ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

1.09 ಕೋಟಿ ಪಹಣಿಗೆ ಆಧಾರ್ ಲಿಂಕ್: ಹಲವು ಜಿಲ್ಲೆಗಳಲ್ಲಿ ರೈತರ ನಿರಾಸಕ್ತಿ

Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಹಾವೇರಿ: ಆಸ್ತಿ ಅಕ್ರಮ ನೋಂದಣಿ ತಡೆಗೆ ರಾಜ್ಯ ಸರ್ಕಾರ ‘ನನ್ನ ಆಧಾರ್‌ದೊಂದಿಗೆ ನನ್ನ ಆಸ್ತಿ ಸುಭದ್ರ’ ಅಭಿಯಾನ ಆರಂಭಿಸಿದೆ. ರಾಜ್ಯದ 4.03 ಕೋಟಿ ಆಸ್ತಿಗಳ ಪೈಕಿ 1.09 ಕೋಟಿ ಆಸ್ತಿ ಪಹಣಿಗೆ ಮಾತ್ರ ಆಧಾರ್ ಜೋಡಣೆ ಆಗಿದೆ. ನಿಗದಿತ ಗುರಿಯಲ್ಲಿ ಈವರೆಗೆ ಶೇ 39.82ರಷ್ಟು ಸಾಧನೆ ಮಾಡಲು ಮಾತ್ರ ಸಾಧ್ಯವಾಗಿದೆ.

‘ಬೆಳೆ ಪರಿಹಾರ ಮತ್ತು ಸರ್ಕಾರದ ಇತರೆ ಸೌಲಭ್ಯ ಸಿಗುವುದಿಲ್ಲ’ ಎಂಬ ಭಾವನೆಯಲ್ಲಿ ರೈತರು ತಮ್ಮ ಆಸ್ತಿಗಳ ಪಹಣಿಗೆ (ಉತಾರ್ ಅಥವಾ ಆರ್‌ಟಿಸಿ) ಆಧಾರ್ ಜೋಡಣೆ ಮಾಡಲು ನಿರಾಸಕ್ತಿ ಹೊಂದಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿರುವ ಜಿಲ್ಲೆಗಳ ಪೈಕಿ ಕೋಲಾರ (ಶೇ 68.50) ಮೊದಲನೇ ಸ್ಥಾನದಲ್ಲಿದೆ. ವಿಜಯನಗರ (ಶೇ 68.37) ಮತ್ತು ದಾವಣಗೆರೆ (ಶೇ 68.04) ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಉಡುಪಿ (ಶೇ 18.77) ಕೊನೆ ಸ್ಥಾನದಲ್ಲಿದೆ.

‘ರಾಜ್ಯದಲ್ಲಿ 4.03 ಕೋಟಿ ಆಸ್ತಿಗಳಿಗೆ ಪಹಣಿ ಇದೆ. ರೈತರು, ಪಹಣಿಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ. ಕಂದಾಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಲೆಕ್ಕಾಧಿಕಾರಿಗಳು ಟ್ಯಾಬ್‌ಗಳ ಸಹಿತ ರೈತರ ಬಳಿ ತೆರಳಿ ಆಧಾರ್ ಜೋಡಣೆ ಮಾಡುತ್ತಿದ್ದಾರೆ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಹಣಿ ಮುಂದಿಟ್ಟುಕೊಂಡು ಯಾರದ್ದೋ ಆಸ್ತಿ, ಬೇರೆ ಯಾರೋ ನೋಂದಣಿ ಮಾಡಿಕೊಳ್ಳುತ್ತಿದ್ದ ಪ್ರಕರಣಗಳು ಹೆಚ್ಚಿದ್ದವು. ಕೃಷಿ ಜಮೀನು ಇಲ್ಲದವರು ಯಾರದ್ದೋ ಪಹಣಿ ಬಳಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದ ಪ್ರಕರಣಗಳು ಇದ್ದವು. ಇದೇ ಕಾರಣಕ್ಕೆ, ಪಹಣಿಗೆ ಆಧಾರ್ ಜೋಡಿಸಲಾಗುತ್ತಿದೆ. ಆಧಾರ್ ಜೋಡಣೆಯಾದರೆ, ಆಸ್ತಿ ಅಕ್ರಮ ನೋಂದಣಿಗೆ ಕಡಿವಾಣ ಬೀಳಲಿದೆ’ ಎಂದು ಅವರು ಹೇಳಿದರು.

ಪಹಣಿಗೆ ಆಧಾರ್ ಜೋಡಣೆ ಮಾಡಿದರೆ ಆಸ್ತಿ ಅಕ್ರಮ ನೋಂದಣಿ ಬಂದ್ ಆಗಲಿದೆ. ಬೆಳೆ ಸಮೀಕ್ಷೆ ಪರಿಹಾರ ವಿತರಣೆ ಸೇರಿ ಸರ್ಕಾರದ ಸೌಲಭ್ಯ ಪಡೆಯುವುದು ಸುಲಭವಾಗಲಿದೆ.
–ವೀರಮಲ್ಲಪ್ಪ ಪೂಜಾರ, ಹೆಚ್ಚುವರಿ ಜಿಲ್ಲಾಧಿಕಾರಿ ಹಾವೇರಿ
ಪಹಣಿಗೆ ಆಧಾರ್ ಜೋಡಿಸಿದರೆ ರೈತರ ಎಲ್ಲ ಮಾಹಿತಿ ಸರ್ಕಾರಕ್ಕೆ ಗೊತ್ತಾಗುತ್ತದೆ. ಜಮೀನು ಜಾಸ್ತಿ ಇದ್ದವರ ರೇಷನ್ ಕಾರ್ಡ್ ಬಂದ್ ಆಗುತ್ತದೆ. ಯಾವುದೇ ಸೌಲಭ್ಯ ಸಿಗುವುದಿಲ್ಲವೆಂಬ ಭಾವನೆ ರೈತರಲ್ಲಿದೆ.
–ಭುವನೇಶ್ವರ ಶಿಡ್ಲಾಪುರ, ಅಧ್ಯಕ್ಷ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹಾವೇರಿ ಜಿಲ್ಲಾ ಘಟಕ

ಜಿಲ್ಲಾವಾರು ಸಾಧನೆ ಪಟ್ಟಿ

ಜಿಲ್ಲೆ;ಒಟ್ಟು ಪಹಣಿ (ಲಕ್ಷಗಳಲ್ಲಿ);ಆಧಾರ್ ಜೋಡಣೆಯಾದ ಪಹಣಿ(ಲಕ್ಷಗಳಲ್ಲಿ)

ಕೋಲಾರ; 10.02; 4.23

ವಿಜಯನಗರ; 6.34; 3.11

ದಾವಣಗೆರೆ; 8.27; 4.41

ಬಳ್ಳಾರಿ; 5.13; 2.58

ಧಾರವಾಡ; 10.76; 3.25

ಯಾದಗಿರಿ; 5.78; 2.80

ಚಿಕ್ಕಬಳ್ಳಾಪುರ; 8.89; 3.46

ಗದಗ; 7.36; 3.03

ಹಾವೇರಿ; 12.61; 4.33

ಚಿಕ್ಕಮಗಳೂರು; 8.41; 3.42

ಚಾಮರಾಜನಗರ; 6.46; 2.37

ಬೀದರ್; 5.83; 2.14

ತುಮಕೂರು; 25.79; 8.38

ಬೆಂಗಳೂರು ನಗರ; 6.36; 48 ಸಾವಿರ

ಕಲಬುರ್ಗಿ; 8.68; 3.10

ಚಿತ್ರದುರ್ಗ; 10.08; 3.47

ಶಿವಮೊಗ್ಗ; 7.99; 2.48

ಉತ್ತರ ಕನ್ನಡ; 20.88; 6.89

ಕೊಡಗು; 8.61; 1.62

ರಾಯಚೂರು; 8.16; 2.58

ದಕ್ಷಿಣ ಕನ್ನಡ; 28.55; 2.73

ಹಾಸನ; 19.03; 5.65

ಕೊಪ್ಪಳ; 5.97; 1.79

ರಾಮನಗರ; 9.59; 2.41

ಬಾಗಲಕೋಟೆ; 12.70; 3.58

ಮೈಸೂರು; 16.69; 4.06

ಬೆಂಗಳೂರು ಗ್ರಾಮಾಂತರ; 7.10; 1.47

ವಿಜಯಪುರ; 14.91; 3.45

ಮಂಡ್ಯ; 21.92; 5.93

ಬೆಳಗಾವಿ; 46.06; 7.78

ಉಡುಪಿ; 28.11; 2.80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT