ರೈತ ವಿರೋಧಿ ಕಾಯ್ದೆ ಹಿಂಪಡೆಯಿರಿ

ಹಾವೇರಿ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡಯಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಕಾಯ್ದೆಗಳ ಪ್ರತಿಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಮೇರೆಗೆ ನಗರದಲ್ಲಿರುವ ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ್, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಹಾವೇರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ರೈತರ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಕಾಯ್ದೆ, ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ (ಸಶಕ್ತೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಕಾಯ್ದೆ, ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ಮಸೂದೆ, ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬಲ ಕೊಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು. ರೈತ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ, ಮರಿಗೌಡ ಪಾಟೀಲ್, ದಿಳ್ಳೆಪ್ಪ ಮಣ್ಣೂರ್, ಸುರೇಶ್ ಚಲವಾದಿ, ಚಿಕ್ಕಪ್ಪ ಛತ್ರದ, ದಾನಪ್ಪ ಬಳ್ಳಾರಿ, ಉಮೇಶ್ ಬ್ಯಾಡಗಿ, ಜಾನ್ ಪುನೀತ್, ಅಡಿಯಪ್ಪ ಆಲದಕಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.