ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಮೇಲೆ ಆಣೆ ಮಾಡಿ ಮೋಸ ಮಾಡಿದ್ರು: ಬೊಮ್ಮಾಯಿ ವಿರುದ್ಧ ಮೃತ್ಯುಂಜಯ ಶ್ರೀ ಕಿಡಿ

ರಾಷ್ಟ್ರೀಯ ಹೆದ್ದಾರಿ ತಡೆ: ಸಿಎಂ ವಿರುದ್ಧ ಪಂಚಮಸಾಲಿಗಳ ಆಕ್ರೋಶ
Last Updated 13 ಜನವರಿ 2023, 16:07 IST
ಅಕ್ಷರ ಗಾತ್ರ

ಶಿಗ್ಗಾವಿ (ಹಾವೇರಿ): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಮುದಾಯದ ಸಾವಿರಾರು ಮಂದಿ ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಪಟ್ಟಣದ ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಮೂರ್ತಿಗೆ ಪೂಜೆ ಸಲ್ಲಿಸಿ, ಕೆಲಕಾಲ ಧರಣಿ ನಡೆಸಿ, ನಂತರ ಪಾದಯಾತ್ರೆ ಕೈಗೊಂಡರು. ಪಟ್ಟಣದಲ್ಲಿರುವ ಸಿಎಂ ಅವರ ಮನೆ ಮುಂದೆ ಧರಣಿ ಕೂರುವ ನಿರ್ಧಾರ ಕೈಬಿಟ್ಟು, ರಾಷ್ಟ್ರೀಯ ಹೆದ್ದಾರಿಯಲ್ಲೇ ಒಂದು ಗಂಟೆ ಧರಣಿ ಕುಳಿತು, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ, 2ಎ ಮೀಸಲಾತಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಈ ರೀತಿ ಮಾತು ಕೊಟ್ಟು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದನ್ನು ತಪ್ಪಿಸಿದರು. ಇಲ್ಲದಿದ್ದರೆ ನರಗುಂದ ಬಂಡಾಯ ರೀತಿಯ ಹೋರಾಟ ಆಗುತ್ತಿತ್ತು. ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ: ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಸರ್ಕಾರ 2ಡಿ ಮೀಸಲಾತಿ ಘೋಷಣೆ ಮಾಡಿತು. ಇದು ನಮ್ಮ ಸಮುದಾಯದ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ನಾವು 2ಡಿ ಮೀಸಲಾತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದೇವೆ. ನಾವು ಮೋಸ ಹೋಗುವ ಜನರಲ್ಲ ಎಂದು ಕಿಡಿಕಾರಿದರು.

ಬೊಮ್ಮಾಯಿಯವರೇ ಕುರ್ಚಿ ಶಾಶ್ವತವಲ್ಲ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, 6 ಬಾರಿ ಸುಳ್ಳು ಭರವಸೆ ಕೊಟ್ಟ ಸರ್ಕಾರವಿದು. ಮೀಸಲಾತಿ ಕೊಡುತ್ತೇವೆ ಎಂದು ಹೇಳಿ ಬಿ.ಎಸ್‌. ಯಡಿಯೂರಪ್ಪನವರು ಸ್ವಾಮೀಜಿಗೆ ಮೋಸ ಮಾಡಿದರು. ಅವರ ಶಾಪದಿಂದಲೇ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡರು. ಬೊಮ್ಮಾಯಿಯವರೇ ನಿಮಗೂ ಕುರ್ಚಿ ಶಾಶ್ವತವಲ್ಲ. ಈ ಶಿಗ್ಗಾವಿ ಕ್ಷೇತ್ರದಿಂದ ನಿಮ್ಮನ್ನು ಹೊರಗಡೆ ಕಳುಹಿಸದೇ ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮೀಸಲಾತಿ ಕೊಟ್ರೆ ಮತ!

ಬೊಮ್ಮಾಯಿಯವರೇ ನಮಗೆ ಮೀಸಲಾತಿ ಕೊಟ್ಟರೆ ಮಾತ್ರ ನಿಮಗೆ ಮತ. ಇಲ್ಲದಿದ್ದರೆ ಮನೆಗೆ ಕಳುಹಿಸಲು ನಾವು ಸಿದ್ಧರಾಗಿದ್ದೇವೆ. ಹೋರಾಟದಿಂದ ನಾವು ಕದಲುವುದಿಲ್ಲ. ಪಂಚಮಸಾಲಿಗಳ ಹೋರಾಟಕ್ಕೆ ಜನರು ಬರದಂತೆ ಬೊಮ್ಮಾಯಿ ಅವರು ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಮಾಡಿದರು.

ಮಾಜಿ ಸಚಿವ ವಿನಯ ಕುಲಕರ್ಣಿ, ಹರಿಹರದ ಮಾಜಿ ಶಾಸಕ ಎಚ್.ಎಸ್. ಶಿವಶಂಕರಪ್ಪ, ಮುಖಂಡರಾದ ಶಶಿಧರ ಯಲಿಗಾರ, ಹಂದಿಗನೂರಿನ ರಾಜೇಶ್ವರಿ ಪಾಟೀಲ, ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಶಿವಾನಂದ ಬಾಗೂರ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ರಾಜ್ಯ ಸಮಿತಿ ಸದಸ್ಯರು ಇದ್ದರು.

‌ನಿರಾಣಿ ವಿರುದ್ಧ ಯತ್ನಾಳ್‌ ವಾಗ್ದಾಳಿ

‌‘ವಿಜಾಪುರದಾಗ ಅವ ಪಿಂಪ್ ಮಂತ್ರಿ ಅದಾನಲ್ಲ, ಅವ ಪ್ರೆಸ್ ಮೀಟ್ ಮಾಡಿದ್ದ. ಬಸನಗೌಡಗೆ ಟಿಕೆಟ್‌ ಕೊಡಿಸಲ್ಲ, ಅವನನ್ನು ಸೋಲಿಸ್ತೇನೆ ಅಂದ. ಧಮ್‌ ಇದ್ದರೆ ಅಖಾಡಕ್ಕೆ ಬರಲಿ. ಅವನಂತೆ ಚಿಲ್ಲರೆ ಕೆಲಸವನ್ನು ನಾನು ಮಾಡಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಮುರುಗೇಶ ನಿರಾಣಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

‘ಸ್ವಾಮೀಜಿಗಳು ಬಹಳ ಮಾತಾಡಿದ್ರೆ ಸಾಕು, ನಿಮ್ಮ ಗುರುಗಳದ್ದು ಸಿಡಿ ಇದೆ ಎಂದು ಹೆದರಿಸಿದರು. ಸಿ.ಡಿ ಅಂತ ಹೇಳಿದರೆ ಹೆದರಬೇಡಿ ಗುರುಗಳೇ ಅಂತ ನಾನು ಅಂದಿದ್ದೆ. ಈ ಮಕ್ಕಳದು ಸಿ.ಡಿ ಫ್ಯಾಕ್ಟರಿ ಇದೆ. ಬ್ಲ್ಯಾಕ್ ಮೇಲ್ ಮಾಡೋರನ್ನು ಕರೆದುಕೊಂಡು ಓಡಾಡ್ತೀರಿ ಬೊಮ್ಮಾಯಿಯವರೇ. ಸ್ಪೆಷಲ್‌ ವಿಮಾನದಲ್ಲಿ ಓಡಾಡುವುದನ್ನು ಬಿಟ್ಟು ಬೇರೆ ಏನು ನೀವು ಮಾಡಲಿಲ್ಲ’ ಎಂದು ಟೀಕಿಸಿದರು.

ಸಿಎಂ ಬೊಮ್ಮಾಯಿಗೆ ಯತ್ನಾಳ್‌ ಸವಾಲ್‌

‘ಬೊಮ್ಮಾಯಿಯವರೇ ನೀವು ಚುನಾವಣೆ ಆದ ನಂತರ ವಿಧಾನಸಭೆಯಲ್ಲಿ ಇರುತ್ತೀರೋ ಇಲ್ಲವೋ ಗೊತ್ತಿಲ್ಲ. ನಾನಂತೂ ಇರುತ್ತೇನೆ. ಯಾರೇ ರೊಕ್ಕ ಕೊಟ್ಟರೂ ನಮ್ಮ ಸ್ವಾಮೀಜಿಗಳು ತೆಗೆದುಕೊಳ್ಳುವುದಿಲ್ಲ. ಇಂಥ ಸ್ವಾಮಿಗಳಿಗೆ ಯಾಕೆ ಹೀಗೆ ಮಾಡ್ತಾ ಇದೀರೀ ಬೊಮ್ಮಾಯಿಯವರೇ’ ಎಂದು ಸಿಎಂ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು.

‘ಜಯಪ್ರಕಾಶ ಹೆಗಡೆ ಅವರಿಗೆ ಹಿಂದುಳಿದ ವರ್ಗಗಳ ಆಯೋಗದ ವರದಿ ಕೊಡಬೇಡ ಎಂದು ಹೇಳಿದ್ದಾರೆ. ಚುನಾವಣೆಗೆ ಇಬ್ಬರೂ (ಯಡಿಯೂರಪ್ಪ ಮತ್ತು ಬೊಮ್ಮಾಯಿ) ಓಡಾಡ್ರಿ ನಿಮ್ಮ ಶಕ್ತಿ ತೋರಿಸ್ರಿ ನೋಡೋಣ’ ಎಂದು ಸವಾಲು ಹಾಕಿದರು.

*
ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಸರ್ಕಾರ 2ಡಿ ಮೀಸಲಾತಿ ಘೋಷಿಸಿತು. ನಾವಿದನ್ನು ತಿರಸ್ಕರಿಸಿದ್ದೇವೆ. ಮೋಸ ಹೋಗುವ ಜನ ನಾವಲ್ಲ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT