ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ 540 ‘ಆಕ್ಸಿಜನ್ ಬೆಡ್’‌ ವ್ಯವಸ್ಥೆ

ಬಸಾಪುರದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಆರಂಭ: ಮಾಸ್ಕ್‌ ಧರಿಸದಿದ್ದರೆ ದಂಡ– ಡಿ.ಸಿ ಎಚ್ಚರಿಕೆ
Last Updated 16 ಏಪ್ರಿಲ್ 2021, 14:01 IST
ಅಕ್ಷರ ಗಾತ್ರ

ಹಾವೇರಿ: ‘ಜಿಲ್ಲೆಯಲ್ಲಿ ಕೋವಿಡ್‌ ಎರಡನೇ ಅಲೆ ಹೆಚ್ಚುತ್ತಿದ್ದು, ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸಾರ್ವಜನಿಕರು ಕೋವಿಡ್‌ ಮಾರ್ಗಸೂಚಿ ಅನುಸರಿಸದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಹೀಗಾಗಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಕೋವಿಡ್ ಎರಡನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಟ್ಟು 540 ಆಕ್ಸಿಜನ್ ಸಹಿತ ಹಾಸಿಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಹಾವೇರಿತಾಲ್ಲೂಕಿನ ಬಸಾಪೂರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 50 ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುತ್ತಿದೆ. ಅಗತ್ಯಬಿದ್ದರೆ ರಾಣೆಬೆನ್ನೂರು ತಾಲ್ಲೂಕಿನಲ್ಲೊಂದು ‘ಕೋವಿಡ್ ಕೇರ್ ಸೆಂಟರ್’ ಆರಂಭಿಸಲು ಯೋಜಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ950ಕ್ಕೂ ಹೆಚ್ಚು ಬೆಡ್‍ಗಳ ವ್ಯವಸ್ಥೆ ಹೊಂದಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ‘ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌’ ಟ್ಯಾಂಕ್ ಅಳವಡಿಸಲಾಗಿದೆ.ತಾಲ್ಲೂಕು ಆಸ್ಪತ್ರೆಗಳಲ್ಲಿ 190 ಜಂಬೊ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆಯಿದೆ.ಜಿಲ್ಲೆಯಲ್ಲಿ 510 ಡೋಸ್ ರೆಮ್‌ಡಿಸಿವರ್ ಲಸಿಕೆ ದಾಸ್ತಾನಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಮೊಹಮ್ಮದ್‌ ರೋಶನ್‌ ಮಾತನಾಡಿ, ‘ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾತ್ರ ನಡೆಸಲಾಗುತ್ತಿದೆ. ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ (ಆರ್‌ಎಟಿ)ನಲ್ಲಿ ಖಚಿತ ಫಲಿತಾಂಶ ಸಿಗದ ಕಾರಣ ನಿಲ್ಲಿಸಲಾಗಿದೆ.ದಿನಕ್ಕೆ 1500ರಿಂದ 1800ರಷ್ಟು ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ 2 ಕೋವಿಡ್ ತಪಾಸಣಾ ತಂಡಗಳನ್ನು ರಚಿಸಲಾಗಿದೆ’ ಎಂದರು.

ದಂಡ ವಸೂಲಿ

ಹಾವೇರಿ, ರಾಣೆಬೆನ್ನೂರು ನಗರಗಳಲ್ಲಿ ಮಾಸ್ಕ್‌ ಧರಿಸದವರಿಗೆ ₹200 ದಂಡ, ಉಳಿದ ಪಟ್ಟಣಗಳಲ್ಲಿ ₹100 ದಂಡ ಹಾಕಲು ಪೊಲೀಸ್ ಇಲಾಖೆ, ತಹಶೀಲ್ದಾರ್, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. ಈಗಾಗಲೇ ₹15 ಲಕ್ಷ ದಂಡ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಹಲ್ಲೆ ಮಾಡಿದರೆ ಕಠಿಣ ಕ್ರಮ

ಕೋವಿಡ್‌ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆಗಾಗಿ ರಚಿಸಲಾದ ವ್ಯೆದ್ಯಕೀಯ ತಂಡದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಹಲ್ಲೆ ಮಾಡಿರುವ ಪ್ರಕರಣಗಳು ನಡೆದಿವೆ. ಈಗಾಗಲೇ ಶಿಗ್ಗಾವಿಯಲ್ಲಿ ದೂರು ದಾಖಲಿಸಲಾಗಿದೆ. ಇತಂಹ ಘಟನೆಗಳು ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಪರ್ಕಿತರ ಕೋವಿಡ್ ಪರೀಕ್ಷೆಯನ್ನು ನಿರಾಕರಿಸಿದರೆ ಆ ಪ್ರದೇಶವನ್ನು ‘ಕಂಟೋನ್ಮೆಂಟ್‌ ಝೋನ್’ ಎಂದು ಗುರುತಿಸಿ ಪೊಲೀಸ್ ಸರ್ಪಗಾವಲು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧಾರ್ಮಿಕ ಸ್ಥಳಗಳಲ್ಲಿ, ಜಾತ್ರೆಗಳಲ್ಲಿ, ಸಂತೆಗಳಲ್ಲಿ ಹಾಗೂ ಮದುವೆ, ಸಭೆ-ಸಮಾರಂಭಗಳಲ್ಲಿ ಗುಂಪು ಗುಂಪಾಗಿ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮದುವೆ ಛತ್ರಗಳ ಮೇಲೆ ನಿಗಾ ಇಟ್ಟು, ಕೋವಿಡ್ ನಿಯಮಗಳನ್ನು ಪಾಲಿಸದೆ ಇದ್ದರೇ ಮಾಲೀಕರಿಗೆ ₹25 ಸಾವಿರ ದಂಡ ವಸೂಲಿ ಮಾಡಲು ಎಲ್ಲಾ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

‘ಕೋವಿಡ್‌ ಲಸಿಕೆ ಕೊರತೆಯಿಲ್ಲ’

ಜಿಲ್ಲೆಯಲ್ಲಿ ಕೋವಿಡ್ ಲಸಿಕೆಯ ಕೊರತೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಲಸಿಕೆ ಬೆಳಗಾವಿಯ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ಪೂರೈಕೆಯಾಗುತ್ತಿದೆ. ಈಗಾಗಲೇ 1,11,298 ಜನರಿಗೆ ಲಸಿಕೆ ನೀಡಲಾಗಿದೆ. ಗುರುವಾರ 7 ಸಾವಿರ ಡೋಸ್ ಲಸಿಕೆ ಜಿಲ್ಲೆಗೆ ಪೂರೈಕೆಯಾಗಿದೆ. ಈಗಾಗಲೇ ಶೇ 75ರಷ್ಟು ಕೋವಿಡ್ ವಾರಿಯರ್‌ಗಳಿಗೆ ಲಸಿಕೆ ಹಾಕಲಾಗಿದೆ. ದಿನಕ್ಕೆ 5ರಿಂದ 6 ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

‘ಇ-ಸಂಜೀವಿನಿ’ ಸೌಲಭ್ಯ ಪಡೆಯಿರಿ

ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯಲು ತೊಂದರೆಯಾಗದಂತೆ ಕೇಂದ್ರ ಸರ್ಕಾರ ‘ಇ-ಸಂಜೀವಿನಿ’ ಓಪಿಡಿ ಆ್ಯಪ್‌ ಸೇವೆಯನ್ನು ಆರಂಭಿಸಿದೆ. ಮೊಬೈಲ್‍ಗಳಲ್ಲಿ ಈ ಆ್ಯಪ್‌ ಡೌನ್‍ಲೋಡ್‍ ಮಾಡಿಕೊಂಡು ನೋಂದಾಯಿಸಿಕೊಂಡರೆ ವೆಬ್‍ವಿಡಿಯೊ ಹಾಗೂ ಆನ್‍ಲೈನ್ ಮೂಲಕ ರೋಗಿಗಳಿಗೆ ವೈದ್ಯರು ಮನೆಯಿಂದಲೇ ಚಿಕಿತ್ಸೆ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಡಿಎಚ್‌ಒ ಡಾ.ಎಚ್.ಎಸ್. ರಾಘವೇಂದ್ರಸ್ವಾಮಿ, ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ಡಾ.ವಿರಕ್ತಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT