ಸೋಮವಾರ, ಜನವರಿ 27, 2020
26 °C
ಶರಣ ಸಂಸ್ಕೃತಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ: ಸಿದ್ಧರಾಮೇಶ್ವರ ಸ್ವಾಮೀಜಿ ಅಭಿಮತ

ಆತ್ಮ ನಿರೀಕ್ಷೆಯ ಕೇಂದ್ರವೇ ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ದೇಸಿ ಕಲೆಗಳಲ್ಲಿ ಒಂದಾದ ನಾಟಕವು, ಮನುಷ್ಯನ ಆತ್ಮ ನಿರೀಕ್ಷೆಯ ಕೇಂದ್ರವಾಗಿದ್ದು, ಅದು ಮನಪರಿವರ್ತನೆಯನ್ನು ಮಾಡುತ್ತದೆ’ ಎಂದು ಚಿತ್ರದುರ್ಗ– ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹೊಸಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರ ನಡೆದ ಜಮುರಾ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ತನ್ನ ಜೀವನದಲ್ಲಿ ನಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಂಡರೆ ಸಂಸ್ಕಾರ, ಸಂಸ್ಕೃತಿ‌ ನಾಶವಾಗುತ್ತದೆ. ನಾಟಕ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದರು.

ಮಹಾತ್ಮ ಗಾಂಧಿ ಅವರು ‘ಸತ್ಯ ಹರಿಶ್ಚಂದ್ರ’ ನಾಟಕವನ್ನು ನೋಡಿ ತಮ್ಮ ಮನಪರಿವರ್ತನೆ ಮಾಡಿಕೊಂಡರು. ಸ್ವಾತಂತ್ರ್ಯ ಹೋರಾಟವನ್ನು ಅವರು ಸತ್ಯಾಗ್ರಹ ಎಂದು ಕರೆದರು. ತಮ್ಮ ಜೀವನದುದ್ದಕ್ಕೂ ಸತ್ಯದ ಮಾರ್ಗದಲ್ಲಿಯೇ ನಡೆದು ಮಹಾತ್ಮರಾಗಿದ್ದಾರೆ ಎಂದರು.

‘ನಮ್ಮ ಮನೆಯ ಮಕ್ಕಳು ಸಂಸ್ಕೃತಿ, ಸಂಸ್ಕಾರದ ಭಾಗವಾಗಬೇಕು. ಆಗ ದೇಶದಲ್ಲಿ ಅಪರಾಧಗಳು ಕಡಿಮೆಯಾಗುತ್ತದೆ. ಅಪರಾಧ ಮಾಡುವವರ ದೃಷ್ಟಿಯನ್ನು ಬದಲಾಯಿಸಲು ಶರಣರ ವಚನ, ತತ್ವ ಹಾಗೂ ನಾಟಕಗಳು ಸಹಕಾರಿಯಾಗುತ್ತವೆ’ ಎಂದರು.

‘ಜೀವನ ಪರ್ಯಂತ ನಾಟಕ ಮಾಡುವವರು ಇಂದು ‘ಸಾಯೋ ಆಟ’ ನಾಟಕ ನೋಡಲೇ ಬೇಕು. ನಾಟಕಗಳು ಪ್ರತಿಯೊಬ್ಬ ಮನುಷ್ಯನಿಗೆ ಸಂಸ್ಕಾರ ಕಲಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದರ ಬಗೆಗಿನ ಆಲೋಚನೆಯನ್ನು ನಾಟಕಗಳು ತಿಳಿಸುತ್ತವೆ. ಸಂಗೀತ, ನೃತ್ಯ ವಿವಿಧ ಕಲೆಗಳನ್ನು ಮನುಷ್ಯ ಆಸ್ವಾದಿಸಬೇಕು. ಮೊಬೈಲ್‌ ಬಳಕೆ, ಟಿ.ವಿ ವೀಕ್ಷಣೆಯನ್ನು ಕಡಿಮೆ ಮಾಡಿ ಪುಸ್ತಕ, ವಚನ ಸಾಹಿತ್ಯದತ್ತ ಮನುಷ್ಯ ಗಮನ ಹರಿಸಬೇಕು’ ಎಂದರು.

ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಶಿವಕುಮಾರ ಸಂಗೂರ, ಪ್ರವಚನ‌ ಕಲಾವಿದ ಡಾ.ಗುರುಮಹಾಂತಯ್ಯ ಶಾಸ್ತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶಶಿಕಲಾ ಹುಡೇದ, ಜಾನಪದ ಕಲಾವಿದ ಶಂಕರ್‌ ಅರ್ಕಸಾಲಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಡಾ.ಬಸವರಾಜ ವೀರಾಪುರ, ಉಪಾಧ್ಯಕ್ಷ ಶ್ರೀಧರ ದೊಡ್ಡಮನಿ, ಎನ್.ಬಿ.ಕಾಳೆ ಇದ್ದರು.

ಪ್ರತಿಕ್ರಿಯಿಸಿ (+)