ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರ: ಬದುಕಿನ ಸಾರ್ಥಕ್ಯ ತೆರೆದಿಟ್ಟ ‘ಶವದ ಮನೆ’

ನಾಟಕೋತ್ಸವ: 5ನೇ ದಿನದ ಪ್ರದರ್ಶನಕ್ಕೆ ಮನಸೋತ ಪ್ರೇಕ್ಷಕರು
Published 27 ಡಿಸೆಂಬರ್ 2023, 15:41 IST
Last Updated 27 ಡಿಸೆಂಬರ್ 2023, 15:41 IST
ಅಕ್ಷರ ಗಾತ್ರ

ಅಕ್ಕಿಆಲೂರ: ಜೀವಗತಿ ಮತ್ತು ಶವಸ್ಥಿತಿಗಳ ನಡುವಿನ ವೈರುಧ್ಯಾತ್ಮಕತೆಯನ್ನು ಚಿತ್ರಿಸುವ ‘ಶವದ ಮನೆ’ ನಾಟಕ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ನಡೆದಿರುವ ನಾಟಕೋತ್ಸವದ 5ನೇ ದಿನ ಪ್ರದರ್ಶನಗೊಂಡು ನೆರೆದ ರಂಗಪ್ರಿಯರ ಮನ ಸೆಳೆಯಿತು.

ಸಂಭವಿಸುವ ಹುಟ್ಟು, ಸಾವುಗಳನ್ನು ಪ್ರಕ್ರಿಯಾತ್ಮಕ ನೆಲೆಯಲ್ಲಿಟ್ಟು ಚರ್ಚಿಸುವ ಮೂಲಕ ಈ ನಾಟಕ ಜೀವ- ಬದುಕಿನ ಸಾರ್ಥಕತೆಯನ್ನು ಕುರಿತಂತೆ ಅಂತಸ್ಥ ತಾತ್ವಿಕತೆಯನ್ನು ಕಾಣಿಸುವ ಪ್ರಯತ್ನದಲ್ಲಿ ಯಶ ಕಂಡಿತು. ಚರಿತ್ರೆಯ ನಿರ್ಮಿತಿ ಮತ್ತು ಅವನತಿಗಳೆರಡರ ಪ್ರಧಾನ ನಿರೂಪಕ ಶಕ್ತಿ ಪ್ರಭುತ್ವ ವ್ಯವಸ್ಥೆಯ ಉತ್ಪನ್ನವಾದ ಯುದ್ಧ ತಲ್ಲಣವನ್ನು ಹಿನ್ನೆಲೆಯಲ್ಲಿ ಮೂಡಿಸುವ ಮೂಲಕ ಜೀವದ ಹುಡುಕಾಟವನ್ನು ರೂಪಕಾತ್ಮಕ ಸಂಭಾಷಣೆ ಮತ್ತು ದೃಶ್ಯಗಳ ಮೂಲಕ ಮಂಡಿಸುತ್ತದೆ. ಶವಗಳ ನಡುವಿನ ಸಂವಾದದ ಮೂಲಕ ಜೀವಂತಿಕೆಯ ಯಶಸ್ಸನ್ನು ಶೋಧಿಸುವ ಮತ್ತು ಸಾವಿನ ಕಾರಣವನ್ನು ಸತ್ತವರ ಆತ್ಮವಿಮರ್ಶೆಯ ಮೂಲಕ ವಿಶ್ಲೇಷಿಸುವ ವಿಶಿಷ್ಟ ಕಥನ ವಿನ್ಯಾಸವನ್ನು ಈ ನಾಟಕ ಹೊಂದಿದೆ.

ನಿರೂಪಣೆಯಲ್ಲಿ, ಪಾರಂಪರಿಕ ನೆಲೆಯ ನಿರೂಪಣೆ, ಆಧುನಿಕ ಶೈಲಿಯ ದೃಶ್ಯ ಸಂಯೋಜನೆ, ಸಮಕಾಲೀನ ವಿಷಯಗಳ ಧ್ವನಿಸುವಿಕೆ ಈ ಬಗೆಯ ಸಂಯುಕ್ತ ಶೈಲಿಯ ನೆಲೆಯಲ್ಲಿ ಮೂಡಿಬಂದ ನಾಟಕ ರಂಗಪ್ರಿಯರ ಮನದಾಳಕ್ಕಿಳಿಯಿತು.

ಕವಿ ಬಿ.ಪೀರ್ ಭಾಷಾ ಈ ನಾಟಕ ರಚಿಸಿದ್ದು, ಡಾ.ಸಹನಾ ಪಿಂಜಾರ್ ನಿರ್ದೇಶಿಸಿದ್ದಾರೆ. ರಿಯಾಜ್ ಸಿಹಿಮೊಗೆ ತಮ್ಮ ಬಹುತ್ವ ಪ್ರತಿಷ್ಠಾನ ಸಂಸ್ಥೆಯ ಮೂಲಕ ಈ ರಂಗ ಪ್ರಯೋಗ ಸಾಧ್ಯವಾಗಿಸಿದ್ದಾರೆ. ರಿಯಾಜ್ ಸಿಗಿಮೊಗೆ, ಅಂಕ್ಲೇಶ್ ಪಿ.ಕೆ.ಹಳ್ಳಿ, ಕೆ.ನಾಗರಾಜ, ಸಂದೀಪಕುಮಾರ ನಾಯ್ಕ, ನೆಹೆರ್ ಅಹ್ಮದ್, ರೇಣುಕಾ ವೈ.ಕೆ., ಶಾಹಿರ್ ಪಿ., ದಿವ್ಯ ಪಿ. ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇಸ್ಲಾಫ್ ಹೊಸಪೇಟೆ, ಅನುಷ್ ಶೆಟ್ಟಿ ಮತ್ತು ಮುನ್ನ ಮೈಸೂರು ಅವರ ಸಂಗೀತ ನಾಟಕಕ್ಕಿದೆ.

ಚದುರಂಗರ ಕಥೆ ಪ್ರೇರಣೆ

ಕನ್ನಡದ ಖ್ಯಾತ ಕಥೆಗಾರ ಚದುರಂಗ ಅವರು 1940ರ ದಶಕದಲ್ಲಿ ಬರೆದ ‘ಶವದ ಮನೆ’ ಕಥೆಯ ಪ್ರೇರಣೆ ಈ ನಾಟಕಕ್ಕಿದೆ. ಮೂಲ ಕಥೆಯ ಪ್ರಧಾನ ಭಾಗವಾದ ಶವದ ಮನೆಯ ಚಿತ್ರಣವನ್ನು ಇಡಿಯಾಗಿ ರೂಪಾಂತರಿಸಿ ವಸ್ತು ಮತ್ತು ಪಾತ್ರಗಳನ್ನು ಸಮಕಾಲೀನಗೊಳಿಸಿದ ಮರುಸೃಷ್ಟಿ ಈ ನಾಟಕ. ಯುದ್ಧದ ಪರಿಣಾಮವಾಗಿ ನಾಗರೀಕರ ಶುಶ್ರೂಷಗೆ ತೆರಳುವ ವೈದ್ಯೆಯೊಬ್ಬಳು ಶವದ ಮನೆಯ ಪಾಲಾಗಿ ಅಲ್ಲಿನ ಶವಗಳನ್ನೂ ಮುಟ್ಟಿ ಮಾತನಾಡಿಸಿ ಹಲವು ಜೀವಗಳ ಸಾವಿನ ಕಾರಣಗಳನ್ನು ವಿವರಿಸುವುದು ಈ ನಾಟಕದ ಭಾಗ. ಕಥೆಯ ನಿರೂಪಣಾ ಕ್ರಮ ವಸ್ತು ಪಾತ್ರಗಳು ಮತ್ತು ಸಾಂದರ್ಭಿಕತೆ ಎಲ್ಲ ಬಗೆಯಲ್ಲಿ ವಿಭಿನ್ನವಾಗಿದ್ದವು.

ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು
ಶೇಷಗಿರಿಯಲ್ಲಿ ಪ್ರದರ್ಶನಗೊಂಡ ಶವದ ಮನೆ ನಾಟಕದ ದೃಶ್ಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT