ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಯಾಣ; ಜನರು ಹೈರಾಣ

ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ; ವಾಹನ ಸವಾರರಿಗೆ ಗುಂಡಿಗಳ ದರ್ಶನ, ದೂಳಿನ ಮಜ್ಜನ
Last Updated 6 ಜನವರಿ 2020, 19:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಹೆದ್ದಾರಿ–48ರಲ್ಲಿ ನಡೆಯುತ್ತಿರುವ ಆಮೆಗತಿಯ ಕಾಮಗಾರಿ ಜನರಿಗೆ ಕಿರಿಕಿರಿಯುಂಟು ಮಾಡುತ್ತಿದೆ. ತಡೆಗೋಡೆ ರಹಿತ ಗುಂಡಿಗಳು, ಹದಗೆಟ್ಟ ಸರ್ವಿಸ್‌ ರಸ್ತೆಗಳು, ಅವೈಜ್ಞಾನಿಕ ಹಂಪ್‌, ದೂಳಿನ ಮಜ್ಜನ ಮಾಡಿಸುವ ಟ್ರಕ್‌ಗಳು, ಕಣ್ಮರೆಯಾದ ಫುಟ್‌ಪಾತ್‌ ಮತ್ತು ಬಸ್‌ ನಿಲ್ದಾಣಗಳು... ಹೀಗೆ ಹಲವಾರು ಸಮಸ್ಯೆಗಳು ಪ್ರಯಾಣಿಕರು ಮತ್ತು ಹೆದ್ದಾರಿ ಬದಿಯ ಗ್ರಾಮಸ್ಥರನ್ನು ಬಾಧಿಸುತ್ತಿವೆ. ಈ ಕುರಿತು ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಹಾವೇರಿ: ಜಿಲ್ಲೆಯಲ್ಲಿ ಹಾದು ಹೋಗಿರುವರಾಷ್ಟ್ರೀಯ ಹೆದ್ದಾರಿಯನ್ನು (ಎನ್‌.ಎಚ್‌–48) ಚತುಷ್ಪಥದಿಂದ ಷಟ್ಪಥವನ್ನಾಗಿ ರೂಪಿಸಲು ನಡೆಸುತ್ತಿರುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಚಾಲಕರು, ಪ್ರಯಾಣಿಕರು ಮತ್ತು ಹೆದ್ದಾರಿ ಬದಿಯ ಗ್ರಾಮಸ್ಥರಿಗೆ ಕಿರಿಕಿರಿಯುಂಟು ಮಾಡುತ್ತಿದೆ.

ಹುಬ್ಬಳ್ಳಿಯಿಂದ ಹಾವೇರಿ ನಡುವಿನ 63 ಕಿ.ಮೀ., ಹಾವೇರಿಯಿಂದ ದಾವಣಗೆರೆ ನಡುವಿನ 78 ಕಿ.ಮೀ. ಹಾಗೂ ದಾವಣಗೆರೆಯಿಂದ ಚಿತ್ರದುರ್ಗ ನಡುವಿನ 72 ಕಿ.ಮೀ. ಈ ಮೂರು ಹಂತಗಳ ಕಾಮಗಾರಿಗಳನ್ನು ಬೇರೆ ಬೇರೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಕಾಮಗಾರಿಗಳಿಗೆ 2017ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುಮೋದನೆ ನೀಡಿತ್ತು. ಜನವರಿ 2018ರಲ್ಲಿ ಆರಂಭವಾದ ಕಾಮಗಾರಿ ಜುಲೈ 2020ರ ವೇಳೆಗೆ ಪೂರ್ಣಗೊಳ್ಳಬೇಕು.

ಆದರೆ, ಈಗ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ಒಂದು ವರ್ಷ ಅವಧಿಯನ್ನು ಖಾಸಗಿ ಸಂಸ್ಥೆಗಳು ಕೇಳಿವೆ. ಈಗ ನಡೆಯುತ್ತಿರುವ ಕಾಮಗಾರಿಯನ್ನು ನೋಡಿದರೆ 2021ಕ್ಕೂ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಜನರಿಗೆ ಬರುತ್ತಿಲ್ಲ. ಹುಬ್ಬಳ್ಳಿಯಿಂದ ಚಿತ್ರದುರ್ಗದವರೆಗಿನ ಹೆದ್ದಾರಿ ಕಾಮಗಾರಿಗೆ ಒಟ್ಟು ₹ 3,594 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಿಲ್ಲ ಆದ್ಯತೆ

ಹೆದ್ದಾರಿ ನಿರ್ಮಾಣ ಮಾಡುವಾಗ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ನಿಯಮಗಳನ್ನು ಇಲ್ಲಿ ಗಾಳಿಗೆ ತೂರಲಾಗಿದೆ. ಕೆಲವೆಡೆ ಪಾಲಿಸಿದ್ದರೂ ಅದು ಕಾಟಾಚಾರಕ್ಕೆಂಬಂತಿದೆ. ಹೆದ್ದಾರಿ ಬದಿಯಲ್ಲೇ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿದ್ದು, ಅವುಗಳಿಗೆ ಕೆಲವೆಡೆ ತಡೆಗೋಡೆಯೇ ಇಲ್ಲ. ಇನ್ನು ಕೆಲವೆಡೆ ತಗಡಿನ ಶೀಟು ಇಡಲಾಗಿದೆ. ಚಾಲಕರ ನಿಯಂತ್ರಣ ತಪ್ಪಿದರೆ ವಾಹನಗಳು ಸೀದಾ ಗುಂಡಿಯೊಳಕ್ಕೆ ಬಂದು ಬೀಳುವ ಅಪಾಯವಿದೆ.

ಕೆಲವು ಕಡೆ ಹರಡಿರುವ ಸಿಮೆಂಟ್‌ ಬ್ಲಾಕ್‌ಗಳು, ಕಬ್ಬಿಣದ ಸರಳು, ಮಣ್ಣು ಅರ್ಧ ರಸ್ತೆಯನ್ನೇ ನುಂಗಿ ಹಾಕಿವೆ. ಹೆದ್ದಾರಿಯಲ್ಲಿ ಸಾಗುತ್ತಿರುವ ವಾಹನಗಳಿಗೆ ದಿಢೀರನೇ ಎಡ ಮತ್ತು ಬಲಕ್ಕೆ ತಿರುವು ಸಿಗುತ್ತವೆ. ಇಲ್ಲಿ ಸಮರ್ಪಕವಾದ ಸೂಚನಾ ಫಲಕ, ರಿಫ್ಲೆಕ್ಟರ್‌ಗಳಿಲ್ಲ. ಇದರಿಂದ ರಾತ್ರಿ ವೇಳೆಯಂತೂ ದಾರಿ ಯಾವ ಕಡೆ ಇದೆ ಎಂಬುದು ಗೊತ್ತಾಗದೇ ವಾಹನ ಚಾಲಕರು ಅಕ್ಷರಶಃ ಪರದಾಡುತ್ತಾರೆ.

ಗುಂಡಿಗಳ ಕಾರುಬಾರು

ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ, ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ ಇಳಿಯುವ–ಹತ್ತುವ ಹಾವು–ಏಣಿ ಆಟವನ್ನು ವಾಹನ ಚಾಲಕರು ಆಡಬೇಕು. ಸರಕು ಸಾಗಣೆ ತುಂಬಿದ ಲಾರಿ, ಟ್ರಕ್‌ಗಳಂತೂ ಏದುಸಿರು ಬಿಡುತ್ತಾ ಹಳ್ಳ–ದಿಣ್ಣೆಯ ರಸ್ತೆಯಲ್ಲಿ ಸಾಗುವುದನ್ನು ಕಾಣಬಹುದು. ಹೆದ್ದಾರಿಯನ್ನು ಅಗೆದಿರುವ ಕಡೆ ತಾತ್ಕಾಲಿಕ ಸರ್ವಿಸ್‌ ರಸ್ತೆ ಮಾಡಲಾಗಿದೆ. ಈ ರಸ್ತೆಯಲ್ಲಿ ಗುಂಡಿ, ಹೊಂಡಗಳು ಮತ್ತು ವಾಹನದೆತ್ತರಕ್ಕೂ ಚಿಮ್ಮುವ ದೂಳು ಪ್ರಯಾಣವನ್ನು ನರಕಸದೃಶವನ್ನಾಗಿಸುತ್ತವೆ.

ಅವೈಜ್ಞಾನಿಕ ಹಂಪ್‌

ಡಿವೈಡರ್‌ ಆಚೆ ಬಲ ಬದಿಯಲ್ಲಿ ಸಾಗುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಾವು ಸಾಗುವ ರಸ್ತೆಗೆ ತಿರುಗಿ ಮುಖಾಮುಖಿಯಾಗುತ್ತದೆ. ಏಕೆಂದರೆ, ಆ ಕಡೆಯ ರಸ್ತೆಯನ್ನು ಅಗೆದು, ಮಣ್ಣಿನ ರಾಶಿಯನ್ನು ಹಾಕಲಾಗಿರುತ್ತದೆ. ಇದರಿಂದ ವಾಹನ ಚಾಲಕರು ಗಕ್ಕನೆ ಬ್ರೇಕ್‌ ಹಾಕಿ ಎಡಕ್ಕೆ ವಾಹನವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅಪಘಾತ ಕಟ್ಟಿಟ್ಟಬುತ್ತಿ. ಸರ್ವಿಸ್‌ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಹಾಕಿರುವ ಹಂಪ್‌ಗಳನ್ನು ದಾಟಲು ತಿಣುಕಾಡುವ ಟ್ರಕ್‌ ಮತ್ತು ಲಾರಿಗಳು ಗಕ್ಕನೆ ನಿಂತುಬಿಡುತ್ತವೆ. ಇದರಿಂದ ಹಿಂದೆ ಬರುವ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ.

ಫುಟ್‌ಪಾತ್‌, ಬಸ್ ನಿಲ್ದಾಣ ನೆಲಸಮ

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬರುವ ಶಿಗ್ಗಾವಿ, ಮೋಟೆಬೆನ್ನೂರು, ಕಾಕೋಳ, ನೆಲೋಗಲ್ಲ, ಹನುಮನಮಟ್ಟಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಹೆದ್ದಾರಿ ಕಾಮಗಾರಿಯಿಂದ ರೋಸಿ ಹೋಗಿದ್ದಾರೆ. ಹಗಲು–ರಾತ್ರಿ ಸಂಚರಿಸುವ ವಾಹನಗಳು ದೂಳನ್ನು ಎಬ್ಬಿಸುತ್ತಾ ಸಾಗುತ್ತವೆ. ರಸ್ತೆ ಬದಿಯ ಮನೆ, ಅಂಗಡಿಗಳು ಸಂಪೂರ್ಣ ದೂಳುಮಯವಾಗಿವೆ.

‘ಹೆದ್ದಾರಿ ದಾಟಲು ಸರಿಯವಾದ ವ್ಯವಸ್ಥೆ ಇಲ್ಲದ ಕಾರಣಮಹಿಳೆಯರು, ಮಕ್ಕಳು, ವೃದ್ಧರಿಗೆ ತೀವ್ರ ತೊಂದರೆಯಾಗಿದೆ. ಫುಟ್‌ಪಾತ್‌ಗಳನ್ನು ಕಾಮಗಾರಿ ನುಂಗಿ ಹಾಕಿರುವುದರಿಂದ ವಾಹನಗಳ ಮಧ್ಯೆ ಜನ ಮತ್ತು ಜಾನುವಾರು ಸಂಚರಿಸಬೇಕಿದೆ. ಅಷ್ಟೇ ಅಲ್ಲದೆ, ರಸ್ತೆ ವಿಸ್ತರಣೆಗಾಗಿ ಪ್ರಯಾಣಿಕರ ತಂಗುದಾಣಗಳನ್ನು ಕೆಡವಿ ಹಾಕಲಾಗಿದೆ. ಇದರಿಂದ ನಿತ್ಯ ಶಾಲಾ–ಕಾಲೇಜಿಗೆ ಸಂಚರಿಸುವ ವಿದ್ಯಾರ್ಥಿಗಳು ಮತ್ತು ಜನರು ಬಿಸಿಲು, ಮಳೆಯಲ್ಲೇ ರಸ್ತೆಬದಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದೆ‌’ ಎನ್ನುತ್ತಾರೆ ಕಾಕೋಳ ಗ್ರಾಮದ ನಿವಾಸಿ ರಾಮನಗೌಡ.

‘ಶಾಲೆ ಮಕ್ಕಳು ಬಿಸ್ಲಾಗ ನಿಲ್ತಾವೆ. ಹೆದ್ದಾರಿ ತ್ಯಾಜ್ಯ ತಂದು ರಸ್ತೆ ಬದಿ ಸುರಿದವ್ರೆ. ಹಗಲೇ ವಾಹನವನ್ನು ಹಾರಿಸಿಕೊಂಡು ಹೋಗ್ತಾರೆ. ರಾತ್ರಿ ಕೇಳೋರು ಯಾರ್ರಿ. ಜೀವ ಕೈಯಲ್ಲಿ ಇಟ್ಕೊಂಡು ರಸ್ತೆ ದಾಟಬೇಕ್ರಿ’ ಎನ್ನುತ್ತಾರೆ ಕಾಕೋಳ ಗ್ರಾಮದ ಶಿವಾಜಪ್ಪ ಸೌಳಂಕಿ ಮತ್ತು ನಿಂಗಪ್ಪ ಕಾಶೆಟ್ಟಿ.

‘ನಿಗದಿಯಾಗಿದ್ದಕ್ಕಿಂತ ಹೆಚ್ಚಿನ ಅಂಡರ್‌ಪಾಸ್‌ಗಳಿಗೆ ಜನರಿಂದ ಬೇಡಿಕೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಹೆಚ್ಚಿನ ಪರಿಹಾರ ಕೇಳುತ್ತಿರುವ ರೈತರು, ಅತಿವೃಷ್ಟಿ ಸೃಷ್ಟಿಸಿದ ಅವಾಂತರ ಮುಂತಾದ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. 2021ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಎನ್‌ಎಚ್‌ಎಐ ಅಧಿಕಾರಿ.

***

ಪ್ರತಿಕ್ರಿಯಿಸಿ: 94484 70141

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT