ಭಾನುವಾರ, ಮೇ 22, 2022
28 °C
ಕೆರಿಮತ್ತಿಹಳ್ಳಿಯ ಸ್ನಾತಕೋತ್ತರ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸಲು ಎಸ್‌ಎಫ್‌ಐ ಆಗ್ರಹ

ಕಾಯಂ ಬೋಧಕರ ನೇಮಕಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕಿನ ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಕಾಯಂ ಬೋಧಕರನ್ನು ನೇಮಕ ಮಾಡಬೇಕು ಹಾಗೂ ಮೂಲಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಕೇಂದ್ರದ ಮುಂದೆ ಶನಿವಾರ ಪ್ರತಿಭಟನೆ ನಡೆಯಿತು. 

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ‘ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮೂಲಸೌಲಭ್ಯ ಕೊರತೆ ಎದುರಿಸುತ್ತಿದೆ. ಉನ್ನತ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಕಲಿಕಾ ಸ್ನೇಹಿ ವಾತಾವರಣ ಸೃಷ್ಟಿಸಬೇಕಿರುವ ಸರ್ಕಾರ ಹಾಗೂ ವಿಶ್ವವಿದ್ಯಾಲಯವು ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಸ್‌ಗಳ ಕೊರತೆ

ಹಾವೇರಿ ನಗರದಿಂದ 8 ಕಿ.ಮೀ. ದೂರದಲ್ಲಿರುವ ಕೇಂದ್ರಕ್ಕೆ ಸಮರ್ಪಕ ಬಸ್ ಸೌಲಭ್ಯವಿಲ್ಲ. ಹೀಗಾಗಿ ಹೊಸಳ್ಳಿಯಿಂದ 1.5 ಕಿ.ಮೀ. ಕಾಲ್ನಡಿಗೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕಿದೆ. ಸ್ನಾತಕೋತ್ತರ ಕೇಂದ್ರ ಕ್ಯಾಂಪಸ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಇಲ್ಲ. ಕಾಯಂ ಬೋಧಕರಿಲ್ಲದೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಜೆರಾಕ್ಸ್‌ ಸೆಂಟರ್‌, ಇಂಟರ್‌ನೆಟ್‌ ಸೌಲಭ್ಯ, ಕ್ಯಾಂಟೀನ್‌ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಹೇಳಿದರು. 

ಪ್ರವೇಶಾತಿ ಕುಸಿತ

ಮೂಲ ಸೌಲಭ್ಯಗಳ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ಕುಂಠಿತಗೊಳ್ಳುತ್ತಿರುವುದು ತೀವ್ರ ಆತಂಕ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ ಅವರು ಸ್ನಾತಕೋತ್ತರ ಕೇಂದ್ರದ ಪ್ರಗತಿಗೆ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಆಗ್ರಹಿಸುತ್ತದೆ ಎಂದರು. 

ವಿಭಾಗವಾರು ಶಿಕ್ಷಕರಿಲ್ಲದೆ ವ್ಯಾಸಂಗಕ್ಕೆ ಹಿನ್ನಡೆಯಾಗುತ್ತಿದೆ. ಈ ಕೂಡಲೇ ಬಾಲಕಿಯರ ವಸತಿ ನಿಲಯ ಪ್ರಾರಂಭವಾಗಬೇಕು ಹಾಗೂ ನೂತನ ಹಾಸ್ಟೆಲ್ ಕಟ್ಟಡಕ್ಕೆ ಮೂಲ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಬೇಕು ಮತ್ತು ತಡೆಗೋಡೆ ನಿರ್ಮಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಮನವಿ ಸ್ವೀಕಾರ

ಪ್ರಭಾರ ಆಡಳಿತಾಧಿಕಾರಿ ಎಚ್.ವೈ.ಪ್ರಶಾಂತ್ ಮಾತನಾಡಿ, ‘ಕರ್ನಾಟಕ ವಿಶ್ವವಿದ್ಯಾಲಯವು ಕಾಯಂ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದರೆ ಮೆಸ್‌ ತೆರೆಯಲಾಗುವುದು. ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಾರಂಭಿಸುವುದು ಸೇರಿದಂತೆ ಉಳಿದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು. 

ಎಸ್ಎಫ್ಐ ಮುಖಂಡರಾದ ಮಾಹತೇಶ್ ಪುರದ, ಗಿರೀಶ್‌ ಗೊರವರ, ಮಹೇಶ್ ಬಾಲಣ್ಣನವರ, ಮಂಜುನಾಥ ಹೊಸಹಳ್ಳಿ, ರವಿ ಎಸ್ ಎಸ್, ಸಂತೋಷ ಲಮಾಣಿ, ಹಾಗೂ ವಿದ್ಯಾರ್ಥಿಗಳಾದ ಅಶೋಕ ಆರ್. ದ್ಯಾಮಣ್ಣನವರ, ಮಹೇಶ್ ಅಕಾರಿ, ಮಂಜುನಾಥ ಓಲೇಕಾರ, ಅಪ್ಪಾಜಿ ಗೌಡ, ಮಂಜುನಾಥ ಜೆ.ಕೆ, ಅಶ್ವಿನಿ ಸಂಗೀತಾ ಬಿ, ನಾಗರತ್ನಾ ಎನ್, ವಿದ್ಯಾ ನೇಸರಗಿ, ಶ್ವೇತಾ ಬಡಿಗೇರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು