ಶನಿವಾರ, ಜುಲೈ 24, 2021
26 °C

ಸಾಗುವಳಿದಾರರಿಗೆ ಭೂಮಿ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಗ್ಗಾವಿ: ತಾಲ್ಲೂಕಿನ ಕುನ್ನೂರ ಮತ್ತು ಹಳವತರ್ಲಘಟ್ಟ ಗ್ರಾಮಗಳ ಬಡ ಜನರು 40ಕ್ಕೂ ಹೆಚ್ಚು ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದು, ಕಂದಾಯ ದಾಖಲೆಗಳನ್ನು ಸೃಷ್ಟಿಸಿ ಅದನ್ನು ಸಾಗುವಳಿದಾರರ ಹೆಸರಿಗೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ಸವಣೂರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರಿಗೆ ಮನವಿ ಸಲ್ಲಿಸಿದರು.

ಮೂಲತಃ ಇದು ಕಂದಾಯ ಭೂಮಿಯಾಗಿದೆ. ಕಾಲಕ್ರಮೇಣ ಕುನ್ನೂರು ಮತ್ತು ಹಳವತರ್ಲಘಟ್ಟ ಗ್ರಾಮಗಳ 80 ಬಡ ಕೂಲಿ ಕಾರ್ಮಿಕರು, ರೈತರು 40 ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ. ನಾವು ಹಾಗೂ ನಮ್ಮ ಮುಂದಿನ ಪೀಳಿಗೆಯವರಿಗೆ ಈ ಜಮೀನು ಹೊರತುಪಡಿಸಿ ಬೇರೆ ಯಾವುದೇ ಜಮೀನು ಇರುವುದಿಲ್ಲ. ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ.

2003ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯ ಸ.ನಂ.‘203 ಎ’ 23 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ ಸೇರಿದ್ದು, ಸುಪ್ರೀಂ ಕೋರ್ಟ್‌ ಆದೇಶ ಮತ್ತು ಗೆಜೆಟ್ ಆಗಿದೆ ಎಂದು ಸುಳ್ಳು ಹೇಳಿ ಯಾವುದೇ ಮನವಿಯನ್ನು ನೀಡದೆ ರೈತರು ಬೆಳೆದ ಫಸಲನ್ನು ಜೆಸಿಬಿ ಮೂಲಕ ನಾಶಪಡಿಸಿ ರೈತರನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರಿದ್ದಾರೆ.

ನೊಂದ ರೈತರ ಕುಟುಂಬಗಳು ಹೈಕೋರ್ಟ್‌ ಮೊರೆಹೋಗಿದ್ದು, 2018ರಲ್ಲಿ ನ್ಯಾಯಾಲಯವು ಅಕ್ರಮ– ಸಕ್ರಮ ಸಮಿತಿ ಶಿಗ್ಗಾವಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ, ಉಪತಹಶೀಲ್ದಾರ್‌ ದುಂಡಶಿ ಇವರಿಗೆ ನಿರ್ದೇಶನ ನೀಡಿ ಈ ಜಮೀನನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಲು 3 ವರ್ಷಗಳ ಹಿಂದೆ ಸೂಚಿಸಿದೆ. ಆದರೆ, ನ್ಯಾಯಾಲಯದ ನಿರ್ದೇಶನಕ್ಕೂ ಬೆಲೆ ಇಲ್ಲದಂತಾಗಿದೆ ಎಂದು ಸಮಸ್ಯೆ ತೋಡಿಕೊಂಡರು. 

ಕುನ್ನೂರ ಹಾಗೂ ಹಳವತರ್ಲಘಟ್ಟ ಗ್ರಾಮಗಳ ಬಡ ರೈತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.