ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾನಗಲ್: ಬಯಲಾಟಕ್ಕೆ ಜೀವ ತುಂಬಿದ ಬೆಂಡಿಗೇರಿ

200 ಅಹೋರಾತ್ರಿ ಪ್ರದರ್ಶನ ನೀಡಿದ ಹೆಗ್ಗಳಿಕೆ: ರಾಜ್ಯೋತ್ಸವ ಪ್ರಶಸ್ತಿಯ ಗರಿ
Last Updated 28 ಅಕ್ಟೋಬರ್ 2020, 12:15 IST
ಅಕ್ಷರ ಗಾತ್ರ

ಹಾನಗಲ್: ಬಯಲಾಟದಲ್ಲಿ ಮದ್ದಲಿ (ಮೃದಂಗ) ವಾದ್ಯ ನುಡಿಸುವ ಕಲೆಯಲ್ಲಿ ಪರಿಣತಿ ಸಾಧಿಸಿರುವ ತಾಲ್ಲೂಕಿನ ಮಾಸನಕಟ್ಟಿ ಗ್ರಾಮದ ಚನ್ನಬಸಪ್ಪ ಬೆಂಡಿಗೇರಿ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ.

60 ವರ್ಷಗಳಿಂದ ನಿರಂತರವಾಗಿ ಬಯಲಾಟ ಕಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚನ್ನಬಸಬಪ್ಪ ಬೆಂಡಿಗೇರಿ ನಾಡಿನಾದ್ಯಂತ ಬಯಲಾಟ ಪ್ರಕಾರಗಳನ್ನು ಪ್ರಚುರಪಡಿಸಿದ ಜಿಲ್ಲೆಯ ಹೆಮ್ಮೆಯ ಸಾಧಕ.

ಬಯಲಾಟ ಪ್ರದರ್ಶನ ರಂಗೇರಲು ಹಿನ್ನೆಲೆ ಸಂಗೀತ ಬಹುಮುಖ್ಯ. ಬಯಲಾಟದ ಪದಗಳಿಗೆ ಹದವಾಗಿ ಮೃದಂಗ ನುಡಿಸುವ ಚನ್ನಬಸಪ್ಪ, ಹೊಸ ಮೆರುಗು ನೀಡುತ್ತಾರೆ. ಪ್ರದರ್ಶನದ ವೇಳೆ ಮೃದಂಗ ವಾದ್ಯವನ್ನು ನಿಂತುಕೊಂಡು ನುಡಿಸಬೇಕು. ಸುಮಾರು 200 ಅಹೋರಾತ್ರಿ ಪ್ರದರ್ಶನಗಳನ್ನು ನಿಂತುಕೊಂಡೇ ಮೃದಂಗ ನುಡಿಸಿ ಜನ ಮೆಚ್ಚುಗೆಗೆ ಪಾತ್ರರಾದವರು.

84 ವರ್ಷದ ಈ ಅಜ್ಜ ಈಗಲೂ ಬಯಲಾಟದ ಪ್ರದರ್ಶನಕ್ಕೆ ಮೃದಂಗ ಬಾರಿಸಲು ನಿಲ್ಲುತ್ತಾರೆ. ಮದ್ದಲಿ ಕಣ್ಣಿಗೆ ಬಿದ್ದರೆ ಚನ್ನಬಸಪ್ಪ ಕೈ ಬೆರಳುಗಳಲ್ಲಿ ಸಂಚಲನ ಶುರುವಾಗುತ್ತದೆ. ಉಮೇದಿಗೆ ಒಳಗಾಗುವ ಚನ್ನಬಸಪ್ಪ ಮೃದಂಗ ನುಡಿಸುತ್ತಾ ಮೈದುಂಬುತ್ತಾರೆ.
ಗ್ರಾಮದ ಯುವಕರಿಗೆ ಬಯಲಾಟದ ತರಬೇತಿ ನೀಡುತ್ತಾರೆ. ಮೃದಂಗ ಕಲಿಕೆ ಆಸಕ್ತರಿಗೆ ವಾದ್ಯ ನುಡಿಸುವ ಸೂತ್ರ ಹೇಳುತ್ತಾರೆ. ಗೊಟಗೋಡಿ ಜಾನಪದವಿಶ್ವವಿದ್ಯಾಲಯಕ್ಕೂ ಮೃದಂಗ ವಾದ್ಯ ನುಡಿಸುವುದಕ್ಕಾಗಿ ಭೇಟಿ ಕೊಡುತ್ತಾರೆ.

‘ಬಯಲಾಟ ಅಪರೂಪವಾಗುತ್ತಿದೆ. ಈ ಕಲೆ ಉಳಿಯಬೇಕು. ಗ್ರಾಮದಲ್ಲಿ 3 ಬಯಲಾಟ ತಂಡಗಳಿವೆ. ಈ ತಂಡಗಳಿಗೆ ಮದ್ದಲಿ ನಾನೇ ನುಡಿಸುತ್ತೇನೆ. ಆರಂಭದಲ್ಲಿ ಪಾತ್ರಧಾರಿಯಾಗಿ ಬಯಲಾಟದಲ್ಲಿ ತೊಡಗಿಕೊಳ್ಳುತ್ತಿದ್ದೆ. ಗ್ರಾಮದ ಭೀಮರಾವ್ ದೇಶಪಾಂಡೆ ಮತ್ತು ಶಂಕ್ರಣ್ಣ ದೇಶಪಾಂಡೆ ಗರಡಿಯಲ್ಲಿ ಮೃದಂಗ ಬಾರಿಸುವ ಕಲೆ ಸಿದ್ಧಿಸಿಕೊಂಡೆ’ ಎಂದು ಚನ್ನಬಸಪ್ಪ ಹೇಳುತ್ತಾರೆ.

ಮಾಸನಕಟ್ಟಿ ಬಯಲಾಟ ಕಲಾವಿದರ ಗ್ರಾಮ. ಸುಗ್ಗಿ ವೇಳೆ ಗ್ರಾಮದಲ್ಲಿ ಬಯಲಾಟ ಪ್ರದರ್ಶನಗಳು ನಡೆಯುತ್ತವೆ. ಗ್ರಾಮಸ್ಥರು ಬಯಲಾಟವನ್ನು ಹಬ್ಬದಂತೆ ಸಂಭ್ರಮಿಸುತ್ತಾರೆ. ಪ್ರೋತ್ಸಾಹದ ಕೊರತೆ ಕಾರಣ ಬಯಲಾಟ ಕಲಾವಿದರು ಬೆಳಕಿಗೆ ಬರುತ್ತಿಲ್ಲ ಎಂದು ಗ್ರಾಮದ ಹಿರಿಯರಾದ ಎಸ್‌.ಎಸ್‌.ಹಿರೇಮಠ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT