ನೋಟಾ: ವಿಧಾನಸಭಾ ಚುನಾವಣೆಯಲ್ಲೇ ಹೆಚ್ಚು

ಶುಕ್ರವಾರ, ಏಪ್ರಿಲ್ 19, 2019
22 °C
ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಇದ್ದಾಗ ‘ನೋಟಾ’ ಮತದಾನವೂ ಇಳಿಕೆ

ನೋಟಾ: ವಿಧಾನಸಭಾ ಚುನಾವಣೆಯಲ್ಲೇ ಹೆಚ್ಚು

Published:
Updated:
Prajavani

ಹಾವೇರಿ: ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ ‘ನೋಟಾ’ (ಮೇಲಿನ ಯಾವುದೂ ಅಲ್ಲ) ಚಲಾಯಿಸುವ ಹಕ್ಕನ್ನು ನೀಡಲಾಗಿದ್ದು,  2014ರ ಲೋಕಸಭಾ ಚುನಾವಣೆಯಲ್ಲಿ ಶೇ 0.34 ಹಾಗೂ 2018ರ ವಿಧಾನ ಸಭಾ ಚುನಾವಣೆಯಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 0.99 ನೋಟಾ ಚಲಾವಣೆಯಾಗಿದೆ.  

ವಿಧಾನಸಭಾ ಚುನಾವಣೆಯಲ್ಲಿ ರೋಣಾ ಮತ್ತು ಹಾವೇರಿಯಲ್ಲಿ ಗರಿಷ್ಠ ನೋಟಾ ಚಲಾವಣೆಯಾಗಿದ್ದರೆ, ತೀವ್ರ ಪೈಪೋಟಿಯಿದ್ದ ಹಾನಗಲ್ ಮತ್ತು ಹಿರೇಕೆರೂರ ಕ್ಷೇತ್ರದಲ್ಲಿ ಅತಿ ಕಡಿಮೆಯಾಗಿತ್ತು. ಅಭ್ಯರ್ಥಿಗಳ ಆಯ್ಕೆ ಹಾಗೂ ಸ್ಪರ್ಧೆಯ ತುರುಸು ನೋಟಾ ಮೇಲೆ ಪ್ರಭಾವ ಬೀರಿರುವುದು ಢಾಳಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ (6 ಕ್ಷೇತ್ರ) ಒಟ್ಟು 7,743 ಮತದಾರರು ‘ನೋಟಾ’ ಚಲಾಯಿಸಿದ್ದು, ಶೇ 0.78ರಷ್ಟು ನೋಟಾ ಚಲಾಯಿಸಿದ್ದಾರೆ.

ಪ್ರಭಾವ ಬೀರದ ನೋಟಾ?
ಎಲ್ಲ ಅಭ್ಯರ್ಥಿಗಳು ಪಡೆದ ವೈಯಕ್ತಿಕ ಮತಗಳಿಗಿಂತ ಹೆಚ್ಚು ‘ನೋಟಾ’ (NOTA)ವೇ ಚಲಾವಣೆಯಾದರೂ, ಅಭ್ಯರ್ಥಿಗಳ ಪೈಕಿ ಅತ್ಯಧಿಕ ಮತ ಪಡೆದವರೇ ವಿಜೇತರಾಗುತ್ತಾರೆ. ಫಲಿತಾಂಶ ಘೋಷಣೆಯ ಮೇಲೆ ನೋಟಾ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಚುನಾವಣಾ ಆಯೋಗ ಸ್ಪಷ್ಟಪಡಿಸಿತ್ತು.

ಆದರೆ, ನೋಟಾ ಚಲಾವಣೆಯು ರಾಜಕೀಯ ವ್ಯವಸ್ಥೆ ಹಾಗೂ ಅಭ್ಯರ್ಥಿಗಳ ವಿರುದ್ಧ ಮತದಾರರು ನೀಡಬಹುದಾದ ಸಂದೇಶವಾಗಿದೆ ಎನ್ನುತ್ತಾರೆ ತಜ್ಞರು. 

ಏನಿದು ನೋಟಾ
ಚುನಾವಣಾ ನಿಯಮಾವಳಿ ಕಾಯಿದೆ 1961ರ 49 ‘ಒ’ ನಿಯಮದ ಪ್ರಕಾರ ಮತಗಟ್ಟೆಗೆ ಬಂದ ಮತದಾರನಿಗೆ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಮತ ಚಲಾಯಿಸಿದೇ ನಿರಾಕರಿಸುವ ಹಕ್ಕನ್ನು ನೀಡಲಾಗಿದೆ. ಈ ಹಿಂದೆ ಮತಪತ್ರ (ಬ್ಯಾಲೆಟ್‌) ಕ್ಕೆ ಠಸ್ಸೆ ಹೊಡೆದು ಮತಪೆಟ್ಟಿಗೆಗೆ ಹಾಕುವ ಪದ್ಧತಿ ಇತ್ತು. ಆ ಸಂದರ್ಭದಲ್ಲಿ ಮತದಾರನು ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ಹಾಕದಿರಲು ಇಚ್ಛಿಸಿದಲ್ಲಿ, ಅರ್ಜಿ ನಮೂನೆ –17ಎ ಪಡೆದುಕೊಂಡು, ಸಕಾರಣವನ್ನು ಬರೆದು ಮತಗಟ್ಟೆ ಅಧಿಕಾರಿಗೆ ನೀಡಬಹುದಿತ್ತು. ಅದನ್ನು ‘ನೋಟಾ’ ಎಂದು ನಿರ್ಧರಿಸುತ್ತಿದ್ದರು. ಈಗ ಮತಯಂತ್ರ (ಇ.ವಿ.ಎಂ.)ದ ಕೊನೆಯಲ್ಲೇ ನೋಟಾಕ್ಕೆ ಅವಕಾಶ ನೀಡಲಾಗಿದೆ.

ಕುಲಗೆಟ್ಟ ಮತಗಳು
ಇವಿಎಂ ಬರುವ ಮೊದಲು ಮತಪತ್ರಕ್ಕೆ ಠಸ್ಸೆ ಹೊಡೆದು ಮತಪೆಟ್ಟಿಗೆಗೆ ಹಾಕಲಾಗುತ್ತಿತ್ತು. ಆಗ, ಎರಡು ಅಥವಾ ಹೆಚ್ಚಿನ ಅಭ್ಯರ್ಥಿಗಳಿಗೆ ಗುರುತು (ಠಸ್ಸೆಯ ಶಾಯಿ) ಬಿದ್ದರೆ, ಆ ಮತವನ್ನು ತಿರಸ್ಕರಿಸಿ, ಕುಲಗೆಟ್ಟ ಮತ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅಂಚೆ ಮತದಾನದಲ್ಲಿ ಮಾತ್ರ ಮತಪತ್ರ ಉಳಿದಕೊಂಡಿವೆ.

2014ರ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಯಾದ 910 ಸಿಬ್ಬಂದಿ ಹಾಕಿದ ಮತಗಳ ಪೈಕಿ 400 (ಶೇ 44) ತಿರಸ್ಕೃತಗೊಂಡಿದ್ದವು. 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 5,685 ಅಂಚೆ ಮತಗಳಿದ್ದು, 641 ಮತಗಳು ತಿರಸ್ಕೃತಗೊಂಡಿತ್ತು.  

‘ಈ ಬಾರಿ ಜಿಲ್ಲಾಡಳಿತವು ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಕರ್ತವ್ಯ ನಿರತ 3,866 ಸಿಬ್ಬಂದಿಗೆ ‘ಮುದ್ರಿತ ಇಡಿಸಿ’ ನೀಡಲಾಗುತ್ತಿದೆ. 2,722 ಸಿಬ್ಬಂದಿಗೆ ಅಂಚೆ ಮತಪತ್ರ ನೀಡಲಾಗುತ್ತಿದೆ. ಹೀಗಾಗಿ, ಮಾನವ ಸಹಜ ಲೋಪದೋಷಗಳು ಇಳಿಕೆಯಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !