ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚಿಸದೆ ‘ಶಿಕ್ಷಣ ನೀತಿ’ ಜಾರಿ ಸಲ್ಲ

ಎಸ್‌ಎಫ್‌ಐ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ: ಕವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್ ದುರ್ಗಾದಾಸ್ ಅಭಿಮತ
Last Updated 25 ಸೆಪ್ಟೆಂಬರ್ 2021, 15:16 IST
ಅಕ್ಷರ ಗಾತ್ರ

ಹಾವೇರಿ: ‘ಎಸ್‍ಎಫ್‍ಐನಂತಹ ಜನಪರ ಸಂಘಟನೆಯ ಹಿಂದೆ ವಿದ್ಯಾರ್ಥಿಗಳ ಸಮೂಹವಿರುತ್ತದೆಯೇ ವಿನಾ ಹಣಬಲ, ತೋಳ್ಬಲ, ರಾಜಕೀಯ ಬಲ ಇರುವುದಿಲ್ಲ. ಈ ಕಾರಣದಿಂದ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆಯಾಗಿ ರಾಷ್ಟ್ರವ್ಯಾಪಿ ಚಟುವಟಿಕೆಯಿಂದ ಇರಲು ಸಾಧ್ಯವಾಗಿದೆ’ ಎಂದು ಕವಿವಿ ವಿಶ್ರಾಂತ ಕುಲಪತಿ ಡಾ.ಕೆ.ಆರ್ ದುರ್ಗಾದಾಸ್ ಹೇಳಿದರು.

ನಗರದ ಗುರುಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿ‌ಶನಿವಾರ ಆಯೋಜಿಸಿದ್ದ ಅಪಾಯಕಾರಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ವಿರೋಧಿಸಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ನೀತಿಯಂತಹ ಗಂಭೀರ ವಿಷಯಗಳನ್ನು ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಪ್ರಶ್ನೆ ಮಾಡಿದರೆ, ಆಳುವ ಸರ್ಕಾರ ವಿರೋಧ ಪಕ್ಷದ ನಾಯಕರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡುವಂತಹ ಕಟು ವಾಸ್ತವ ನಮ್ಮ ಕಣ್ಣೆದುರು ನಡೆಯುತ್ತಿರುವುದು ಅಪಾಯಕಾರಿಯಾದುದು ಎಂದು ಆತಂಕ ವ್ಯಕ್ತಪಡಿಸಿದರು.

ಆಡಳಿತ ಪಕ್ಷ ಈ ಶಿಕ್ಷಣ ನೀತಿ ಒಳಿತನ್ನೇ ಮಾಡುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಇಂತಹ ಗಂಭೀರ ವಿಷಯವನ್ನು ಲೋಕಸಭೆ ಹಾಗೂ ವಿಧಾನ ಸಭೆಯಲ್ಲಿ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿಚಾರವಂತರು ಈ ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.

ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ,1964-66 ಕೊಠಾರಿ ಆಯೋಗವು ಸರ್ಕಾರಕ್ಕೆ ಶಿಕ್ಷಣ ಬಲಪಡಿಸುವ ಅಂಶಗಳನ್ನು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರ ಶೇ 30ರಷ್ಟು, ಕೇಂದ್ರ ಸರ್ಕಾರ ಶೇ 10ರಷ್ಟು ಮತ್ತು ಜಿಡಿಪಿಯಲ್ಲಿ ಶೇಕಡಾ 6ರಷ್ಟು ಹಣವನ್ನು ತಮ್ಮ ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಹೇಳಿದೆ. ಆದರೆ ಅದನ್ನು ಈವರೆಗೆ ಆಳಿದ ಯಾವ ಸರ್ಕಾರವೂ ಜಾರಿ ಮಾಡದೇ ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ತಜ್ಞರಾದ ಡಾ.ಕೆ ಪ್ರಕಾಶ, ಎಸ್‍ಎಫ್‍ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ, ಕಾರ್ಯದರ್ಶಿ ವಾಸುದೇವ ರೆಡ್ಡಿ, ಮಾಜಿ ರಾಜ್ಯ ಮುಖಂಡರಾದ ರೇಣುಕಾ ಕಹಾರ, ರಾಜ್ಯ ಸಮಿತಿ ಸದಸ್ಯ ಗಣೇಶ ರಾಠೋಡ ಇದ್ದರು. ಬೀರೇಶ ನೆಟಗಲ್ಲಣ್ಣವರ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು. ಕಾವ್ಯಾ ಎಸ್.ಎಚ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT