ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೂಡೋ’ದಲ್ಲಿ ನಯನಾ ಮಿಂಚು

Last Updated 25 ಜೂನ್ 2019, 19:30 IST
ಅಕ್ಷರ ಗಾತ್ರ

‌ತುಮ್ಮಿನಕಟ್ಟೆ: ಜೂಡೋ ಎಂದ ಕೂಡಲೇ ಅದೊಂದು ಹುಡುಗರ ಆಟ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಾಮಾನ್ಯ. ಆದರೆ, ಗ್ರಾಮದ ಬಿಎಸ್ಸಿ ವಿದ್ಯಾರ್ಥಿನಿ ನಯನಾ ಜೂಡೋದಲ್ಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆ ಮಾಡಿ ಎಲ್ಲರಲ್ಲೂ ಬೆರಗು ಮೂಡಿಸಿದ್ದಾರೆ.

ತಮ್ಮ ಹವ್ಯಾಸದ ಕಲೆಯಾಗಿದ್ದ ಜೂಡೋವನ್ನೇ ಪ್ರತಿಭಾ ಪ್ರದರ್ಶನಕ್ಕೆ ಮೆಟ್ಟಿಲು ಮಾಡಿಕೊಂಡ ಅವರು, ಸದ್ಯ ದಾವಣಗೆರೆಯ ಡಿಆರ್‌ಆರ್ ಪ್ರಥಮ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

‘ಜೂಡೋವನ್ನು ಕ್ರೀಡೆಯನ್ನಾಗಿ ಮಾತ್ರ ನೋಡದೆ, ಮನೋರಂಜನೆಯ ರೂಪದಲ್ಲೂ ಬಳಸುವ ಕಲೆ ನಯನಾಳಿಗೆ ಸಿದ್ಧಿಸಿದೆ. ಆಕೆ ಅಖಾಡಕ್ಕೆ ಇಳಿದು ಲಯ ಕಂಡುಕೊಂಡರೆ, ವಿವಿಧ ಪಟ್ಟು ಹಾಗೂ ವರಸೆಗಳನ್ನು ಬಳಸಿ ಎದುರಾಳಿಯ ಬೆವರಳಿಸುತ್ತಾಳೆ’ ಎಂದು ತರಬೇತುದಾರ ಡಿ.ಬಿ.ಮಿಥುನ್ ಹೇಳುತ್ತಾರೆ.

‘ನಾನು ಹರಿಹರ ತಾಲ್ಲೂಕಿನ ಹೊಸಹಳ್ಳಿ ಎಸ್‌.ಜೆ.ವಿ.ಆರ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಾಗ, ಬೆಂಗಳೂರಿನಿಂದ ಜೂಡೋ ತರಬೇತುದಾರರೊಬ್ಬರು ಬಂದಿದ್ದರು. ಅವರ ಬಳಿ ಅಭ್ಯಾಸ ಮಾಡಿದಾಗ ಜೂಡೋ ಬಗ್ಗೆ ಅತಿಯಾದ ಆಸಕ್ತಿ ಬೆಳೆಯಿತು. ಅದೇ ನನ್ನ ಗುರಿಯೂ ಆಯಿತು. ಸತತ ಅಭ್ಯಾಸ ನಡೆಸಿ, ಜೂಡೋದಲ್ಲಿ ಪಳಗಿದೆ. ಸ್ಥಳೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಬಹುಮಾನಗಳನ್ನೂ ಗೆದ್ದುಕೊಂಡೆ’ ಎನ್ನುತ್ತಾರೆ ನಯನಾ.

‘ನಂತರ ಶಿಕಾರಿಪುರದ ಕೆಎಸ್‍ಸಿ ಪಿಯು ಕಾಲೇಜಿನಲ್ಲೂ ಕ್ರೀಡಾ ಚಟುವಟಿಕೆ ಮುಂದುವರಿಸಿದೆ. ಅಲ್ಲಿ ತರಬೇತುದಾರರಾದ ಸಮೀರ್ ಅವರ ಪ್ರೋತ್ಸಾಹ ಸಿಕ್ಕಿತು.ವಾಲ್ಮೀಕಿ ಜೂಡೋ ಕ್ಲಬ್‍ ತರಬೇತುದಾರ ಮಿಥುನ್ ಡಿ.ಬಿ. ಅವರ ಪರಿಚಯ ಬೆಳೆಯಿತು. ಅವರ ಗರಡಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲೂ ಭಾಗಿಯಾಗುವಷ್ಟರ ಮಟ್ಟಕ್ಕೆ ಪಳಗಿದೆ’ ಎಂದರು.

‘2016–17ರಲ್ಲಿ ಕಲಬುರ್ಗಿಯಲ್ಲಿ ನಡೆದ ರಾಜ್ಯ ಮಟ್ಟದ ಜೂಡೋ ಸ್ಪರ್ಧೆಯಲ್ಲಿ ಚಿನ್ನ ಪಡೆದೆ. ನಂತರ 2017–18ರಲ್ಲಿ ಹರಿದ್ವಾರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ದ್ವಿತೀಯ ಸ್ಥಾನ ದೊರೆಯಿತು. ಯೂಟ್ಯೂಬ್‌ನಲ್ಲೂ ಜೂಡೋ ಕಲೆ ನೋಡಿ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ವಿವರಿಸಿದರು.

‘ನಯನಾ ಜೂಡೋದಲ್ಲಿ ವಿಶೇಷ ತಂತ್ರಗಾರಿಕೆಗಳನ್ನು ಕರಗತ ಮಾಡಿಕೊಂಡಿದ್ದಾಳೆ. ಅವು ಇತರೆ ಕ್ರೀಡೆಗಳಿಗೂ ಅನುಕೂಲವಾಗುತ್ತಿವೆ. ಕಬಡ್ಡಿ ಪಂದ್ಯಾವಳಿಯಲ್ಲಿ ಆಕೆ ಸೋತ ಉದಾಹರಣೆಯೇ ಇಲ್ಲ’ ಎನ್ನುತ್ತಾರೆಅವರ ಆಪ್ತ ಸ್ನೇಹಿತೆ ವಿನೂತಾ ಹೊಂಗಲ್.

ಗರಡಿ ಮನೆಯಲ್ಲಿ ಕಸರತ್ತು: ಮನೆ ಹತ್ತಿರವೇ ಗರಡಿ ಮನೆ ಇದೆ. ಗ್ರಾಮದ ಪೈಲ್ವಾನ್ ಕೃಷ್ಣಪ್ಪ ಜಾಧವ ಅವರು ಅಲ್ಲಿ ಯುವಕರಿಗೆ ಕುಸ್ತಿ ತರಬೇತಿ ನೀಡುತ್ತಾರೆ. ನಾನು ಜೂಡೋದಲ್ಲಿ ಪ್ರಶಸ್ತಿ ಬಾಚಲು ಅವರ ತರಬೇತಿ ನೆರವಾಯಿತು’ ಎಂದು ನೆನಪಿಸಿಕೊಂಡರು ನಯನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT