ರಾಣೆಬೆನ್ನೂರು: ಇಂದಿನ ಪರಿಸ್ಥಿತಿಯಲ್ಲಿ ಏಕಬೆಳೆ ಪದ್ಧತಿ ಅಪಾಯಕಾರಿ. ಇದರಿಂದ ಮಣ್ಣಿನ ಸತ್ವ ನಾಶಗೊಳ್ಳುವುದಲ್ಲದೆ, ಅಮೂಲ್ಯ ಮೇಲ್ಮಣ್ಣು ಕೂಡಾ ಸವೆಯುತ್ತದೆ. ಈ ಹಿನ್ನೆಲೆಯಲ್ಲಿ ಬಹುಬೆಳೆ ಅಥವಾ ಅಕ್ಕಡಿ ಸಾಲು ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಙಾನ ಕೇಂದ್ರ ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಶಿವಮೂರ್ತಿ ಡಿ ಹೇಳಿದರು.
ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಶನಿವಾರ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ ಮತ್ತು ಸಹಜ ಸಮೃದ್ಧ ಸಂಸ್ಥೆಗಳ ನೆರವಿನಿಂದ ರೈತರ ಉತ್ಪಾದಕರ ಕಂಪನಿಯ ಶೇರುದಾರರಿಗೆ ಸಮಗ್ರ ಹಾಗೂ ಸಾವಯವ ಕೃಷಿ ಮತ್ತು ಸಜೀವಿ ಮಣ್ಣು ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಮೀಣ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿದ ಪೂಚಿಮದ್ದು - ಬೆಳೆಪೀಡೆ ನಿವಾರಕ ಔಷಧಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಾಯಿಲ್ ಸಂಸ್ಥೆಯ ಶ್ರೀನಿವಾಸ್ ವಾಸು ಅವರು ಸಜೀವಿ ಮಣ್ಣು - ಪೋಷಕಾಂಶಗಳ ತವರು ವಿಷಯ ಕುರಿತು ಮಾತನಾಡಿದ ಅವರು ನಾಡಿನ ಹೊಲಗಳಲ್ಲಿನ ಮೇಲ್ಮಣ್ಣು ಸವೆಯುತ್ತಿರುವುದರಿಂದ, ಬೆಳೆಗಳ ಇಳುವರಿ ಕುಸಿಯುತ್ತಿದೆ. ಜೊತೆಗೆ ಉತ್ಪಾದಿತ ಆಹಾರ ಧಾನ್ಯಗಳ ಗುಣಮಟ್ಟವೂ ಸಹ ಕಳಪೆಯಾಗುತ್ತಿದೆ. ಈ ಕಾರಣದಿಂದಲೇ ಸಮಾಜದಲ್ಲಿ ಆರೋಗ್ಯದ ಪರಿಸ್ಥಿತಿ ಏರುಪೇರಾಗುತ್ತಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ವೈವಿಧ್ಯತೆ ಆಧಾರಿತ ಪ್ರಕೃತಿ ಪೂರಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕಿದೆ ಎಂದು ರೈತರಿಗೆ ತಿಳಿಸಿದರು.
ಪಶುರೋಗತಜ್ಞ ಡಾ. ಎನ್. ಎಸ್. ಚೌಡಾಳ ಮತ್ತು ಡಾ. ಮಹೇಶ್ ಕಡಗಿ ಕೃಷಿಯಲ್ಲಿ ಹೈನುಗಾರಿಕೆ ಹಾಗೂ ಪಶು ಆರೋಗ್ಯ, ಕೃಷಿಯಲ್ಲಿ ಮೀನು ಸಾಕಾಣಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.
ವನಸಿರಿ ಸಂಸ್ಥೆಯ ನಿರ್ದೇಶಕ ಎಸ್. ಡಿ. ಬಳಿಗಾರ ಮಾತನಾಡಿ, ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಅಡಿಯಲ್ಲಿ ಸಮಗ್ರ ಕೃಷಿ ಚಟುವಟಿಕೆ ಕೈಗೊಳ್ಳುವ ಮಣ್ಣು ಮತ್ತು ನೀರಿನ ಸಂರಕ್ಷಣೆಯಂತಹ ಕಾರ್ಯಕ್ರಮಗಳನ್ನು ರೈತರು ಕ್ರಿಯಾಯೋಜನೆಗಳಲ್ಲಿ ಸೇರ್ಪಡೆ ಮಾಡಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಮೂಲಕ ತಮ್ಮ ಕೃಷಿ ಆದಾಯಗಳನ್ನು ಹೆಚ್ಚಿಗೆ ಮಾಡಿಕೊಳ್ಳಬೇಕು ಎಂದರು.
ತೋಟಗಾರಿಕೆ ಇಲಾಖೆ ಜಗದೀಶ್, ಜಿ. ಎನ್. ಸಿಂಹ ಸೇರಿದಂತೆ ಹಿರೇಕೆರೂರು, ಬ್ಯಾಡಗಿ ಮತ್ತು ರಾಣೆಬೆನ್ನೂರು ತಾಲ್ಲೂಕಿನ ೭೫ ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.