ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲೆಯಲ್ಲಿ ಏಪ್ರಿಲ್ 1ರವರೆಗೆ ನಿಷೇಧಾಜ್ಞೆ ಜಾರಿ

ಧಾರ್ಮಿಕ ಕಾರ್ಯಕ್ರಮಗಳು ರದ್ದು: ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ
Last Updated 21 ಮಾರ್ಚ್ 2020, 14:17 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಉಪ ವಿಭಾಗದ ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ ತಾಲ್ಲೂಕುಗಳ ವ್ಯಾಪ್ತಿ ಹಾಗೂ ಸವಣೂರು ಉಪವಿಭಾಗದ ಸವಣೂರು, ಶಿಗ್ಗಾವಿ, ಹಾನಗಲ್‌ ಸೇರಿದಂತೆ ಜಿಲ್ಲೆಯಾದ್ಯಂತ ಏಪ್ರಿಲ್‌ 1ರವರೆಗೆ ನಿಷೇಧಾಜ್ಞೆ ಜಾರಿಗೊಂಡಿದೆ.

ಕೊರೊನಾ ವೈರಸ್ (ಕೋವಿಡ್-19) ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮದುವೆ ಸಮಾರಂಭಗಳನ್ನೂ ಮುಂದೂಡಲು ಹಾಗೂ ಜಾತ್ರೆ, ಸಂತೆ, ಉರುಸ್‌, ಉತ್ಸವಗಳು ಮತ್ತು ಮಾಲ್‌, ಶಾಪಿಂಗ್‌ ಮಾರ್ಟ್‌ ಹಾಗೂ ಬಾರ್‌ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪ್ರದೇಶಗಳಲ್ಲಿ ಏಪ್ರಿಲ್‌ 1ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಹಾವೇರಿ ಉಪವಿಭಾಗಾಧಿಕಾರಿ ಡಾ.ದೀಲಿಷ್ ಶಶಿ ಮತ್ತು ಸವಣೂರು ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದುಕಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

ಹೋಟೆಲ್, ರೆಸ್ಟೋರೆಂಟ್, ಕೆಫೆಗಳಲ್ಲಿ ಆಹಾರವನ್ನು ಸಾಮೂಹಿಕವಾಗಿ ಸೇವನೆ ಮಾಡುವ ಬದಲಾಗಿ ಆಹಾರವನ್ನು ಪಾರ್ಸಲ್ ಮುಖಾಂತರ ಪಡೆದುಕೊಳ್ಳಬೇಕು. ಕುಳಿತುಕೊಂಡು ಆಹಾರ ಸೇವನೆ ಮಾಡಲು ಜಾಗವಿರದ ಸಣ್ಣ ಔಟ್‍ಲೆಟ್‍ಗಳನ್ನು ಹೊರತುಪಡಿಸಿ, ಗ್ರಾಹಕರ ಮಧ್ಯೆ 6 ಅಡಿ ಅಂತರ ಕಾಯ್ದುಕೊಳ್ಳುವುದು ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಂಡಿರುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಸಹಾಯವಾಣಿ ವಿವರ:

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸವಣೂರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ದೂ: 08378-241646, ಮೊ.9591812387, ಸವಣೂರ ತಹಶೀಲ್ದಾರ್‌ ಕಚೇರಿಯಲ್ಲಿ ದೂ:08378-241626, ಮೊ.9110240039/ 8970580058, ಶಿಗ್ಗಾಂವ ತಹಶೀಲ್ದಾರ್‌ ಕಚೇರಿಯಲ್ಲಿ 08378-255044, ಮೊ:94485 49986, ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ದೂ:08379-262241, ಮೊ:8549022547 ಸಹಾಯವಾಣಿ ಸ್ಥಾಪಿಸಲಾಗಿದೆ.

ಧಾರ್ಮಿಕ ಕಾರ್ಯಕ್ರಮಗಳು ಸ್ಥಗಿತ

ಹಾವೇರಿ: ರಾಜ್ಯದಲ್ಲಿ ಕರೋನಾ ವೈರಸ್ (ಕೋವಿಡ್–19) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಲ್ಲಿ ನಡೆಯುವ ಎಲ್ಲಾ ಸೇವೆಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ ಮತ್ತು ದೇವರ ದರ್ಶನ ಹಾಗೂ ಇತರೆ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ದೇವಾಲಯಗಳಲ್ಲಿನ ವಸತಿ ಗೃಹ, ಅತಿಥಿಗಳನ್ನು ಭಕ್ತರಿಗೆ ಹಂಚಿಕೆ ಮಾಡುವುದನ್ನು ಮಾರ್ಚ್ 20ರಿಂದ ರದ್ದುಪಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳು, ಸಂಸ್ಥೆಗಳಲ್ಲಿ ದಿನನಿತ್ಯ ಶಾಸ್ತ್ರ ಸಂಪ್ರದಾಯದಂತೆ ನಡೆಯುವ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳನ್ನು ದೇವಾಲಯದ ಒಳಗೆ ಮತ್ತು ಒಳಪ್ರಕಾರದಲ್ಲಿ ಆಗಮಿಕರು, ತಂತ್ರಿಗಳು, ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿ ವರ್ಗದವರು ನಡೆಸುವ ಷರತ್ತಿಗೊಳಪಟ್ಟು ಉಳಿದಂತೆ ದೇವಾಲಯಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಮುಂದಿನ ಆದೇಶವರೆಗೆ ರದ್ದುಪಡಿಸಲಾಗಿದೆ.

ದೇವಾಲಯಗಳಲ್ಲಿ ರಥೋತ್ಸವ ನಿಲ್ಲಿಸುವ ಸಂಪ್ರದಾಯವಿಲ್ಲದ ಕಾರಣ ಹಾಗೂ ಈಗಾಗಲೇ ಪ್ರಾರಂಭವಾಗಿರುವ ಜಾತ್ರಾ ಉತ್ಸವ, ರಥೋತ್ಸವಗಳನ್ನು ದೇವಾಲಯದ ಆಗಮಿಕರು, ತಂತ್ರಿಗಳು, ಅರ್ಚಕರು, ಸಿಬ್ಬಂದಿಯವರು ಸಾಂಕೇತಿಕವಾಗಿ ಹೋಮಾಧಿಗಳು, ಪ್ರಾಯಶ್ಚಿತ್ತಾದಿಗಳು ಮತ್ತು ಕೇವಲ ಉತ್ಸವಗಳನ್ನು ದೇವಾಲಯದ ಆವರಣದಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಸಂದಣಿ ಇಲ್ಲದಂತೆ ನಡೆಸಲು ತಿಳಿಸಲಾಗಿದೆ.

ಕರೋನಾ ವೈರಸ್ (ಕೋವಿಡ್–19) ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಆಯಾ ಜಿಲ್ಲಾಧಿಕಾರಿ ಹೊರಡಿಸುವ ಆದೇಶಗಳನ್ನು ಧಾರ್ಮಿಕ ದತ್ತಿ ಇಲಾಖೆ ಸಂಬಂಧಪಟ್ಟ ಅಧಿಕಾರಿಗಳು ಪಾಲಿಸಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT