ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವನಪೇಟೆಗೆ ಮೆರುಗು ತಂದ ಮಠಗಳು: ಜಾತ್ರೆಗಳಿಗೆ ಭಕ್ತರ ದಂಡು

ಪವಾಡಗಳಿಂದ ಜನರ ಮನಗೆದ್ದಿದ್ದ ಸದಾಶಿವ ಸ್ವಾಮೀಜಿ
Last Updated 24 ಜುಲೈ 2021, 13:46 IST
ಅಕ್ಷರ ಗಾತ್ರ

ಶಿಗ್ಗಾವಿ: ತಾಲ್ಲೂಕಿನ ಹೊಸಪೇಟೆ ಗ್ರಾಮ ಪರಂಪರಾಗತವಾಗಿ ಶ್ರದ್ಧಾಭಕ್ತಿಯ ತಾಣವಾಗಿ, ನಿತ್ಯ ಶಿವಾನುಭವ ಗೋಷ್ಠಿ ನಡೆಯುತ್ತಿದ್ದವು. ಹೀಗಾಗಿ, ಗದಿಗೇಶ್ವರ ಸ್ವಾಮೀಜಿ, ರೇವಣಸಿದ್ಧೇಶ್ವರ ಸ್ವಾಮೀಜಿ ಹಾಗೂ ಗ್ರಾಮದ ಹಿರಿಯರು ‘ಸದಾಶಿವನಪೇಟೆ’ ಎಂಬ ನಾಮಕರಣ ಮಾಡಿದರು. ಅಂದಿನಿಂದ ಹೊಸಪೇಟೆ ‘ಸದಾಶಿವಪೇಟೆ’ಯಾಗಿ ಪ್ರಚಾರಗೊಂಡಿತು ಎಂಬ ಪ್ರತೀತಿ ಇದೆ.

ಹಾನಗಲ್ ವಿರಕ್ತಮಠದ ಸದಾಶಿವ ಸ್ವಾಮೀಜಿ ಪವಾಡ ಪುರುಷರಾಗಿದ್ದು, ಸದಾಶಿವಪೇಟೆಯಲ್ಲಿ ಉಲ್ಬಣಗೊಂಡ ಮಾರಿಬೇನೆ ರೋಗಕ್ಕೆ ಔಷಧೋಪಚಾರ ನೀಡುತ್ತಾರೆ. ಮಾರಿಬೇನೆ ರೋಗದಿಂದ ಮುಕ್ತಿಯಾದ ನಂತರ ಸದಾಶಿವ ಸ್ವಾಮೀಜಿಗಳ ಪಲ್ಲಕ್ಕಿ ಮಹೋತ್ಸವ ನಡೆಸುತ್ತಾರೆ. ಸದಾಶಿವ ಸ್ವಾಮೀಜಿಗಳಿಂದ ‘ಸದಾಶಿವಪೇಟೆ’ ಗ್ರಾಮವೆಂಬ ನಾಮಕರಣವಾಯಿತು ಎಂದು ವಿರಕ್ತಮಠದ ಗದಿಗೇಶ್ವರ ಸ್ವಾಮೀಜಿ ಹೇಳುತ್ತಾರೆ.

ಅಬ್ಬಿಗೇರಿ ಅರಳೆಲೆ ಹಿರೇಮಠದ ರೇವಣಸಿದ್ದ ಅಜ್ಜನವರು ನಾಟಕದ ಆಡುವ ಗಿಳಿನಿಂದ ಸಂಚರಿಸುತ್ತಾ ಸದಾಶಿವಪೇಟೆಗೆ ಬಂದು ಕಿವುಡನವರ ಮನೆತನದಲ್ಲಿ ವಾಸವಾಗುತ್ತಾರೆ. ನಾಟಕದ ಮಾಸ್ತರಾಗಿ ಹಲವಾರು ನಾಟಕಗಳನ್ನು ಪ್ರದರ್ಶನ ನೀಡುತ್ತಾರೆ. ಇಲ್ಲಿ ಕಲಬುರ್ಗಿ ಶರಣಬಸವೇಶ್ವರರ ದಾಸೋಹಮಠವನ್ನು ಸ್ಥಾಪಿಸಬೇಕೆಂಬ ಚಿಂತನೆ ನಡೆಸುವ ಮೂಲಕ ಅಬ್ಬಿಗೇರಿಯಿಂದ ಕಲಬುರ್ಗಿವರೆಗೆ ಪಾದಯಾತ್ರೆ ನಡೆಸಿ ‘ಶರಣಬಸವೇಶ್ವರರ ಮಠ’ ನಿರ್ಮಿಸಿದ್ದಾರೆ ಎಂದು ಮಠದ ಶಿವದೇವ ಶರಣರು ವ್ಯಕ್ತಪಡಿಸುತ್ತಾರೆ.

ಭೂತ- ಪ್ರೇತಗಳನ್ನು ದೂರ ಮಾಡಿ, ಭಕ್ತರಿಗೆ ತೀರ್ಥ, ಭಸ್ಮಗಳನ್ನು ನೀಡಿ ರೋಗರುಜಿನಗಳನ್ನು ನಿವಾರಿಸಿದರು ಎಂಬ ನಂಬಿಕೆ ಜನರದ್ದು. ಸದಾಶಿವಪೇಟೆ, ಕುಡಪಲಿ ಚಳಗೇರಿ, ಇಟಗಿ ಸೇರಿದಂತೆ ಹಲವಾರು ಕಡೆ ಹತ್ತಾರು ಪವಾಡಗಳು ನಡೆಯುತ್ತವೆ. ಅಲ್ಲದೆ ಹಳ್ಳಿಹಳ್ಳಿಗಳಲ್ಲಿ ಕಲಬುರ್ಗಿ ಶರಣ ಬಸವೇಶ್ವರರ ಪುರಾಣಗಳನ್ನು ಹೇಳುತ್ತಾ ಶರಣರ ಮಹಾತ್ಮೆ ಪರಿಚಯಿಸುತ್ತಾ ನಾಡಿನುಗದ್ದಕ್ಕೂ ಸಂಚರಿಸಿದರು.

ವಿರಕ್ತಮಠ ಸ್ಥಾಪನೆ:ಎಡೆಯೂರು ಸಿದ್ಧಲಿಂಗೇಶ್ವರ ಮಠದ ಪರಂಪರೆಯಲ್ಲಿ ಒಂದಾದ ಇಲ್ಲಿನ ವಿರಕ್ತಮಠ 15ನೇ ಶತಮಾನದಲ್ಲಿ ಗದಿಗೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಸ್ಥಾಪನೆಯಾಗುತ್ತದೆ. ಅಂದಿನಿಂದ ಈವರೆಗೆ 9 ಸ್ವಾಮೀಜಿಗಳ ಪಟ್ಟಾಧಿಕಾರ ನಡೆದಿದೆ.

ಟಿಪ್ಪು ಸುಲ್ತಾನ್ ಸವಣೂರಿನ ನವಾಬರೊಂದಿಗೆ ಯುದ್ಧ ಮಾಡಿ ಬಂಕಾಪುರದ ಕೋಟೆಗೆ ಬರುತ್ತಾರೆ. ಅವರಿಗೆ ಸುಮಾರು ವರ್ಷಗಳಿಂದ ಕಾಡುವ ಮಂಡಿನೋವು ಹೆಚ್ಚಾಗುತ್ತದೆ. ಅದಕ್ಕೆ ವಿರಕ್ತಮಠದ ಗದಿಗೇಶ್ವರ ಸ್ವಾಮೀಜಿಗಳು ಭಸ್ಮ, ತೀರ್ಥ ನೀಡುತ್ತಾರೆ. ಅದರಿಂದ ಗುಣಮುಖರಾದ ಟಿಪ್ಪು ಸುಲ್ತಾನ್ ಮಠಕ್ಕೆ ಬಂದು ನಗಾರಿಖಾನೆ ನಿರ್ಮಿಸಿ, ಪಲ್ಲಕ್ಕಿ ಮತ್ತು 3 ಎಕರೆ ಜಮೀನನ್ನು ಕಾಣಿಕೆಯಾಗಿ ನೀಡುತ್ತಾನೆ.

ಕನಕದಾಸರು ಗದಿಗೇಶ್ವರ ಸ್ವಾಮೀಜಿಗಳಿಂದ ಭಕ್ತಸ್ಥಳದ ಮೂಲಕ ಆಧ್ಯಾತ್ಮಿಕ ಬೋಧನೆಯಿಂದ ತತ್ವಜ್ಞಾನದ ಅರಿವು ಪಡೆಯುತ್ತಾರೆ. ತಿಮ್ಮಪ್ಪನಾಯಕ ಭಕ್ತರಲ್ಲಿ ಶ್ರೇಷ್ಠನಾದ ಕಾರಣ ಅವರಿಗೆ ‘ಭಕ್ತ ಕನಕದಾಸರು’ ಎಂಬ ನಾಮಕರಣ ಪ್ರಚಾರವಾಯಿತು ಎಂದು ವಿರಕ್ತಮಠದ ಗದಿಗೇಶ್ವರ ಸ್ವಾಮೀಜಿ ಹೇಳುತ್ತಾರೆ.

ಗ್ರಾಮದಲ್ಲಿ ಕರಡಿ ಮಜಲು, ವೀರಗಾಸೆ ಕಲಾವಿದರು. ಜನಪದ ಕ್ರೀಡೆಗಳಲ್ಲಿ ಕುಸ್ತಿ, ಕಬ್ಬಡಿ ಪಟುಗಳಿದ್ದಾರೆ. ಪ್ರತಿ ವರ್ಷ ಶರಣಬಸವೇಶ್ವರ ದಾಸೋಹಮಠದ ಮತ್ತು ವಿರಕ್ತಮಠದ ಜಾತ್ರಾ ಮಹೋತ್ರವ ನಡೆಸಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಶಿವಯ್ಯ ಹಿರೇಮಠ, ಮುಖಂಡ ಶರಣಬಸಪ್ಪ ಕಿವುಡನವರ, ಬಸವಣ್ಣೆಪ್ಪ ಗುಳೇದಕೇರಿ ಹೇಳುತ್ತಾರೆ.

ದಾಸೋಹ ಮಠದ ಪರಂಪರೆಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, 12 ವರ್ಷಗಳಿಂದ ಭಕ್ತ ರಮೇಶ ಕಲಿವಾಳ ಅವರಿಂದ ದಾಸೋಹ ನೆರವೇರಿಸಿಕೊಂಡು ಬರಲಾಗುತ್ತಿದೆ. ಭಕ್ತ ಸಮೂಹದಿಂದ ದಾನಧರ್ಮದ ಕಾರ್ಯಗಳು ಸದಾ ನಡೆಯುತ್ತಾ ಬರುತ್ತಿದೆ ಎಂದು ಶಿವದೇವ ಶರಣರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT