ಗುರುವಾರ , ಆಗಸ್ಟ್ 18, 2022
27 °C
ಟಂಟಂ, ಆಟೊಗಳಲ್ಲಿ ಪಾಲನೆಯಾಗದ ಸಂಚಾರ ನಿಯಮ: ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಬಸ್‌ಗಳ ಕೊರತೆ

ಅಪಾಯ ಲೆಕ್ಕಿಸದೇ ಜನರ ಪ್ರಯಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಗ್ರಾಮೀಣ ಭಾಗಗಳಲ್ಲಿ ಬಸ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವ ಒಂದೆರಡು ಬಸ್‌ಗಳು ಕೂಡ ಹಳ್ಳಿಗಳಿಗೆ ಸಕಾಲಕ್ಕೆ ಬಾರದೇ ಇರುವುದರಿಂದ ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗಲು ನಿತ್ಯ ಪರದಾಡುವಂತಾಗಿದೆ. 

ಬಸ್‌ಗಳ ಕೊರತೆಯಿಂದ ಟಂಟಂ, ಆಟೊ, ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಸುವ ಅನಿವಾರ್ಯ ಜನರಿಗೆ ಎದುರಾಗಿದೆ. ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ಕುರಿಗಳನ್ನು ತುಂಬಿದಂತೆ ಜನರನ್ನು ಆಟೊ ಮತ್ತು ಟಂಟಂಗಳಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ.

ಬಸ್‌ಗಳ ಬಾಗಿಲುಗಳಲ್ಲಿ ಜೋತು ಬಿದ್ದು ಹೋಗುವ ವಿದ್ಯಾರ್ಥಿಗಳು, ಟಂಟಂಗಳ ಹಿಂಭಾಗ ಕಂಬಿಯಲ್ಲಿ ನೇತಾಡಿಕೊಂಡು ಹೋಗುವ ಜನರು, ಆಟೊಗಳಲ್ಲಿ ಉಸಿರುಗಟ್ಟುವಂತೆ ತುರುಕಿಕೊಂಡು ಸಾಗುವ ಮಹಿಳೆಯರ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. ಪೊಲೀಸ್‌ ಮತ್ತು ಆರ್‌ಟಿಒ ಅಧಿಕಾರಿಗಳು ಅಸುರಕ್ಷಿತ ಮತ್ತು ಅಪಾಯಕಾರಿ ಪ್ರಯಾಣಕ್ಕೆ ಕಡಿವಾಣ ಹಾಕಿ, ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ದಿಟ್ಟತನ ತೋರುತ್ತಿಲ್ಲ ಎಂಬ ದೂರು ಜನರದ್ದು. 

ಬಸ್‌ ನಿಲ್ದಾಣದಲ್ಲೇ ಪ್ರಯಾಣಿಕರ ವಾಸ್ತವ್ಯ

ಸವಣೂರು: ಸವಣೂರು ವಾಯವ್ಯ ಸಾರಿಗೆ ಘಟಕದಲ್ಲಿ ಚಾಲಕರು, ನಿರ್ವಾಹಕರು ಸೇರಿ ಒಟ್ಟು 169 ಮಂದಿ ಇದ್ದು, 55 ಬಸ್‌ಗಳು 51 ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಸವಣೂರು ತಾಲ್ಲೂಕಿನ 64 ಗ್ರಾಮಗಳ ಪೈಕಿ ಹತ್ತಿಮತ್ತೂರ ಹೋಬಳಿಯ ಹಲವಾರು ಗ್ರಾಮಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ಟಂಟಂ, ಆಟೊರಿಕ್ಷಾ ಸೇರಿದಂತೆ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ.

‘ತಾಲ್ಲೂಕಿನ ಕೊನೆಯ ಗ್ರಾಮಗಳಿಗೆ ಸಂಚರಿಸಲು ಬಸ್‌ಗಳು ಇಲ್ಲದ ಕಾರಣ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ವಾಸ್ತವ್ಯ ಹೂಡಬೇಕಾದ ಪರಿಸ್ಥಿತಿ ಇದೆ’ ಎಂದು ಪ್ರಯಾಣಿಕ ಬಸವರಾಜ ಮಕರಬ್ಬಿ ಅಳಲು ತೋಡಿಕೊಂಡರು. 

ಸವಣೂರು–ಬಂಕಾಪುರ ಮಾರ್ಗದಲ್ಲಿ ಕಾಲೇಜು ಬಳಿ ತಡೆರಹಿತ ವಾಹನ ನಿಲುಗಡೆ ಮಾಡುವಂತೆ ಆದೇಶ ಇದ್ದರೂ ಕೂಡಾ ಬಸ್ ನಿಲುಗಡೆ ಮಾಡುತ್ತಿಲ್ಲ. ನಿಲುಗಡೆ ಬಸ್‌ಗಳು ಬಂದಾಗ ಎಲ್ಲ ವಿದ್ಯಾರ್ಥಿಗಳು ಒಂದೇ ಬಸ್‌ನಲ್ಲಿ ಜೋತು ಬಿದ್ದು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ನಿತ್ಯ ಕಾಲೇಜಿಗೆ ತರಳುವಂತಾಗಿದೆ ಎಂದು ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು. 

ಬಸ್‌ಗಳಲ್ಲಿ ನೂಕು ನುಗ್ಗಲು

ರಾಣೆಬೆನ್ನೂರು: ಇಲ್ಲಿನ ಮಾರುತಿನಗರದ ಸರ್ಕಾರಿ ಪದವಿ ಪೂರ್ವ ಮತ್ತು ಹುಣಸೀಕಟ್ಟಿ ರಸ್ತೆಯ ಸರ್ಕಾರಿ ಪದವಿ ಕಾಲೇಜುಗಳು ನಗರದ ಬಸ್‌ ನಿಲ್ದಾಣದಿಂದ 2-3 ಕಿ.ಮೀ. ಅಂತರದಲ್ಲಿವೆ. ತಾಲ್ಲೂಕಿನ ಗ್ರಾಮಗಳಿಂದ ಸುಮಾರು 500 ವಿದ್ಯಾರ್ಥಿಗಳು ಬಸ್‌ ನಿಲ್ದಾಣಕ್ಕೆ ಬಂದು ಸೇರುತ್ತಾರೆ. ಒಂದೇ ಬಸ್‌ನಲ್ಲಿ ಎಲ್ಲ ವಿದ್ಯಾರ್ಥಿಗಳು ಹತ್ತುವುದರಿಂದ ನಿತ್ಯ ನೂಕು ನುಗ್ಗಲು ಉಂಟಾಗುತ್ತದೆ. 

ಮಳೆಗಾಲವಾಗಿದ್ದರಿಂದ ಬಸ್‌ ಬಿಟ್ಟರೆ ನಡೆದುಕೊಂಡು ಹೋಗಲು ದೂರವಾಗುತ್ತದೆ. ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಲು ಆಗುವುದಿಲ್ಲ. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಖಾಸಗಿ ವಾಹನ ಹಿಡಿದು ಹೋಗಲು ಆಗಲ್ಲ. ಅದಕ್ಕಾಗಿ ಹೆಚ್ಚಿನ ಬಸ್‌ ಬಿಡಬೇಕೆಂದು ವಿದ್ಯಾರ್ಥಿಗಳ ಆಗ್ರಹವಾಗಿದೆ.

‘ಶ್ರೀನಿವಾಸಪುರ, ಗೋವಿಂದ ಬಡಾವಣೆ, ಬಸಲೀಕಟ್ಟಿ ತಾಂಡಾ, ರಾಹುತನಕಟ್ಟಿ ಮುಂತಾದ ಗ್ರಾಮಗಳ ಖಾಸಗಿ ಶಾಲಾ ವಿದ್ಯಾರ್ಥಿಗಳು ಆಟೋ ಮತ್ತು ಟಂಟಂ ಗಾಡಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಕುರಿ ತುಂಬಿದಂತೆ ತುಂಬಿಕೊಂಡು ಟಾಪ್‌ನಲ್ಲಿ ಹತ್ತಿಸಿಕೊಂಡು ಹೋಗುತ್ತಾರೆ’ ಎಂದು ಗಂಗಾಜಲ ತಾಂಡಾದ ನಿವಾಸಿ ಕೃಷ್ಣಮೂರ್ತಿ ಲಮಾಣಿ.

ಟಂಟಂಗಳಲ್ಲಿ ಅಪಾಯಕಾರಿ ಪ್ರಯಾಣ!

ಗುತ್ತಲ: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಾದ ನೆಗಳೂರ, ಹಾವನೂರ, ಬಸಾಪೂರ, ತಿಮ್ಮಾಪೂರ, ಬೊಮ್ಮನಕಟ್ಟಿ, ಬೆಳವಗಿ, ಗಳಗನಾಥ ಇನ್ನೂ ಹಲವಾರು ಗ್ರಾಮಗಳಿಗೆ ಸೂಕ್ತ ಸಮಯಕ್ಕೆ ಸಾರಿಗೆ ಬಸ್‌ಗಳು ಇಲ್ಲದ ಕಾರಣ ಆಟೊ, ಟಂಟಂ, ಟಾಟಾ ಎ.ಸಿ. ಖಾಸಗಿ ವಾಹನಗಳಲ್ಲಿ ಪ್ರಯಾಣಿಕರನ್ನು ಜಾನುವಾರುಗಳ ರೀತಿ ತುಂಬಿಕೊಂಡು ಕರೆದೊಯ್ಯಲಾಗುತ್ತದೆ.

ಹಣದ ಆಸೆಗಾಗಿ ಚಾಲಕರು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ, ನಿಗದಿತ ಸೀಟುಗಳಿಗಿಂತ ಹೆಚ್ಚಿನ ಜನರನ್ನು ತುಂಬಿಕೊಂಡು ಹೋಗುವುದರಿಂದ ಅಪಾಯ ಆಹ್ವಾನಿಸುವಂತಿದೆ. ಟಂಟಂಗಳ ಹಿಂದೆ ನಿಂತು ಪ್ರಯಾಣಿಸುವ ಹಲವಾರು ಪ್ರಯಾಣಿಕರು ಆಯತಪ್ಪಿ ಬಿದ್ದು ಸಾವು–ನೋವುಗಳು ಉಂಟಾಗಿವೆ. ಬಸ್‌ಗಳ ಕೊರತೆಯಿಂದ ತಮ್ಮ ಜೀವದ ಹಂಗು ತೊರೆದು ಪ್ರಯಾಣ ಮಾಡುವ ಅನಿವಾರ್ಯತೆ ಕಾರ್ಮಿಕ ಮಹಿಳೆಯರದ್ದು.

ಬಾರದ ಬಸ್‌: ಬಳಕೆಯಾಗದ ಪಾಸ್!

ಶಿಗ್ಗಾವಿ: ತಾಲ್ಲೂಕಿನ ಹಲವು ಗ್ರಾಮೀಣ ಪ್ರದೇಶದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳು ಸರಿಯಾಗಿ ಬಾರದೇ ನಿತ್ಯ ವಿದ್ಯಾರ್ಥಿ, ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ತಾಲ್ಲೂಕಿನ ಬಂಕಾಪುರ, ಹಳೆ ಬಂಕಾಪುರ, ಗಂಜೀಗಟ್ಟಿ, ದುಂಢಸಿ ಸೇರಿದಂತೆ ಹಲವು ಗ್ರಾಮೀಣ ಪ್ರದೇಶದ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಸರಿಯಾದ ವೇಳೆಗೆ ಬಾರದೆ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಅದರಿಂದಾಗಿ ಸಾಕಷ್ಟು ಬಾರಿ ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದಾರೆ. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಇದ್ದರೂ ಸಹ ಖಾಸಗಿ ವಾಹನದಲ್ಲಿ ಪ್ರಯಾಣಿಸಬೇಕಾಗಿದೆ ಎಂದು ವಿದ್ಯಾರ್ಥಿಗಳು, ಸಾರ್ವಜನಿಕರು ದೂರತ್ತಾರೆ.

ಬಸ್‌ಗಳ ಕೊರತೆ: ಪ್ರಯಾಣಕ್ಕೆ ತೊಡಕು

ಬ್ಯಾಡಗಿ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಬಸ್‌ಗಳ ಕೊರತೆ ತೀವ್ರವಾಗಿದೆ. ಪಟ್ಟಣದಿಂದ ಮಲ್ಲೂರು, ಹೆಡಿಗ್ಗೊಂಡ, ಕಾಗಿನೆಲೆಗೆ ಬಸ್ ಸಂಚಾರ ವಿರಳ. ಇದರಿಂದ ಶಾಲಾ ಮಕ್ಕಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆಟೊ, ಟಂಟಂ ಮೂಲಕ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಕುಳಿತುಕೊಳ್ಳಲು ಜಾಗ ಸಿಗದೇ ಜೋತುಬಿದ್ದು ಪ್ರಯಾಣಿಸಬೇಕಾಗಿದೆ ಎಂದು ಕಾಗಿನೆಲೆಯ ನಿವಾಸಿ ಜಿ.ಪುಟ್ಟಪ್ಪ ಹೇಳಿದರು.

ಆಟೊಗಳಲ್ಲಿ ಶಾಲಾ ಮಕ್ಕಳನ್ನು ಕುರಿಗಳಂತೆ ತುಂಬಲಾಗುತ್ತದೆ. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲ ಎಂದು ಪಾಲಕರಾದ ಅಜಯಕುಮಾರ ಅಸಮಾಧಾನ ವ್ಯಕ್ತಪಡಿಸಿದರು. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯಲು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. 

**

ಮಿನಿ ಬಸ್‌ ಬದಲಾಗಿ ಹೆಚ್ಚುವರಿಯಾಗಿ 10 ದೊಡ್ಡ ಬಸ್‌ಗಳನ್ನು ಬಿಡಲು ಹಾವೇರಿ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿ, ಕ್ರಮ ಕೈಗೊಳ್ಳಲಾಗಿದೆ 
– ಡಾ.ಬಸವರಾಜ ಕೇಲಗಾರ, ಉಪಾಧ್ಯಕ್ಷ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

**

ಸಾರಿಗೆ ಘಟಕದಲ್ಲಿ ಬಸ್ ಹಾಗೂ ಸಿಬ್ಬಂದಿ ಕೊರತೆ ಇದೆ. ಬೆಳಿಗ್ಗೆ ಹಾಗೂ ಸಂಜೆ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಕಳಿಸಲಾಗುತ್ತದೆ
– ಆರ್.ಸಿ.ಪಾಟೀಲ, ಘಟಕ ವ್ಯವಸ್ಥಾಪಕ, ಬ್ಯಾಡಗಿ

**

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 2021-22ರಲ್ಲಿ 667 ಪ್ರಕರಣಗಳು ದಾಖಲಾಗಿವೆ. ಚಾಲಕರಿಗೆ ಜಾಗೃತಿ ಮೂಡಿಸುತ್ತಿದ್ದೇವೆ
– ಭರತ್‌ ಕಾಳೆಸಿಂಗೆ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ರಾಣೆಬೆನ್ನೂರು

**

ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಕರನ್ನು ಹಾಕಿದರೆ ಚಾಲನಾ ಪರವಾನಗಿಯನ್ನು ರದ್ದುಪಡಿಸಿ, ಸೂಕ್ತ ಕ್ರಮ ಜರುಗಿಸಲಾಗುವುದು
– ವಸೀಂಬಾಬಾ ಮುದ್ದೇಬಿಹಾಳ, ಆರ್‌ಟಿಒ, ಹಾವೇರಿ

 

 ***

ಪ್ರಜಾವಾಣಿ ತಂಡ: ಸಿದ್ದು ಆರ್‌.ಜಿ.ಹಳ್ಳಿ, ಎಂ.ವಿ.ಗಾಡದ, ಪ್ರಮೀಳಾ ಹುನಗುಂದ, ಮುಕ್ತೇಶ್ವರ ಕೂರಗುಂದಮಠ, ಗಣೇಶಗೌಡ ಎಂ.ಪಾಟೀಲ, ದುರಗಪ್ಪ ಪಿ.ಕೆಂಗನಿಂಗಪ್ಪನವರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು