ಸೋಮವಾರ, ಜನವರಿ 27, 2020
14 °C
ಡಿ.21ರವರೆಗೆ ನಿಷೇಧಾಜ್ಞೆ ಜಾರಿ: ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣ

ಕೇಂದ್ರದ ವಿರುದ್ಧ ಸಿಪಿಎಂ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಜಿಲ್ಲೆಯಲ್ಲಿ ಗುರುವಾರ ಪ್ರತಿಭಟನೆ ನಡೆಸಲು ಮುಂದಾಗಿದ್ದವು. ಆದರೆ, ಪೊಲೀಸರು ಅನುಮತಿ ನೀಡದ ಕಾರಣ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 

ಅಹಿತಕರ ಘಟನೆ ತಡೆಗಟ್ಟಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸೂಕ್ತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾವೇರಿ ನಗರದಲ್ಲಿ ಪ್ರತಿಭಟನೆಗಳು ಕಂಡು ಬರಲಿಲ್ಲ. ಅನ್ಯ ವಿಷಯ ಮತ್ತು ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಗುರುವಾರ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದ ಸಂಘಟನೆಗಳು, ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗಳನ್ನು ಮುಂದೂಡಿದವು. 

ಜಿಲ್ಲೆಯಲ್ಲಿ ವಾಹನ ಸಂಚಾರ ಎಂದಿನಂತೆ ಇತ್ತು. ಶಾಲಾ–ಕಾಲೇಜು, ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿ, ಮಳಿಗೆಗಳು ತೆರೆದಿದ್ದು ವಹಿವಾಟು ನಡೆಯಿತು. ಸಾರ್ವಜನಿಕರು ಶಾಂತಿಭಂಗವಾಗುವ ಯಾವುದೇ ಚಟುವಟಿಕೆಯಲ್ಲಿ ತೊಡಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. 

ಜಿಲ್ಲಾಧಿಕಾರಿಗೆ ಸಿಪಿಎಂ ಮನವಿ:

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಕೂಡಲೇ ಕೇಂದ್ರ ಸರ್ಕಾರ ವಾಪಸ್‌ ಪಡೆಯುವಂತೆ ರಾಷ್ಟ್ರಪತಿ ಸೂಚಿಸಬೇಕು ಎಂದು ಆಗ್ರಹಿಸಿ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಹಾವೇರಿ ಶಾಖೆಯ ನೇತೃತ್ವದಲ್ಲಿ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಸಂಸತ್ತಿನ ಎರಡೂ ಸದನಗಳು ಮಸೂದೆಯನ್ನು ಪಾಸು ಮಾಡಿವೆ. ಈ ಮಸೂದೆ ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ. ಭಾರತೀಯ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನು ನಾಶಪಡಿಸುವುದೇ ಇದರ ಉದ್ದೇಶ ಎಂದು ಪರಿಗಣಿಸಿರುವ ಸಿಪಿಎಂ ಸೇರಿದಂತೆ ಎಡಪಕ್ಷಗಳು ಇದನ್ನು ಬಲವಾಗಿ ವಿರೋಧಿಸುತ್ತಿವೆ. ಇದು ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ. ಇದು ಜಾತ್ಯತೀತ ತತ್ವಕ್ಕೆ ತದ್ವಿರುದ್ಧವಾದ ಸಂಗತಿ ಎಂದು ಸಿಪಿಎಂ ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದ್ದಾರೆ. 

ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಮಸೂದೆಯ ಉದ್ದೇಶ. ಇದು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಅಪಾಯಕಾರಿ. ಇಂತಹ ಮಸೂದೆ ಪಾಸಾಗಿರುವುದು ಮತ್ತು ಎನ್.ಆರ್.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ಒಂದು ಅವಳಿ ಸಂಯೋಜನೆ ಎಂದು ಸಿಪಿಎಂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. 

ಇದರ ಮುಂದುವರಿದ ಭಾಗವಾಗಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಆವರಣದೊಳಗೆ ವಿವಿಯ ಮುಖ್ಯಸ್ಥರ ಅನುಮತಿಯಿಲ್ಲದೆ ಪೊಲೀಸರು ನುಗ್ಗಿ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ದೌರ್ಜನ್ಯವೆಸಗಿರುವುದು ಸರ್ಕಾರದ ಫ್ಯಾಸಿಸ್ಟ್ ಧೋರಣೆಯನ್ನು ತೋರಿಸುತ್ತಿದೆ. ಈ ಅಮಾನುಷ ದಾಳಿಗೈದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ. 

ಸಿಪಿಎಂ ಹಿರಿಯ ಮುಖಂಡರಾದ ರುದ್ರಪ್ಪ ಜಾಬೀನ, ಅಂದಾನೆಪ್ಪ ಹೆಬಸೂರು, ಜಿ.ಸಂ.ಸದಸ್ಯರಾದ ವಿನಾಯಕ ಕುರುಬರ, ಬಸವರಾಜ ಪೂಜಾರ, ಮುಖಂಡರಾದ ಬಸವರಾಜ ಭೋವಿ, ರವಿ, ಮಣಿ ಇದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು