ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿ

ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ಮಾಹಿತಿ ಸಂಗ್ರಹಕ್ಕೆ ಸಿಇಒ ನಿರ್ದೇಶನ
Last Updated 2 ಮಾರ್ಚ್ 2020, 14:46 IST
ಅಕ್ಷರ ಗಾತ್ರ

ಹಾವೇರಿ: ಬೇಸಿಗೆ ಹಾಗೂ ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಇಲಾಖಾವಾರು ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಸಿದ್ಧವಾಗುವಂತೆ ಜಿಲ್ಲಾ ಪಂಚಾಯಿತಿಸಿಇಒ ರಮೇಶ ದೇಸಾಯಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಅವರು ಮಾತನಾಡಿದರು.

ಹಿಂದಿನ ವರ್ಷ ಬೇಸಿಗೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮಳೆಗಾಲದಲ್ಲಿ ಉಂಟಾದ ಪ್ರಕೃತಿ ವಿಕೋಪವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಂಭವಿಸಬಹುದಾದ ಅವಘಡ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ವಿಪತ್ತು ನಿರ್ವಹಣೆ ಎದುರಿಸಲು ಸನ್ನದ್ಧರಾಗುವಂತೆ ಸೂಚನೆ ನೀಡಿದರು.

ತಾಲ್ಲೂಕುವಾರು ತಂಡ ರಚಿಸಿ:

ತಕ್ಷಣವೇ ತಾಲ್ಲೂಕುವಾರು ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ ಕರೆದು ಬೇಸಿಗೆ ಹಾಗೂ ಮಳೆಗಾಲದ ವಿಪತ್ತುಗಳ ನಿರ್ವಹಣೆಗೆ ಸಮಿತಿಗಳನ್ನು ರಚಿಸಿ ಸಮಸ್ಯೆಗಳಿಗೆ ತ್ವರಿತ ಸ್ಪಂದನೆಗೆ ಸಿದ್ಧರಾಗಬೇಕು. ಪರಸ್ಪರ ಸಮನ್ವಯದಿಂದ ಮಾಹಿತಿ ವಿನಿಮಯ ಮಾಡಿಕೊಂಡು ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಯಾವ– ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂಬುದನ್ನು ಈಗಿನಿಂದಲೇ ಸರ್ವೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ತಹಶೀಲ್ದಾರ್‌ ಗಮನಕ್ಕೆ ತಂದು ಈ ಗ್ರಾಮಗಳ ಪಟ್ಟಿಗೆ ಅನುಮೋದನೆ ಪಡೆಯಬೇಕು. ಕುಡಿಯುವ ನೀರಿನ ಸಮಸ್ಯೆ ಕುರಿತು ಮುನ್ನೆಚ್ಚರಿಕೆಯಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಸಕಾಲಕ್ಕೆ ಕುಡಿಯುವ ನೀರಿನ ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆ ಅವಧಿಯಲ್ಲಿ ಜಾನುವಾರುಗಳಿಗೆ ಮೇವಿನ ದಾಸ್ತಾನು ಕುರಿತು ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸುಧಾಕರ ಸಭೆಗೆ ಮಾಹಿತಿ ನೀಡಿ, ಪ್ರಸ್ತುತ 8.38 ಲಕ್ಷ ಮೆಟ್ರಿಕ್ ಟನ್ ಮೇವು ದಾಸ್ತಾನಿದೆ. ಪ್ರಸ್ತುತ ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಮುಂದಿನ 56 ವಾರಗಳ ಕಾಲ ಮೇವಿನ ಕೊರತೆ ಉಂಟಾಗುವುದಿಲ್ಲ ಸಭೆಗೆ ಮಾಹಿತಿ ನೀಡಿದರು.

ಚರಂಡಿ ಸ್ವಚ್ಛತೆ:

ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಾಜ ಕಾಲುವೆ, ಚರಂಡಿಗಳನ್ನು ಮಳೆಗಾಲ ಮುನ್ನವೇ ಸ್ವಚ್ಛಗೊಳಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಬೇಕು. ತಗ್ಗು ಪ್ರದೇಶಕ್ಕೆ ನೀರು ನುಗ್ಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಹಾವೇರಿ ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ತಹಶೀಲ್ದಾರ್‌ ಶಂಕರ್, ಬಸನಗೌಡ ಕೋಟೂರ, ಶರಣಮ್ಮ ಕಾರಿ, ಶ್ರೀನಿವಾಸ ಆಲದರ್ತಿ, ಪದ್ಮಾವತಿ, ಮಲ್ಲಿಕಾರ್ಜುನ ಮಠದ, ಚೈತ್ರ, ವಿರೇಂದ್ರ ಕಡಕೋಳ, ವಾಸುದೇವ ದೊಡ್ಡಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT