ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು: ಸೌಲಭ್ಯಕ್ಕಾಗಿ ಬನಶಂಕರಿನಗರದ ನಿವಾಸಿಗಳ ಪರದಾಟ

Published 27 ಜೂನ್ 2024, 5:08 IST
Last Updated 27 ಜೂನ್ 2024, 5:08 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ 25ನೇ ವಾರ್ಡ್‌ ವ್ಯಾಪ್ತಿಯ ಬನಶಂಕರಿ ನಗರ (ನೂರಂದೇವರಮಠ ಪ್ಲಾಟ್‌) ಬಡಾವಣೆಯು ಮೂಲ ಸೌಲಭ್ಯದಿಂದ ವಂಚಿತಗೊಂಡಿದೆ. ತ್ಯಾಜ್ಯ ಸಂಗ್ರಹಿಸುವುದಕ್ಕೆ ನಗರಸಭೆಯಿಂದ ಕಸದ ಗಾಡಿ ಬರುವ ಒಂದು ಸೌಲಭ್ಯ ಬಿಟ್ಟರೆ ಯಾವುದೇ ಮೂಲ ಸೌಲಭ್ಯ ನೀಡಿಲ್ಲ.

10 ವರ್ಷಗಳ ಹಿಂದೆ ಬಡಾವಣೆಯು ನಗರಸಭೆಗೆ ಹಸ್ತಾಂತರವಾಗಿದ್ದು, ಇದುವರೆಗೂ ಮೂಲಸೌಲಭ್ಯಗಳು ಅಭಿವೃದ್ಧಿಯಾಗಿಲ್ಲ. ಡಾಂಬರು ರಸ್ತೆ ಕಿತ್ತು ಹೋಗಿದೆ. ರಸ್ತೆಯ ಎರಡು ಬದಿಗೆ ಮುಳ್ಳುಗಿಡಗಳು ಆವರಿಸಿವೆ.  ಇದರಿಂದ ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ.

ಕಳೆದ ಹತ್ತಾರು ವರ್ಷಗಳಿಂದ ಇಲ್ಲಿಯವರೆಗೆ ವಿದ್ಯುತ್, ಬೀದಿ ದೀಪ, 24/7 ಕುಡಿಯುವ ನೀರು, ಬಾಕ್ಸ್‌ ಚರಂಡಿ ಇಲ್ಲ. ಚರಂಡಿಗಳು ತ್ಯಾಜ್ಯ ಮತ್ತು ಕಲ್ಲು ಮಣ್ಣಿನಿಂದ ತುಂಬಿಕೊಂಡಿದ್ದು ಸ್ವಚ್ಚಗೊಳಿಸುವುದು ಸವಾಲಿನ ಕೆಲಸವಾಗಿದೆ. ಶಾಲಾ, ಕಾಲೇಜುಗಳ ಖಾಸಗಿ ಬಸ್ಸುಗಳು ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಬರುವುದೇ ಇಲ್ಲ.

ಇಲ್ಲಿನ ಪೊಲೀಸ್ ವಸತಿ ಗೃಹ, ಸಿದ್ದಾರೂಢ ಮಠ, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ ಶಾಖಾ ಮಠ, ನಂದೀಶ್ ನೈಪುಣ್ಯ ಹಾಗೂ ಕೌಶಲ ತರಬೇತಿ ಸಂಸ್ಥೆ ಇವೆ. ಆದರೂ ಏನೂ ಅಭಿವೃದ್ಧಿ ಕಂಡಿಲ್ಲ. ಪೊಲೀಸರಂತು ಹಗಲು ರಾತ್ರಿ ಅಡ್ಡಾಡುವಾಗ ಇಲ್ಲಿನ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾರೆ.

ನದಿ ನೀರು ಇಲ್ಲದ್ದಕ್ಕೆ ದೂರದ ಈಶ್ವರನಗರಕ್ಕೆ ಹೋಗಿ ಶುದ್ಧ ಕುಡಿಯುವ ನೀರಿನ ಘಟಕದಿಂದ ಕ್ಯಾನ ತುಂಬಿಸಿ ಕೊಂಡು ಬರಬೇಕು. ₹1.63 ಕೋಟಿ ಹಣ ಖರ್ಚು ಮಾಡಿ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿದೆ. ಅನೇಕ ವರ್ಷಗಳಿಂದ ಉಪಯೋಗಿಸದ ಕಾರಣ ಅದು ಪಾಳು ಬಿದ್ದು, ಕುಡುಕರು, ಪ್ರೇಮಿಗಳ ಮತ್ತು ಜೂಜಾಟದ ತಾಣವಾಗಿದೆ. ಹುಳ ಹುಪ್ಪಡಿಗಳ ತಾಣವಾಗಿದೆ. ಈಚೆಗೆ ಈಚೆಗೆ ನಗರಸಭೆಯಿಂದ
₹10 ಲಕ್ಷ ಖರ್ಚು ಮಾಡಿ ಕಂಪೌಂಡ್‌ ನಿರ್ಮಿಸಿ ಸುಣ್ಣ ಬಣ್ಣ ಬಳಿದು ಆವರಣ ಸ್ವಚ್ಚಗೊಳಿಸಿದ್ದು ಬಿಟ್ಟರೇ ಹೆಚ್ಚು ಬಳಕೆಯಾಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇಲ್ಲಿನ ಸಭಾಭವನದ ಮುಂದಿನ ರಸ್ತೆ ಕೂಡಾ ಹದಗೆಟ್ಟಿದೆ. ಇದೇ ಬಡಾವಣೆಯಲ್ಲಿ ಮೂರು ನಾಲ್ಕು ಉದ್ಯಾನವನಗಳಿದ್ದು, ಅವುಗಳಲ್ಲಿ ಗಿಡ ಗಂಟಿಗಳು ಅಳೆತ್ತರ ಬೆಳೆದು ನಿಂತಿವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಭವನದ ಪಕ್ಕದಲ್ಲಿರುವ ಪಾರ್ಕಿನಲ್ಲಿ 24/7 ಯೋಜನೆಯ ಗುತ್ತಿಗೆದಾರ ಕಟ್ಟಡ ಅವಶೇಷಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಇದರಿಂದ ಪಾರ್ಕ ಅದ್ವಾನಗೊಂಡಿದೆ.

‘ಪಾರ್ಕ್‌ ನಿರ್ಮಾಣಕ್ಕೆ ಸಾಕಷ್ಟು ಜಾಗ ಬಿಡಲಾಗಿದ್ದು, ಸುತ್ತಲೂ ಫೆನ್ಸಿಂಗ್‌ ಬಿಟ್ಟರೆ ಏನೂ ಅಭಿವೃದ್ಧಿಯಾಗಿಲ್ಲ. ಮಕ್ಕಳಿಗೆ ಆಡವಾಡಲು ಸುತ್ತಲೂ ಆವರಣ ಗೋಡೆ, ನಾಗರಿಕರು ವಾಯು ವಿಹಾರ ಮಾಡಲು ಅನುಕೂಲ ಕಲ್ಪಿಸಿ, ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಇಲ್ಲಿನ ನಿವಾಸಿ ಎಂ. ಶಶಿಧರ ಹಾಗೂ ಸದಾಶಿವ ಕೆಂಪಣ್ಣನವರ ಆಗ್ರಹಿಸಿದರು.

ವಾರ್ಡ್‌ ಅನೈರ್ಮಲ್ಯದಿಂದ ಕೂಡಿದೆ. ತೆರೆದ ಚರಂಡಿಗಳಿಗೆ ಶೌಚಾಲಯಗಳ ಸಂಪರ್ಕವಿದೆ. ತರಕಾರಿ ಮಾರಾಟ ಮಾಡುವವರು ಯಾರೂ ಬರುವದಿಲ್ಲ. ಮಳೆ ನೀರು ಸರಾಗವಾಗಿ ಹರಿದು ರಾಜ ಕಾಲುವೆ ಸೇರಲು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.

‘ಈ ಬಡಾವಣೆಯ ನಾಗರಿಕರು ಬನಶಂಕರಿ ಅಭಿವೃದ್ಧಿ ಸಮಿತಿ ರಚನೆ ಮಾಡಿಕೊಂಡು ಅಭಿವೃದ್ದಿಯ ಬಗ್ಗೆ ಚರ್ಚಿಸಿ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶಾಸಕ ಪ್ರಕಾಶ ಕೋಳಿವಾಡ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅಧ್ಯಕ್ಷ ಜಗದೀಶ ನೂರಂದೇವರಮಠ ಹಾಗೂ ಮಹೇಶ್ವರಪ್ಪ ಸೂರಣಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಕ್ಕಳು, ವಯೋವೃದ್ಧರು ಸಂಚರಿಸುವ ವೇಳೆ ಬಿದ್ದು ಗಾಯಗಳಾದ ಘಟನೆ ನಡೆದಿವೆ. ಸೊಳ್ಳೆಗಳ ಉಪಟಳದಿಂದ ನಿವಾಸಿಗಳು ಸಾಂಕ್ರಾಮಿಕ ರೋಗದಿಂದ ಬಳಲುವಂತಾಗಿದೆ. ಬೀದಿ ದೀಪಗಳು ಇಲ್ಲದೇ ರಾತ್ರಿ ವೇಳೆ ಕತ್ತಲು ಆವರಿಸುತ್ತಿದ್ದು, ನಿವಾಸಿಗಳಲ್ಲಿ ಭೀತಿ ಎದುರಾಗಿದೆ’ ಎನ್ನುತ್ತಾರೆ ಗಂಗವ್ವ ಸೂರಣಗಿ, ರೂಪಾ ಪಾಟೀಲ, ಕವಿತಾ ತೆಗ್ಗಿನ.

‘ನಮ್ಮ ವಾರ್ಡಿನ ಎಲ್ಲ ಸಮಸ್ಯೆಗಳ ಬಗ್ಗೆ ನಗರಸಭೆಗೆ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಶೀಘ್ರ ಸೌಲಭ್ಯ ದೊರಕಿಸಬೇಕು. ಚುನಾವಣೆ ವೇಳೆ ಮತ ಕೇಳಲು ಬರುವ ಜನಪ್ರತಿನಿಧಿಗಳು ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ನಂದೀಶ ಬಿಶೆಟ್ಟರ, ವಕೀಲ ಅಜಗೋಳ, ಸತೀಶ ಪಾಟೀಲ, ರಾಜು ತೆಗ್ಗಿನ, ಪಾಸ್ತೆ, ಪ್ರಭಾಕರ ಮುದಗಲ್‌, ವಿಜಯಕುಮಾರ ಹುಬ್ಬಳ್ಳಿ ಒತ್ತಾಯಿಸಿದ್ದಾರೆ.

ರಾಣೆಬೆನ್ನೂರಿನ 25 ನೇ ವಾರ್ಡಿನ ಬನಶಂಕರಿನಗರ ರಸ್ತೆಗಳು 
ರಾಣೆಬೆನ್ನೂರಿನ 25 ನೇ ವಾರ್ಡಿನ ಬನಶಂಕರಿನಗರ ರಸ್ತೆಗಳು 
ರಾಣೆಬೆನ್ನೂರಿನ ಬನಶಂಕರಿನಗರದ ಡಾ.ಬಿ.ಆರ್‌.ಅಂಬೇಡ್ಕರ ಭವನದ ಎದುರಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ರಾಣೆಬೆನ್ನೂರಿನ ಬನಶಂಕರಿನಗರದ ಡಾ.ಬಿ.ಆರ್‌.ಅಂಬೇಡ್ಕರ ಭವನದ ಎದುರಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ವಾರ್ಡ್‌ಗೆ ಬಂದು ಅಲ್ಲಿನ ಜನತೆ ಮತ್ತು ನಗರಸಭೆ ಅಧಿಕಾರಿಗಳ ಜೊತೆಗೆ ಸಭೆ ಮಾಡಿ 24/7 ಕುಡಿಯುವ ನೀರು ಬೀದಿ ದೀಪ ರಸ್ತೆ ಚರಂಡಿ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು
- ಪ್ರಕಾಶ ಕೋಳಿವಾಡ ಶಾಸಕ ರಾಣೆಬೆನ್ನೂರು
ವಾರ್ಡ್‌ಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಹೆಚ್ಚಿದ್ದು ನಿವಾಸಿಗಳ ಸಭೆ ನಡೆದಾಗ ಅಲ್ಲಿನ ಸಮಸ್ಯೆಗಳ ಪಟ್ಟಿಯನ್ನು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಸುವರ್ಣಾ ಸುರಳಿಕೇರಿಮಠ ನಗರಸಭೆ ಸದಸ್ಯೆ
25ನೇ ವಾರ್ಡಿನ ಮೂಲ ಸೌಲಭ್ಯದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಕಾಮಗಾರಿಗಳನ್ನು ಸದ್ಯ ಎಸ್ಟಿಮೇಟ್‌ ಮಾಡಿಟ್ಟುಕೊಳ್ಳುತ್ತೇವೆ. ಹಂತ ಹಂತವಾಗಿ ನಗರಸಭೆ ಅನುದಾದಲ್ಲಿ ಅಭಿವೃದ್ಧಿ ಪಡಿಸಲಾಗುವುದು
ಮಹೇಶ ಕಲಾಲ ಪ್ರಭಾರಿ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT