ಭಾನುವಾರ, ಸೆಪ್ಟೆಂಬರ್ 19, 2021
23 °C

ವಿದ್ಯುತ್‌ ಖಾಸಗೀಕರಣ ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ಮಾಡಿರುವ 3 ಕರಾಳ ಕಾನೂನುಗಳನ್ನು ಹಾಗೂ ವಿದ್ಯುತ್‌ ಖಾಸಗೀಕರಣ ಹಿಂಪಡೆಯಲು ಆಗ್ರಹಿಸಿ ಆಗಸ್ಟ್‌ 2ರಂದು ‘ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ’ ಹಾಕಲಿದ್ದೇವೆ ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ವಿದ್ಯುತ್‌ ಖಾಸಗೀಕರಣದಿಂದ ರೈತರಿಗೆ ದೊಡ್ಡ ವಿಪತ್ತು ಎದುರಾಗುವ ಲಕ್ಷಣಗಳಿವೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವುದರ ಮೂಲಕ ಪಂಪ್‌ಸೆಟ್‌ ಬಳಕೆದಾರರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರೈತರು ಹೆದರುವ ಅಗತ್ಯವಿಲ್ಲ. ಮೀಟರ್‌ ಅಳವಡಿಸಲು ಬರುವ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಹಾಕುತ್ತೇವೆ’  ಎಂದು ಎಚ್ಚರಿಕೆ ನೀಡಿದರು. 

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಅಂದು ಕಾಗಿನೆಲೆ ಕ್ರಾಸ್‌ನಿಂದ ಪ್ರತಿಭಟನಾ ಜಾಥಾದ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಸಮಸ್ತ ರೈತರು, ಕೃಷಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತ ಮಹಿಳೆಯರು, ವಿವಿಧ ಸಂಘಟನೆಗಳು ಭಾಗವಹಿಸಬೇಕು ಎಂದು ವಿನಂತಿ ಮಾಡಿದರು. 

‘ಸತತ 8 ತಿಂಗಳುಗಳಿಂದ ದೆಹಲಿ ಗಡಿಯಲ್ಲಿ ಮಳೆ, ಚಳಿ, ಗಾಳಿ ಲೆಕ್ಕಿಸದೆ ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಅನೇಕ ರೈತರು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಕೃಷಿಗೆ ಮಾರಕವಾದ ಭೂ–ಸುಧಾರಣೆ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ಹಾಗೂ ವಿದ್ಯುತ್‌ ಖಾಸಗೀಕರಣ ಮಾಡುವುದರ ಮೂಲಕ ದೇಶದ ರೈತರಿಗೆ ಗಾಯದ ಮೇಲೆ ಬರೆ ಎಳೆದಿದ್ದಾರೆ’ ಎಂದು ಹೇಳಿದರು. 

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಮಾತನಾಡಿ, ‘ಪ್ರತಿ ಗ್ರಾಮ ಪಂಚಾಯಿತಿಗೆ ಆಸ್ಪತ್ರೆ ಸ್ಥಾಪಿಸಿ, ವೈದ್ಯರನ್ನು ನೇಮಕ ಮಾಡಬೇಕು, ರಾಷ್ಟ್ರೀಯ ಹೆದ್ದಾರಿ–4ರಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಛತ್ರ, ಮೋಟೆಬೆನ್ನೂರ, ಗುಂಡೇನಹಳ್ಳಿ, ನೆಲೋಗಲ್ಲ ಗ್ರಾಮಗಳಿಗೆ ಸರ್ವಿಸ್‌ ರಸ್ತೆಯನ್ನು ಕೂಡಲೇ ನಿರ್ಮಿಸಬೇಕು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡದಂತೆ ರಾಜ್ಯದಲ್ಲಿ ಕಾನೂನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. 

ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್‌.ನಾಯ್ಕ್‌ ಮಾತನಾಡಿ, ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮತ್ತು ಹಾಲು ಒಕ್ಕೂಟ ಸ್ಥಾಪಿಸಬೇಕು. 2015ರಿಂದ 2021ರವರೆಗೆ ಬೆಳೆವಿಮೆ ಹಣ ಹಾಗೂ ಅತಿವೃಷ್ಟಿ ಪರಿಹಾರವನ್ನು ತಕ್ಷಣ ರೈತರ ಖಾತೆಗೆ ಜಮಾ ಮಾಡಬೇಕು. 6 ತಿಂಗಳಿಂದ ಬಾಕಿ ಉಳಿದ ಹಾಲಿನ ಸಹಾಯಧನವನ್ನು ಕೂಡಲೇ ಪಾವತಿಸಬೇಕು. ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ನೂರ್‌ ಅಹಮದ್‌ ಮುಲ್ಲಾ, ಜಿಲ್ಲಾ ಸಂಚಾಲಕ ವೀರಭದ್ರಪ್ಪ ಅಗಡಿ ಮುಂತಾದವರು ಇದ್ದರು.

‘ಮಾದರಿ ಜಿಲ್ಲೆ’ಯಾಗಿ ರೂಪಿಸಲು ಒತ್ತಾಯ: ನಮ್ಮ ಜಿಲ್ಲೆಯವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು ಸಂತಸದ ಸಂಗತಿ. ಅವರು ಹುಬ್ಬಳ್ಳಿ ಕಡೆಯ ಗಮನವನ್ನು ಕಡಿಮೆ ಮಾಡಿ, ರಾಜ್ಯದಲ್ಲೇ ಹಾವೇರಿ ಜಿಲ್ಲೆಯನ್ನು ‘ಮಾದರಿ ಜಿಲ್ಲೆ’ಯನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲತೇಶ ಪೂಜಾರ ಒತ್ತಾಯಿಸಿದರು. 

ಶಿಗ್ಗಾವಿ–ಸವಣೂರ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾದ ಎಸ್‌.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾದರೂ, ಜಿಲ್ಲೆಯ ಅಭಿವೃದ್ಧಿಗೆ ಗಮನಹರಿಸಲಿಲ್ಲ. ಆದರೆ, ಬೊಮ್ಮಾಯಿ ಅವರ ಮೇಲೆ ಹೆಚ್ಚು ನಿರೀಕ್ಷೆಗಳಿವೆ. ರೈತರ ಆಸೆಗೆ ತಣ್ಣೀರೆರಚುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು