ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಸಮಸ್ಯೆಗಳಿಗೆ ‘ಎನ್‌ಇಪಿ’ ಪರಿಹಾರ: ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿಕೆ

Last Updated 2 ಸೆಪ್ಟೆಂಬರ್ 2021, 13:29 IST
ಅಕ್ಷರ ಗಾತ್ರ

ಹಾವೇರಿ: ‘ಶಿಕ್ಷಣ ಇಲಾಖೆಯಲ್ಲಿರುವ ಬಹುತೇಕ ಸಮಸ್ಯೆಗಳಿಗೆ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ (ಎನ್‌ಇಪಿ)ಯಲ್ಲಿ ಪರಿಹಾರವಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಯಾಗುತ್ತದೆ. ಜತೆಗೆ ಕನ್ನಡ ಮಾಧ್ಯಮಕ್ಕೂ ಒತ್ತು ಸಿಗುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅಭಿಪ್ರಾಯಪಟ್ಟರು.

ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹೊಸ ಶಿಕ್ಷಣ ನೀತಿ ಮಸೂದೆಯೂ 2020ರಲ್ಲಿ ಲೋಕಸಭೆಯಲ್ಲಿ ಅಂಗೀಕಾರಗೊಂಡರೂ, 2030ರೊಳಗೆ ಹಂತ–ಹಂತವಾಗಿ ಅನುಷ್ಠಾನವಾಗಬೇಕು ಎಂದು ನಿರ್ಧರಿಸಲಾಗಿದೆ. ಶಿಕ್ಷಣ ತಜ್ಞರ ಜತೆ ಚರ್ಚಿಸಿ, ಅವರ ವರದಿಯ ಆಧಾರದ ಮೇಲೆ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ. ತರಾತುರಿಯಲ್ಲಿ ಜಾರಿ ಮಾಡುವುದಿಲ್ಲ’ ಎಂದರು.

ಪೂರ್ಣ ಪ್ರಮಾಣದ ಶಾಲೆ ಆರಂಭಕ್ಕೆ ಚರ್ಚೆ:

ಪೂರ್ಣ ಪ್ರಮಾಣದ ಶಾಲೆ ಆರಂಭಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರ ಬೇಡಿಕೆ ಇದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಆ.23ರಿಂದ 9 ಮತ್ತು 10ನೇ ತರಗತಿ ಆರಂಭಿಸಲಾಗಿದೆ. ಸೆ.6 ರಿಂದ 6,7 ಮತ್ತು 8ನೇ ತರಗತಿಗಳನ್ನು ಆರಂಭಿಸಲಾಗುವುದು. ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಶಾಲೆಗಳ ಆರಂಭ ಕುರಿತಂತೆ ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

‘ನಿಯಮಾವಳಿಯಲ್ಲಿ ತಿದ್ದುಪಡಿ ಅಗತ್ಯವಿದೆ’

ಪದವೀಧರ ಶಿಕ್ಷಕರಿಗೆ ಮುಂಬಡ್ತಿ ಸಿಗುತ್ತಿಲ್ಲ ಎಂಬ ಭೀತಿ ಕಾಡುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಕೇಡರ್‌ ಅಂಡ್‌ ರಿಕ್ರೂಟ್‌ಮೆಂಟ್‌ ನಿಯಮಾವಳಿಯಲ್ಲಿ ಕೆಲವು ತಿದ್ದುಪಡಿ ಮಾಡುವುದು ಅಗತ್ಯವಾಗಿದೆ.ಇಲಾಖೆಯಲ್ಲಿ 60ರಿಂದ 70 ಸಾವಿರ ಪದವೀಧರ ಶಿಕ್ಷಕರಿದ್ದಾರೆ. ಆದರೆ, 12ರಿಂದ 16 ಸಾವಿರ ಖಾಲಿ ಹುದ್ದೆಗಳು ಇವೆ.ನೌಕರ ಸಂಘದವರು ಜ್ಯೇಷ್ಠತೆ ಆಧಾರದ ಮೇಲೆ ಮುಂಬಡ್ತಿ ಕೊಡಿ ಎಂದು ಕೇಳುತ್ತಿದ್ದಾರೆ. ಪರೀಕ್ಷೆ ತೆಗೆದುಕೊಳ್ಳಲು ಶಿಕ್ಷಕರು ತಯಾರಿಲ್ಲ. ಶಿಕ್ಷಣ ತಜ್ಞರ ಅಭಿಪ್ರಾಯದ ಪ್ರಕಾರ ಜ್ಯೇಷ್ಠತೆ ಜತೆಗೆ ಪರೀಕ್ಷೆ ಅಗತ್ಯ ಎಂದು ಹೇಳಿದ್ದಾರೆ.ಹೀಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯ’ ಎಂದರು.

ಕ್ರೀಡಾಮೈದಾನ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ‘ರಾಜ್ಯದಲ್ಲಿ 48 ಸಾವಿರ ಶಾಲೆಗಳಿವೆ. ದಾನ ಕೊಟ್ಟ ಶಾಲೆಗಳಲ್ಲಿ ಕ್ರೀಡಾ ಮೈದಾನಗಳಿವೆ. ಸರ್ಕಾರ ಆರಂಭಿಸಿದ ಶಾಲೆಗಳಲ್ಲಿ ಕೆಲವು ಕಡೆ ಕೊರತೆ ಇದೆ. ಎರಡು ಕಿ.ಮೀ. ಅಂತರವಿರುವ ಶಾಲೆಗಳಲ್ಲಿ ಐದಾರು ಮಕ್ಕಳಿಗೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕನನ್ನು ನೇಮಿಸುವ ಅಗತ್ಯವಿದೆಯಾ? ಎಂಬ ಬಗ್ಗೆ ಚರ್ಚಿಸಬೇಕಿದೆ. ಇಂದು ಪ್ರತಿಯೊಂದು ಊರಿಗೂ ರಸ್ತೆಗಳಿದ್ದು ಉತ್ತಮ ಸಂಪರ್ಕವಿದೆ ಎಂದರು.

ಶಾಲೆಗಳಿಗೆ ಭೇಟಿ:

ಭೌತಿಕ ತರಗತಿಗಳ ಪರಿಶೀಲನೆಗಾಗಿ ಹಾವೇರಿ ನಗರದ ನಂಬರ್‌-2 ಶಾಲೆ, ಕೆರೆಮತ್ತಿಹಳ್ಳಿ, ಬಂಕಾಪುರದ ಕೊಟ್ಟಿಗೇರಿ, ನಾರಾಯಣಪುರದ ಕರ್ನಾಟಕ ಪಬ್ಲಿಕ್ ಶಾಲೆ, ಇಬ್ರಾಹಿಂಪುರ, ಸದಾಶಿವಪೇಟೆಯ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಪ್ರಾಥಮಿಕ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು ಶಾಲಾ ವಾತಾವರಣ, ಶೌಚಾಲಯ ವ್ಯವಸ್ಥೆ, ಕೋವಿಡ್ ಮಾರ್ಗಸೂಚಿಗಳ ಅನುಪಾಲನೆ ಕುರಿತಂತೆ ಪರಿಶೀಲಿಸಿದರು.

‘ಇಂಗ್ಲಿಷ್‌ ಮಾಧ್ಯಮ ತರಗತಿ ಆರಂಭಕ್ಕೆ ಕ್ರಮ’

ಪ್ರತಿ ವರ್ಷ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಆರಂಭಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಸಂಬಂಧ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಇಂಗ್ಲಿಷ್‌ ಕಲಿಕೆಯ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ಕ್ರಮವಹಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದರು.

ಶುಲ್ಕ ಸಮಸ್ಯೆ: ಸಿಎಂ ಜತೆ ಚರ್ಚೆ

ಆನ್‌ಲೈನ್‌ ತರಗತಿ ನಡೆಸುತ್ತಿರುವ ಕೆಲವು ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಹಿಂದಿನ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಶೇ 70ರಷ್ಟು ಶುಲ್ಕ ಪಡೆಯುವಂತೆ ಆದೇಶಿಸಿದ್ದರು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಆಂಧ್ರಪ್ರದೇಶದಲ್ಲಿ ಹೊಸ ವ್ಯವಸ್ಥೆಗೆ ಪ್ರಯತ್ನಿಸಿದ್ದಾರೆ. ಅದು ಯಶಸ್ವಿಯಾದರೆ ನಾವು ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ವಿತರಣೆ, ಕೆಲ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ವಿಭಾಗದ ಉದ್ಘಾಟನೆ, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನೆರವೇರಿಸಿದರು. ಧಾರವಾಡದ ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT