ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಮೇಲ್ಸೇತುವೆ ಕಾಮಗಾರಿ: ನ್ಯೂನತೆ ಸರಿಪಡಿಸಲು ವಾರ ಗಡುವು

Published 18 ಜನವರಿ 2024, 8:24 IST
Last Updated 18 ಜನವರಿ 2024, 8:24 IST
ಅಕ್ಷರ ಗಾತ್ರ

ರಾಣೆಬೆನ್ನೂರು: ರಾಣೆಬೆನ್ನೂರು -ದೇವರಗುಡ್ಡ ರಸ್ತೆಯ ರೇಲ್ವೆ ಗೇಟ್ ನಂ. 219 ಕ್ಕೆ ಮಂಜೂರಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿಯ ನ್ಯೂನತೆಗಳನ್ನು ಇನ್ನು ಒಂದು ವಾರದೊಳಗೆ ಸರಿಪಡಿಸಬೇಕು ಎಂದು ಉಪವಿಭಾಗಾಧಿಕಾರಿ ಎಚ್‌.ಬಿ. ಚೆನ್ನಪ್ಪ ತಾಕೀತು ಮಾಡಿದರು.

ಕಳಪೆ ಕಾಮಗಾರಿ ಹಾಗೂ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ವಿಳಂಬ ನೀತಿ ಖಂಡಿಸಿ, ರೈಲ್ವೆ ಇಲಾಖೆಯ ಎಂಜಿನಿಯರ್‌, ಮೇಲ್ಸೇತುವೆ ಗುತ್ತಿಗೆ ಪಡೆದ ಎಂ.ವಿ.ವಿ.ಎಸ್‌ ಕನ್‌ಸ್ಟ್ರಕ್ಷನ್‌ ಕಂಪನಿಯ ಗುತ್ತಿಗಾರನ ಬೇಜವಾಬ್ದಾರಿತನ ಮತ್ತು ಕಾಮಗಾರಿ ನಿಯಮಗಳ ಉಲ್ಲಂಘನೆ ಸರಿಪಡಿಸುವಂತೆ ಒತ್ತಾಯಿಸಿ ರೈತರು ಮತ್ತು ಕನ್ನಡಪರ ಸಂಘಟನೆಗಳು ಬುಧವಾರ ರೈಲು ತಡೆ ಮಾಡಲು ಕರೆ ನೀಡಿದ್ದ ಕಾರಣ ತಹಶೀಲ್ದಾರ ಕಚೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.

‘ಹೋರಾಟ ಸಮಿತಿ ಸತತ 4ವರ್ಷಗಳ ಹೋರಾಟ ನಡೆಸಿದ ಫಲವಾಗಿ ರೈಲ್ವೆ ಸೇತುವೆ ಮಂಜೂರಾಗಿದೆ. ಆ ಯೋಜನೆ ಸಮರ್ಪಕವಾಗಿ ಲೋಕಾರ್ಪಣೆಗೊಳ್ಳಲು ಅವರ ಬೇಡಿಕೆಗಳು ಸಮಂಜಸವಾಗಿವೆ. ಕಳಪೆ ಕಾಮಗಾರಿ, ನಿಯಮ ಉಲ್ಲಂಘನೆ, ಕಂಪನಿಯ ಗುತ್ತಿಗೆದಾರನ ಬೇಜವಾಬ್ದಾರಿತನ ಸಹಿಸಲಾಗದು. ಒಂದು ವಾರದೊಳಗೆ ಈ ನ್ಯೂನತೆ ಸರಿಪಡಿಸದಿದ್ದರೆ, ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಹೋರಾಟಗಾರರ ಸಮಕ್ಷಮದಲ್ಲಿ ಸಭೆ ಕರೆದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ಕೆ. ಗುರುಬಸವರಾಜ ಅವರು ಸಂಬಂಧಿಸಿದ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಸಭೆಗೆ ಮಾಹಿತಿಯೊಂದಿಗೆ ಕರೆಯಿಸಿ, ಯಾವುದೇ ಅಹಿತಕರ ಘಟನೆ ಘಟಿಸದಂತೆ ಸಾಕಷ್ಟು ಜವಾಬ್ದಾರಿ ವಹಿಸಿ, ರೈಲು ತಡೆ ಚಳವಳಿ ನಡೆಸದಂತೆ ಹೋರಾಟಗಾರರ ಮನವೊಲಿಸಲು ಯಶಸ್ವಿಯಾದರು.

ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಎಫ್‌. ಪಾಟೀಲ ಮಾತನಾಡಿ, ‘ಉಪವಿಭಾಗಾಧಿಕಾರಿ ಎಚ್‌.ಬಿ. ಚೆನ್ನಪ್ಪ ಅವರ ಭರವಸೆ ಮೇರೆಗೆ ರೈಲು ತಡೆಯನ್ನು ಅನಿರ್ಧಿಷ್ಟಾವಧಿ ಮುಂದೂಡಲಾಗಿದೆ.  ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಮೇಲ್ಸೇತುವೆ ಮಂಜೂರು ಮಾಡಿಸಿಕೊಂಡ ಹೋರಾಟಗಾರರ ಕನಸಿನ ಯೋಜನೆ ಇದಾಗಿದೆ. ಈ ಯೋಜನೆ ಗುತ್ತಿಗೆ ಪಡೆದ ಕಂಪನಿಯ ಬೇಜವಾಬ್ದಾರಿತನದಿಂದಾಗಿ ಹಳ್ಳ ಹಿಡಿಯುತ್ತಿದೆ’ ಎಂದು ದೂರಿದರು.

ರೈಲ್ವೆ ಇಲಾಖೆಯ ಎಇಇ ವೇಣುಗೋಪಾಲ ಪಿ, ಎಇ ಎಂಜಿನಿಯರ್ ರಜತ್ ಪಿ, ಆರ್.ಪಿ.ಎಫ್‌ನ ಷಣ್ಮುಖಪ್ಪ ಎಸ್., ಜಿಆರ್‌ಪಿ ಇನ್‌ಸ್ಪೆಕ್ಟರ್ ಸತ್ಯಪ್ಪ ಮೂಖಣ್ಣನವರ, ಸಬ್ ಎಂಜಿನಿಯರ್ ಗೋವರ್ಧನ ರಡ್ಡಿ, ರೈಲ್ವೆ ಪೊಲೀಸ್ ಆರ್.ಎಚ್. ಗುಳೇದ, ಗ್ರಾಮೀಣ ಪೊಲೀಸ್ ಇನ್‌ಸ್ಪೆಕ್ಟರ್‌ ಪ್ರವೀಣಕುಮಾರ ಇದ್ದರು.

ಜಿಲ್ಲಾ ಘಟಕದ ಅಧ್ಯಕ್ಷ ಈರಣ್ಣ ಹಲಗೇರಿ, ಕಾನೂನು ಸಲಹೆಗಾರ ಎಸ್.ಡಿ. ಹಿರೇಮಠ, ಗದಿಗೆಪ್ಪ ಹೊಟ್ಟಿಗೌಡ್ರ, ಪ್ರಕಾಶ ಪೂಜಾರ ನಗರಸಭೆ ಸದಸ್ಯರು, ಪ್ರಭುಸ್ವಾಮಿ ಕರ್ಜಗಿಮಠ, ಚಂದ್ರಣ್ಣ ಬೇಡರ, ಇಕ್ಬಾಲ್‌ಸಾಬ್ ರಾಣೆಬೆನ್ನೂರು, ಬಸವರಾಜ ಬಣಕಾರ, ಜಗದೀಶ ಕೆರೂಡಿ, ಕೊಟ್ಟೇಶಪ್ಪ ಎಮ್ಮಿ, ಶ್ರೀಕಾಂತ ಬಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT