ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದ ಬೀಡು ದುಂಡಶಿ

200 ವರ್ಷಗಳ ಹಿಂದೆ ಪರದೇಶಿ ಸ್ವಾಮೀಜಿ ಸ್ಥಾಪಿಸಿದ ವಿರಕ್ತಮಠ
ಪುಟ್ಟಪ್ಪ ಲಮಾಣಿ
Published 21 ಏಪ್ರಿಲ್ 2024, 6:12 IST
Last Updated 21 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ತಡಸ (ದುಂಡಶಿ): ದುಂಡಶಿ ಗ್ರಾಮವು ಬ್ರಿಟಿಷರ ಕಾಲದಲ್ಲಿ ಕೇಂದ್ರ ಪ್ರದೇಶವಾದ ಅರಟಾಳ ಗ್ರಾಮದ ಪಕ್ಕದ ಊರಾಗಿತ್ತು. ಅಂದಿನ ವ್ಯಾಪಾರ– ವಹಿವಾಟು ಕೇಂದ್ರಗಳು ಈ ಗ್ರಾಮದಲ್ಲಿ ಅಲ್ಲಲ್ಲಿ ಇಂದಿಗೂ ಕಾಣಸಿಗುತ್ತವೆ.

ಗ್ರಾಮದಲ್ಲಿ ಜನಪದ ಕಲೆಗಳಲ್ಲಿ ದೊಡ್ಡಾಟ, ಸಣ್ಣಾಟ, ನಾಟಕ, ಭಜನೆ ಪದ ಹಾಡುವ ಕಲಾವಿದರು ಇದ್ದಾರೆ. ಮರ ಕೆತ್ತನೆ ಕೆಲಸ ಮಾಡುವ, ಮಣ್ಣಿನಲ್ಲಿ ಗಣಪತಿ, ಮಡಿಕೆ ತಯಾರಿಸುವ ಕುಂಬಾರಿಕೆ ಸಮುದಾಯವು ಈ ಗ್ರಾಮದಲ್ಲಿದ್ದು, ಇಂದಿಗೂ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕುಶಲ ಕಲೆಗಾರರು, ಹವ್ಯಾಸಿ ನಾಟಕಕಾರರೂ ಇದ್ದಾರೆ.

ತಡಸ, ಶಿಗ್ಗಾವಿ ತಾಲ್ಲೂಕಿನ ಹೋಬಳಿ ಕೇಂದ್ರವಾಗಿದ್ದು, ಸ್ಪಟಿಕಾತ್ಮಕ ಪದರು ಶಿಲೆಯಿಂದ ಕೂಡಿದೆ. ಕೆಂಪು ಮತ್ತು ಕಪ್ಪು ಮಣ್ಣಿನ ಲಕ್ಷಣ ಹೊಂದಿದೆ. ಊರಲ್ಲಿ ಅಡ್ಡಗುಡ್ಡ, ನೀರಲಗುಡ್ಡ, ವನಕೆ ಗುಡ್ಡಗಳು ಇವೆ. ರಾಮನಹೊಂಡ, ಬೆಳ್ಳಿಗಟ್ಟಿ ಕೆರೆ, ಬಸವಣ್ಣೆಪ್ಪನ ಕೆರೆ, ಹಳ್ಳೂರು ಕೆರೆ, ಬೆಂದಿಕೆರೆಗಳಿವೆ. ಒಂದು ಬೆಣ್ಣಿಹಳ್ಳವೂ ಇದೆ.

ವೀರ ಮುಖದ ಆಟದ ಆಚರಣೆ: ದೀಪಾವಳಿ ಸಂದರ್ಭದಲ್ಲಿ ವೀರಮುಖದ ಆಟ ಆಚರಣೆ ನಡೆಯುತ್ತದೆ. ಊರಲ್ಲಿ ಹಿಂದೆ ರಾಕ್ಷಸನ ಕಾಡಾಟ ಇದ್ದ ಕಾರಣ ಅವನನ್ನು ಸಮಾಧಾನ ಪಡಿಸಲು ಹಬ್ಬದಲ್ಲಿ ಮುಖವಾಡ ಧರಿಸಿ ಹರಕೆ ಹೊತ್ತು ಆಡುವರು.

ಒಬ್ಬರಿಗೆ ವೀರಮುಖವಾಡ ಹಾಕಿಸಿ ಕೈಗೆ ಬೆತ್ತಕೊಟ್ಟು ಜನರೆಲ್ಲರೂ ಕೈಯಲ್ಲಿ ಬೆತ್ತ ಹಿಡಿದು ಸೇರಿರುತ್ತಾರೆ. ವೀರಮುಖವಾಡ ಹಾಕಿಕೊಂಡವನು ಕಣ್ಣು ಕಾಣಿಸದೆ ಕೋಲು (ಬೆತ್ತದಿಂದ) ಬೀಸುತ್ತಿರುತ್ತಾನೆ. ಅವನಿಗೆ ಹತ್ತಿರ ಸಿಕ್ಕಿದವರಿಗೆ ಏಟು ಬೀಳುತ್ತಿರುತ್ತದೆ. ಅದನ್ನು ದೈವದ ಪ್ರತೀಕ ಎಂದು ಗ್ರಾಮಸ್ಥರು ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ.

ವಿರಕ್ತಮಠವು 200 ವರ್ಷಗಳ ಹಿಂದೆ ಪರದೇಶಿ ಸ್ವಾಮೀಜಿ ಅವರಿಂದದ ಸ್ಥಾಪನೆ ಆಯಿತೆಂದು ಹೇಳಲಾಗುತ್ತದೆ. ಉತ್ತರದ ಕಡೆಯಿಂದ ಲೋಕಸಂಚಾರ ಮಾಡುತ್ತಾ ಆಗಮಿಸಿದ ಪರದೇಶಿ ಸ್ವಾಮೀಜಿ ಈ ಸ್ಥಳದಲ್ಲಿ ನೆಲೆಸಿ ತಪೋನುಷ್ಠಾನಗೊಂಡು ಮಠವನ್ನು ಸ್ಥಾಪನೆ ಮಾಡಿದ್ದಾರೆ.

ಅವರ ಸಮಾಧಿ ಶ್ರೀಮಠದಲ್ಲಿಯೇ ಇದೆ. ಇವರ ನಂತರ ಸಿದ್ಧರಾಮ ಸ್ವಾಮೀಜಿ, ಅವರ ನಂತರ ಹಿರೇಕೆರೂರು ತಾಲ್ಲೂಕಿನ ಸೀತಿಕೊಂಡದ ಕುಮಾರ ಸ್ವಾಮೀಜಿ ಮಠದ ಅಧಿಕಾರ ವಹಿಸಿಕೊಂಡಿದ್ದಾರೆ.

ಶಿವರಾತ್ರಿಯಂದು ಹಿರಿಯ ಗುರುಗಳ ಪುಣ್ಯಾರಾಧನೆ ಆಚರಿಸಲಾಗುತ್ತದೆ. ಬಸವೇಶ್ವರ, ಸಿದ್ದಲಿಂಗೇಶ್ವರ, ರಾಮಲಿಂಗೇಶ್ವರ, ಕಲೇಶ್ವರ ಗಣಪತಿ ದೇವಾಲಯಗಳು ಇವೆ. ಗ್ರಾಮದೇವತೆ ದ್ಯಾಮವ್ವನ ಗುಡಿ ಇದೆ. ಪರದೇಶಿ ವಿರಕ್ತಮಠ, ಎರಡು ಮಸೀದಿ, ಒಂದು ಬಸದಿ ಇವೆ. ಪ್ರತಿ ವರ್ಷ ಜಾತ್ರೆ, ಉರುಸ್ ನಡೆಯುತ್ತದೆ.

ಗ್ರಾಮವು ಮಲೆನಾಡು ಪ್ರದೇಶದಿಂದ ಆವೃತ್ತವಾಗಿದ್ದು, ವಿಶಾಲವಾದ ಅರಣ್ಯ ಭೂಮಿಯ ಜೊತೆಗೆ ಕೃಷಿ ಭೂಮಿ ಹೊಂದಿದೆ ಎಂದು ಕುಮಾರಸ್ವಾಮೀಜಿ ಹೇಳಿದರು.

ದುಂಡಶಿ ಗ್ರಾಮದ ಐತಿಹಾಸಿಕ ಹನುಮಾನ ದೇವಸ್ಥಾನ
ದುಂಡಶಿ ಗ್ರಾಮದ ಐತಿಹಾಸಿಕ ಹನುಮಾನ ದೇವಸ್ಥಾನ
ದುಂಡಶಿ ಗ್ರಾಮದಲ್ಲಿ ಹಿಂದೂ –ಮುಸ್ಲಿಮರು ಭಾವೈಕ್ಯದಿಂದ ಪ್ರತಿಯೊಂದು ಹಬ್ಬ ಆಚರಿಸುತ್ತಾರೆ
ಈರಣ್ಣ ಸಮಗೊಂಡ ಅಧ್ಯಕ್ಷ ಭ್ರಷ್ಟಾಚಾರ ನಿರ್ಮೂಲನ ಸಮಿತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT