಬಗ್ಗೆ ಏನು ಹೇಳುತ್ತೀರಿ?

ಗದಗ ರೈಲ್ವೆ ನಿಲ್ದಾಣ, 4 ಪಥ ರಾಷ್ಟ್ರೀಯ ಹೆದ್ದಾರಿ, 198 ಕೋಟಿ ಅಮೃತ್ ಸಿಟಿ ಮತ್ತಿತರ ಕೆಲಸಗಳು ನಡೆದಿವೆ. ಆದರೆ, ಕೇಂದ್ರದಿಂದ ‘ಕೇಂದ್ರೀಯ ವಿದ್ಯಾಲಯ’ ಮಂಜೂರಾದರೂ, ಇವರ ಸಹೋದರರೇ ಸಚಿವರಾಗಿದ್ದು, 10 ಎಕರೆ ಜಮೀನು ನೀಡಲಿಲ್ಲ. ವಿಕೇಂದ್ರೀಕರಣದ ಡಿ.ಆರ್‌. ಪಾಟೀಲರು ಸಂಸದರಾಗಿ ಆಗಿ ಕೆಲಸ ಮಾಡಲು ಸಾಧ್ಯವೇ? ರಾಹುಲ್ ಗಾಂಧಿ ಜನಿವಾರ ಹಾಕಿ, ಕುಲ, ಗೋತ್ರ ಹೇಳಿಕೊಂಡು ದೇವಸ್ಥಾನಕ್ಕೆ ಹೋದ ಹಾಗಾಯ್ತು....

* ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬದಲಾದ ಬಗ್ಗೆ?

ಅಭ್ಯರ್ಥಿ ಆಯ್ಕೆ ಅವರ ಆಂತರಿಕ ವಿಚಾರ. ಜನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅನ್ನು ಸೋಲಿಸಿದ್ದಾರೆ. ಆದರೆ, ಕಾಂಗ್ರೆಸಿಗರು ಮಾತ್ರ ‘ಈ ಹಿಂದಿನ ಅಭ್ಯರ್ಥಿ ಎರಡು ಬಾರಿ ಸೋತಿದ್ದಾರೆ’ ಎಂದು ಭಾವಿಸಿದ್ದಾರೆ. ಜನತೆ ತೀರ್ಮಾನ ನೀಡುತ್ತಾರೆ. ದೇಶಕ್ಕಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT