ಶನಿವಾರ, ಅಕ್ಟೋಬರ್ 16, 2021
29 °C
ಮನಸೂರೆಗೊಳ್ಳುವ ಪುಷ್ಕರಣಿ ವಿನ್ಯಾಸ: ಡಿ.24ಕ್ಕೆ ಉದ್ಘಾಟನಾ ಸಮಾರಂಭ

ಅಕ್ಕಿಆಲೂರ: ಕಲ್ಮೇಶ್ವರ ದೇಗುಲಕ್ಕೆ ಗ್ರಾಮಸ್ಥರಿಂದ ಕಾಯಕಲ್ಪ

ಸುರೇಖಾ ಪೂಜಾರ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ: ಸಾವಿರಾರು ವರ್ಷಗಳ ಇತಿಹಾಸ ಹಾಗೂ ವಿಶಿಷ್ಟ ಹಿನ್ನೆಲೆ ಹೊಂದಿರುವ ಇಲ್ಲಿನ ಹೊರವಲಯದ ಈಶ್ವರ ದೇವರ ಕೆರೆಯ ದಡದಲ್ಲಿರುವ ಕಲ್ಮೇಶ್ವರ (ಈಶ್ವರ) ಮತ್ತು ಬ್ರಹ್ಮಲಿಂಗೇಶ್ವರ ದೇವಸ್ಥಾನ ಸ್ಥಳೀಯರ ಸಕಾಲಿಕ ಜಾಗೃತಿಯ ಫಲದಿಂದ ಕಣ್ಮನ ಸೆಳೆಯುವಂತೆ ಜೀರ್ಣೋದ್ಧಾರಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.

ಆಗ್ನೇಯ ದಿಕ್ಕಿಗೆ ಮುಖ ಮಾಡಿರುವ ದೇವಸ್ಥಾನಗಳು ತುಂಬಾ ವಿರಳವಾಗಿದ್ದು, ಈ ದೇವಸ್ಥಾನ ಆಗ್ನೇಯಕ್ಕೆ ಮುಖ ಮಾಡಿದೆ. ಅಲ್ಲದೇ ಇಲ್ಲಿ ಒಂದೇ ಶಿಲೆಯಲ್ಲಿ ನವಗ್ರಹ ಮೂರ್ತಿಗಳ ನಿರ್ಮಾಣವಾಗಿದೆ. ಅಷ್ಟದಿಕ್ಪಾಲಕ ಮೂರ್ತಿಗಳು, ಗರ್ಭ ಗುಡಿ ನೋಡುಗರ ಕಣ್ಮನ ಸೆಳೆಯುವಂತಿವೆ.

12ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಈ ದೇವಸ್ಥಾನ ತ್ರಿಕೂಟ ರಚನೆಯದ್ದು. ಅಂತರಾಳ ಒಳಗೊಂಡ ಗರ್ಭಗೃಹಗಳು, ನವರಂಗ ಮತ್ತು ತೆರೆದ ಸಭಾ ಮಂಟಪಗಳಿವೆ. ಮುಖ್ಯ ಗರ್ಭಗೃಹದ ಬಾಗಿಲು ಕಂಡು ಬರುವುದಿಲ್ಲ. ಸಭಾ ಮಂಟಪದಲ್ಲಿ ತಿರುಗಣೆ ಯಂತ್ರದಿಂದ ಕಡೆದ ಕಂಬಗಳಿವೆ. ಜೊತೆಗೆ ನಿಮ್ನ ಮುಖಗಳ ಅಲಂಕರಣವಿರುವ ಕಂಬಗಳೂ ಇವೆ.

ಮುಖ್ಯ ಗರ್ಭಗೃಹದಲ್ಲಿ ಮಾತ್ರ ಲಿಂಗವಿದೆ. ಸಭಾಮಂಟಪದಲ್ಲಿ ನಂದಿ ಶಿಲ್ಪ ಕಾಣಬಹುದು. ಉಳಿದ ಶಿಲ್ಪಾವಶೇಷಗಳು ಹೊರಭಾಗದಲ್ಲಿವೆ. ಅವುಗಳಲ್ಲಿ ಭಗ್ನಲಿಂಗ, ಸಪ್ತಮಾತೃಕೆಯರ ಫಲಕ, ನಾಗ, ಯೋನಿಪೀಠ, ಲಲಾಟಬಿಂಬವಿರುವ ದ್ವಾರಬಂಧ, ಗರುಡ ಲಾಂಛನವಿರುವ ಪಾಣಿಪೀಠ ಮತ್ತು ಶಾಸನವುಳ್ಳ ವೀರಗಲ್ಲು ಮುಖ್ಯವಾದವು.

ಇತಿಹಾಸ: ದೇವಸ್ಥಾನ ವಿರಾಟ ನಗರದ ರಾಜ ಉತ್ತರ ಕುಮಾರನ ಆಡಳಿತಕ್ಕೆ ಈ ದೇವಸ್ಥಾನ ಒಳಪಟ್ಟಿತ್ತು ಎನ್ನುವ ಸಂಗತಿ ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ಆ ಸಂದರ್ಭದಲ್ಲಿ ದೇವಸ್ಥಾನದ ಸುತ್ತಲೂ ಮನೆಗಳಿದ್ದವು. ಆಗ ಪ್ಲೇಗ್, ಕಾಲರಾ ಮುಂತಾದ ರೋಗಗಳಿಗೆ ಗ್ರಾಮ ತುತ್ತಾದಾಗ ಅಲ್ಲಿಂದ ಗ್ರಾಮಸ್ಥರು ಸ್ಥಳಾಂತರಗೊಂಡು ಜಿಗಳಿಕೊಪ್ಪಕ್ಕೆ ವಲಸೆ ಹೋಗಿದ್ದರು. ನಂತರ ಆ ಭಾಗದಲ್ಲೂ ರೋಗಗಳು ಹರಡಿ ಇದೀಗ ಅಕ್ಕಿಆಲೂರ ನಿರ್ಮಾಣಗೊಂಡಿದೆ ಎಂಬ ಪ್ರತೀತಿ ಇದೆ. 

ಜೀರ್ಣೋದ್ಧಾರ: ಐತಿಹಾಸಿಕ ಹಿನ್ನೆಲೆ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಈ ದೇವಸ್ಥಾನ ನಿಧಾನವಾಗಿ ಕಾಲಗರ್ಭದತ್ತ ಜಾರುತ್ತಿರುವುದನ್ನು ಕಂಡು ಸಮಗ್ರ ದೂರದೃಷ್ಟಿ ಹೊಂದಿದ ನೀಲನಕ್ಷೆ ಸಿದ್ಧಪಡಿಸಿ, ಕೈಗೊಳ್ಳಲಾಗಿರುವ ಜೀರ್ಣೋದ್ಧಾರ ಕಾರ್ಯ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಟ್ರಸ್ಟ್ ಹಾಗೂ ಸ್ಥಳೀಯರ ಸಹಯೋಗದಲ್ಲಿ ಕಲ್ಮೇಶ್ವರ ದೇವಸ್ಥಾನ, ಬ್ರಹ್ಮಲಿಂಗೇಶ್ವರ ದೇವಸ್ಥಾನ, ಬಸವಣ್ಣನ ಮಂಟಪ, ಪುಷ್ಕರಣಿ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿವೆ ಎನ್ನುತ್ತಾರೆ ಜೀರ್ಣೋದ್ಧಾರ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿರುವ ಹಿರಿಯ ಕೆಎಎಸ್ ಅಧಿಕಾರಿ ಸ್ಥಳೀಯ ವಿಶ್ವನಾಥ ಪಿ. ಹಿರೇಮಠ.

ಆವರಣ ಗೋಡೆ ಸೇರಿದಂತೆ ಅಂತಿಮ ಹಂತದ ಜೀರ್ಣೋದ್ಧಾರ ಕಾರ್ಯಗಳಷ್ಟೇ ಬಾಕಿ ಉಳಿದಿವೆ. ಸದ್ಭಕ್ತರ ಸಹಕಾರದೊಂದಿಗೆ ಬಾಕಿ ಕಾರ್ಯ ಪೂರ್ಣಗೊಳಿಸಿ ಡಿ.24ರಿಂದ 29ರವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ಉದ್ಘಾಟನಾ ಸಮಾರಂಭ ನೆರವೇರಿಸಲಾಗುತ್ತಿದೆ ಎನ್ನುತ್ತಾರೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗನಗೌಡ ಪಾಟೀಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.