ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 2 ತಿಂಗಳಿಂದ ಸ್ಕ್ಯಾನಿಂಗ್‌ ಸೆಂಟರ್‌ ಬಂದ್‌

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿಯರ ಪರದಾಟ: ಖಾಸಗಿ ಸೆಂಟರ್‌ಗಳಲ್ಲಿ ‘ದುಬಾರಿ’ ಸೇವೆ
Last Updated 7 ಏಪ್ರಿಲ್ 2022, 22:15 IST
ಅಕ್ಷರ ಗಾತ್ರ

ಹಾವೇರಿ: ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ಸೆಂಟರ್‌ 2 ತಿಂಗಳಿಂದ ಸ್ಥಗಿತಗೊಂಡಿರುವ ಕಾರಣ ಗರ್ಭಿಣಿಯರು ತೀವ್ರ ಪರದಾಡುವಂತಾಗಿದೆ.

2018ರಿಂದ 2020ರವರೆಗೆ ಆಗಾಗ್ಗೆ ಬಂದ್‌ ಆಗುತ್ತಿದ್ದ ಈ ಸೆಂಟರ್‌ಗೆ ಎರಡು ವರ್ಷಗಳ ಹಿಂದೆ ಕಾಯಂ ರೇಡಿಯಾಲಜಿಸ್ಟ್‌ ಬಂದ ಕಾರಣ ಸಮಸ್ಯೆ ಬಗೆಹರಿದಿತ್ತು. ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಏಕೈಕ ರೇಡಿಯಾಲಾಜಿಸ್ಟ್‌ ಅನಾರೋಗ್ಯ ನಿಮಿತ್ತ 58 ದಿನಗಳ ರಜೆ ಹಾಕಿರುವ ಕಾರಣ (ಏಪ್ರಿಲ್‌ 29ರವರೆಗೆ) ಸ್ಕ್ಯಾನಿಂಗ್‌ ಚಟುವಟಿಕೆ ಸಂಪೂರ್ಣ ಬಂದ್‌ ಆಗಿದೆ.

ಮಗುವಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಲುಪ್ರತಿ ಗರ್ಭಿಣಿಯರಿಗೆ ಒಟ್ಟು ಐದು ಬಾರಿ ಸ್ಕ್ಯಾನಿಂಗ್‌ ಮಾಡಿಸುವ ಅಗತ್ಯವಿರುತ್ತದೆ. ಆದರೆ ಸ್ಕ್ಯಾನಿಂಗ್‌ ಘಟಕ ಬಾಗಿಲು ಮುಚ್ಚಿರುವ ಕಾರಣ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಗರ್ಭಿಣಿಯರು ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳಿಗೆ ಹೋಗಿ ದುಬಾರಿ ಶುಲ್ಕ ತೆರುವಂತಾಗಿದೆ.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 2021ರ ನವೆಂಬರ್‌ನಲ್ಲಿ 161, ಡಿಸೆಂಬರ್‌ನಲ್ಲಿ 338 ಹಾಗೂ 2022ರ ಜನವರಿಯಲ್ಲಿ 278 ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳನ್ನು ಮಾಡಲಾಗಿದೆ.ನಿತ್ಯ 50ರಿಂದ 60 ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ಗಳನ್ನು ಉಚಿತವಾಗಿ ಮಾಡಲಾಗುತ್ತಿತ್ತು. ಅಪಘಾತಕ್ಕೆ ತುತ್ತಾದವರು ಎಕ್ಸ್‌ರೇ ಮಾಡಿಸಿಕೊಳ್ಳುತ್ತಿದ್ದರು. ಈಗ ಸ್ಕ್ಯಾನಿಂಗ್‌ ಸೇವೆ ಅಲಭ್ಯವಾಗಿದೆ.

ರೊಕ್ಕ ಎಲ್ಲಿಂದ ತರ‍್ಲಿ:

‘ಸ್ತ್ರೀರೋಗ ತಜ್ಞರು ಸ್ಕ್ಯಾನಿಂಗ್ ಮಾಡಿಸಲು ಚೀಟಿ ಬರೆದುಕೊಟ್ಟಿದ್ದರು. ಆದರೆ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಖಾಸಗಿ ಸೆಂಟರ್‌ನಲ್ಲಿ ₹1 ಸಾವಿರ ಕೊಟ್ಟು ಸ್ಕ್ಯಾನಿಂಗ್‌ ಮಾಡಿಸಬೇಕಾಯಿತು. ಕೂಲಿ ಮಾಡುವ ನಮ್ಮಂಥ ಬಡವರು ರೊಕ್ಕ ಎಲ್ಲಿಂದ ತರಬೇಕು ಸ್ವಾಮಿ’ ಎಂದು ಹಾವೇರಿ ನಗರದ ನಾಗೇಂದ್ರನಮಟ್ಟಿಯ ಮುಸ್ಲಿಂ ಮಹಿಳೆಯೊಬ್ಬರು ಕಣ್ಣೀರಿಟ್ಟರು.

ದುಬಾರಿ ಶುಲ್ಕ:

ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್‌ ಸೆಂಟರ್‌ ಸಕ್ರಿಯವಾಗಿದ್ದ ವೇಳೆ ಖಾಸಗಿ ಸೆಂಟರ್‌ಗಳಲ್ಲಿ ಅಲ್ಟ್ರಾಸೌಂಡ್‌ಗೆ ₹500 ಶುಲ್ಕ ಪಡೆಯುತ್ತಿದ್ದರು. ಈಗ ಸರ್ಕಾರಿ ಸ್ಕ್ಯಾನಿಂಗ್‌ ಸೆಂಟರ್‌ ಬಂದ್‌ ಆಗಿರುವುದರಿಂದ ನಗರದಲ್ಲಿರುವ 9 ಖಾಸಗಿ ಸೆಂಟರ್‌ಗಳಲ್ಲಿ ಪೈಪೋಟಿ ಹೆಚ್ಚಿದ್ದು, ₹1 ಸಾವಿರಕ್ಕೆ ಶುಲ್ಕ ಏರಿಸಲಾಗಿದೆ. ಇದರಿಂದ ಬಡವರು, ಕೂಲಿಕಾರ್ಮಿಕರು, ರೈತ ಕುಟುಂಬಗಳ ಹೆಣ್ಣುಮಕ್ಕಳು ಶುಲ್ಕ ಕಟ್ಟಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

‘ನನ್ನ ಪತ್ನಿ ಗರ್ಭಿಣಿಯಾಗಿದ್ದ ಕಾರಣ ಜನವರಿಯಲ್ಲಿ ಸ್ಕ್ಯಾನಿಂಗ್‌ಗೆ ಕರೆದುಕೊಂಡು ಬಂದಿದ್ದೆ. ಆಗ ಯಂತ್ರ ಕೆಟ್ಟಿದೆ ಅಂದ್ರು, ಫೆಬ್ರುವರಿಯಲ್ಲಿ ಬಂದಾಗ ಸ್ಕ್ಯಾನಿಂಗ್‌ ರೂಮ್‌ಗೆ ಬೀಗವನ್ನೇ ಜಡಿದಿದ್ದರು. ಅಂದು ಹಾಕಿದ ಬೀಗವನ್ನು ಇದುವರೆಗೂ ತೆಗೆದಿಲ್ಲ. ಖಾಸಗಿ ಸೆಂಟರ್‌ಗೆ ದುಡ್ಡು ಕಟ್ಟುವ ಶಕ್ತಿ ಎಲ್ಲರಿಗೂ ಇರುವುದರಿಲ್ಲ. ನಮ್ಮಂಥ ಬಡವರ ಗೋಳನ್ನು ಕೇಳುವವರು ಯಾರೂ ಇಲ್ಲದಂತಾಗಿದೆ’ ಎಂದು ಹಾವೇರಿಯ ತೌಸಿಫ್‌ ದುಃಖ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT