ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಿ: ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಸೂಚನೆ

Published 9 ಮಾರ್ಚ್ 2024, 14:07 IST
Last Updated 9 ಮಾರ್ಚ್ 2024, 14:07 IST
ಅಕ್ಷರ ಗಾತ್ರ

ಹಾನಗಲ್: ‘ಮಾರ್ಚ್‌ನಲ್ಲಿ ಮಳೆ ಬೀಳುವ ಮುನ್ಸೂಚನೆ ಇತ್ತು. ಆದರೆ ಇತ್ತೀಚಿನ ವರದಿ ಏಪ್ರಿಲ್ ಕೊನೆಯ ವಾರದಲ್ಲಿ ಮಳೆ ಬೀಳಲಿದೆ ಎಂದು ಹೇಳುತ್ತಿದೆ. ಹಾಗಾಗಿ ಮುಂದಿನ ಕೆಲ ದಿನಗಳು ಸವಾಲಿನಿಂದ ಕೂಡಿರಲಿವೆ. ಜನ, ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಜಾಗರೂಕತೆ ವಹಿಸಬೇಕು’ ಎಂದು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

‘ಮುಂದಿನ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ತಾಲ್ಲೂಕಿನ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಮಸ್ಯೆಯನ್ನು ಎದುರಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ಖಾತೆಯಲ್ಲಿ ಕನಿಷ್ಠ ₹5 ಲಕ್ಷ ಮೀಸಲಿಟ್ಟುಕೊಳ್ಳಬೇಕು. ಸಮಸ್ಯೆ ಎದುರಾದಾಗ ಅನುದಾನದತ್ತ ಕಾಯ್ದು ಕುಳಿತುಕೊಳ್ಳುವುದು ಬೇಡ’ ಎಂದು ಸಲಹೆ ನೀಡಿದರು.

‘ಎಲ್ಲೆಲ್ಲಿ ಈಗಾಗಲೇ ಸಮಸ್ಯೆ ಉಲ್ಬಣಿಸಿದೆ ಅಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗಮನ ಹರಿಸಿ. ಗ್ರಾಮಸಭೆ ಕರೆದು ಗ್ರಾಮಸ್ಥರ ಸಹಕಾರ ಪಡೆದುಕೊಳ್ಳಿ. ನೀರಿನ ಅಪವ್ಯಯ ತಡೆಗಟ್ಟುವ ನಿಟ್ಟಿನಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಿ. ಕೆಲವೆಡೆ ವ್ಯರ್ಥವಾಗಿ ಹರಿದು ನೀರು ಚರಂಡಿ ಸೇರುತ್ತಿದೆ. ಕೂಡಲೇ ಅದನ್ನು ನಿಯಂತ್ರಿಸಿ’ ಎಂದು ಶ್ರೀನಿವಾಸ ಮಾನೆ ಸೂಚನೆ ನೀಡಿದರು.

‘ಸ್ಥಳೀಯ ಮಠಾಧೀಶರು, ಗಣ್ಯರೊಂದಿಗೆ ಸಂಪರ್ಕ ಸಾಧಿಸಿ ವಾಸ್ತವ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಿ. ಮಳೆ ಬಿದ್ದು ಸಮಸ್ಯೆಗೆ ಪರಿಹಾರ ಸಿಗುವವರೆಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ತಹಶೀಲ್ದಾರ್ ರೇಣುಕಾ ಎಸ್, ತಾಲ್ಲೂಕು ಪಂಚಾಯ್ತಿ ಇಒ ದೇವರಾಜ, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಎಇಇ ಆರ್.ಸಿ.ನೆಗಳೂರ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಿರೀಶ ರೆಡ್ಡೇರ, ಉಪತಹಶೀಲ್ದಾರ್‌ ಎಂ.ಎಸ್.ಮುಗದುಂ, ಟಿ.ಕೆ.ಕಾಂಬ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT