ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಗ್ಗಾವಿ: ಬಾಕಿ ವೇತನ ಬಿಡುಗಡೆ ಆಗ್ರಹ

ಶಿಗ್ಗಾವಿ ತಹಶೀಲ್ದಾರ್‌ ಕಚೇರಿ ಮುಂಭಾಗ ಬಿಸಿಯೂಟ ತಯಾರಕರ ಪ್ರತಿಭಟನೆ
Last Updated 5 ಆಗಸ್ಟ್ 2021, 14:16 IST
ಅಕ್ಷರ ಗಾತ್ರ

ಶಿಗ್ಗಾವಿ: ಮಾಸಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ‘ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌’ ತಾಲ್ಲೂಕು ಸಮಿತಿ ವತಿಯಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಸಂತೆ ಮೈದಾನದಿಂದ ಆರಂಭವಾದ ಪ್ರತಿಭಟನಾ ರ್‍ಯಾಲಿ ಪುರಸಭೆ ವೃತ್ತ, ಮುಖ್ಯಪೇಟೆ ರಸ್ತೆ, ಹಳೆ ಬಸ್ ನಿಲ್ದಾಣ, ಪಿಎಲ್‌ಡಿ ಬ್ಯಾಂಕ್ ವೃತ್ತ, ಹೊಸ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ,ತಹಶೀಲ್ದಾರ್ ಮಂಜುನಾಥ ಮುನ್ನೋಳಿ ಅವರಿಗೆ ಮನವಿ ಸಲ್ಲಿಸಿದರು.

ಮೂರು ತಿಂಗಳ ಬಾಕಿ ವೇತನ ಬಿಡುಗಡೆ ಮಾಡಬೇಕು. ಬಿಸಿಯೂಟ ತಯಾರಿಕರಿಗೆ ಮಾಸಿಕ ಕನಿಷ್ಠ 21 ಸಾವಿರ ವೇತನ ನೀಡಬೇಕು. ಇಎಸ್‌ಐ ಮತ್ತು ಪಿಎಫ್ ಯೋಜನೆ ಜಾರಿಗೊಳಿಸಬೇಕು. ‘ಡಿ’ ಗ್ರೂಪ್‌ ನೌಕರರೆಂದು ಆದೇಶ ನೀಡಬೇಕು. ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್‌ ನ್ಯಾಯಾಲಯದ ಆದೇಶದಂತೆ ಬಿಸಿಯೂಟ ತಯಾರಿಕರಿಗೂ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ 19 ವರ್ಷಗಳಿಂದ 1.19 ಲಕ್ಷ ಬಡ ಮಹಿಳೆಯರು ಕನಿಷ್ಠ ವೇತನವಿಲ್ಲದೇ ಸಾಮಾಜಿಕ ಭದ್ರತೆ, ಪಿಂಚಣಿ ಮತ್ತಿತರ ಸೌಲಭ್ಯಗಳಿಲ್ಲದಿದ್ದರೂ ಅಲ್ಪ ಸಂಭಾವನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್‌ ಪರಿಣಾಮ ಬಿಸಿಯೂಟದ ಅಡುಗೆ ಆರಂಭಿಸದೇ, ಮಕ್ಕಳಿಗೆ ಮನೆ–ಮನೆಗೆ ಬಿಸಿಯೂಟದ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಅಡುಗೆ ಸಿಬ್ಬಂದಿಗೆ ಯಾವುದೇ ಕೆಲಸವಿಲ್ಲದೇ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ಸಮಸ್ಯೆ ತೋಡಿಕೊಂಡರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ತಾಲ್ಲೂಕು ಸಂಚಾಲಕ ಅಶೋಕ ಕಾಳೆ, ಜಿಲ್ಲಾ ಅಧ್ಯಕ್ಷ ಬಿ.ಡಿ. ಪೂಜಾರ, ಲಕ್ಷ್ಮೀ ಮುಂಡಗೋಡ, ಲಲಿತಾ ಬುಶೇಟ್ಟಿ, ನಾಗರತ್ನ ಕುಲಕರ್ಣಿ, ನಿರ್ಮಲಾ, ಶೋಭಾ ಮಾದರ, ಪ್ರೇಮಕ್ಕ ಧಾರವಾಡ, ಭಾರತಿ ಚಲವಾದಿ, ಸುಶೀಲಾ ಕಟ್ಟಿಮನಿ, ನಿರ್ಮಲಾ ಜವಳಿ ಸೇರಿದಂತೆ ಅನೇಕ ಆಶಾ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT