ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿ: ಎನ್‌ಜಿಒ ಪಾತ್ರ ಅಪಾರ; ಅಕ್ಷಯ ಶ್ರೀಧರ

Published 1 ಮಾರ್ಚ್ 2024, 6:53 IST
Last Updated 1 ಮಾರ್ಚ್ 2024, 6:53 IST
ಅಕ್ಷರ ಗಾತ್ರ

ಹಾವೇರಿ: ‘ಸುಸ್ಥಿರ ಭವಿಷ್ಯ ಮತ್ತು ಅಭಿವೃದ್ಧಿ ಸಾಧಿಸುವಲ್ಲಿ ಎನ್‌.ಜಿ.ಒ.ಗಳ ಪಾತ್ರ ಮಹತ್ತರವಾಗಿದೆ. ಸರ್ಕಾರದ ಯೋಜನೆಗಳನ್ನು ತಳಮಟ್ಟದ ಸಮುದಾಯದ ಜನರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಹೇಳಿದರು.

ಫೆವಾರ್ಡ್‌ ಕರ್ನಾಟಕ ಹಾಗೂ ಹಾವೇರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಸರ್ಕಾರದ ಜೊತೆಗೆ ನುರಿತ ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅರ್ಹ ಸಂಸ್ಥೆಗಳನ್ನು ವಿವಿಧ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು’ ಎಂದರು.

ಹಾವೇರಿ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಕಾರ್ಯದರ್ಶಿ ಎಸ್.ಎಚ್. ಮಜೀದ್ ಮಾತನಾಡಿ, ‘ಈ ದಿನಾಚರಣೆಯನ್ನು ವಿಶ್ವದಾದ್ಯಂತ 2010ರ ಫೆಬ್ರುವರಿಯಿಂದ ಆಚರಿಸಲಾಗುತ್ತಿದೆ. ಜಾಗತಿಕ ಅಭಿವೃದ್ಧಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರದ ಬಗ್ಗೆ ಜನರಿಗೆ, ಸಮುದಾಯಕ್ಕೆ ಅಧಿಕಾರಿಗಳಿಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ’ ಎಂದರು.

ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರೋಗ್ಯ ಕ್ಷೇತ್ರ–ಜಯಶ್ರೀ ಕರೆಗೌಡ್ರ, ಕೃಷಿ –ಚನ್ನಬಸಪ್ಪ ಕೊಂಬಳಿ, ಶಿಕ್ಷಣ–ಹಸೀನಾ ಹೆಡಿಯಾಲ, ಪರಿಸರ ಮತ್ತು ಅರಣ್ಯ ಸಂರಕ್ಷಣೆ–ಕರಿಬಸಪ್ಪ ಕಾಗಿನೆಲಿ ಹಾಗೂ ಮಹಿಳಾ ಸಬಲೀಕರಣ–ಗುತ್ತೆಮ್ಮ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಎಚ್.ಎಫ್‌. ಅಕ್ಕಿ ಅಧ್ಯಕ್ಷತೆವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಗೌರವಾಧ್ಯಕ್ಷ ಸಂಜೀವಣ್ಣ ನೀರಲಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮಹಿಳಾ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಪಾಟೀಲ ಇದ್ದರು. ಜನವಿಕಾಸ ಫೌಂಡೇಶನ್‌ ಗೀತಾ ಪಾಟೀಲ ನಿರೂಪಿಸಿದರು. ಮುತ್ತುರಾಜ ಮಾದರ್ ಸ್ವಾಗತಿಸಿದರು. ಎಂ.ಎನ್. ಹೊನಕೇರಿ ವಂದಿಸಿದರು. ಜಿಲ್ಲೆಯ ವಿವಿದ ಸಂಘ ಸಂಸ್ಥೆಗಳ ಸುಮಾರು 180 ಜನ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT