ಶನಿವಾರ, ಸೆಪ್ಟೆಂಬರ್ 25, 2021
29 °C
ಅವೈಜ್ಞಾನಿಕ ರಸ್ತೆ ಉಬ್ಬು ತೆರವುಗೊಳಿಸಿ: ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಿ– ಜಿಲ್ಲಾಧಿಕಾರಿ

ಹಾವೇರಿ: ಅಪಘಾತ ತಡೆಗೆ ಕ್ರಮ ಕೈಗೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅವೈಜ್ಞಾನಿಕ ರಸ್ತೆ ವಿನ್ಯಾಸಗಳ ಎಂಜಿನಿಯರಿಂಗ್‌ ದೋಷಗಳನ್ನು ಸರಿಪಡಿಸಿ, ಸುರಕ್ಷತಾ ಕ್ರಮಗಳ ಮೂಲಕ ರಸ್ತೆ ಅಪಘಾತ ತಪ್ಪಿಸಲು ಆದ್ಯತೆಯ ಮೇಲೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ಮಾರಣಾಂತಿಕ ಅಪಘಾತಗಳ ಸಂಖ್ಯೆ ಹಾಗೂ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕಂಡುಬರುತ್ತದೆ. ಅಪಘಾತಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ, ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇಲಾಖಾವಾರು ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ರಸ್ತೆ ಅಪಘಾತಗಳಿಂದ ಉಂಟಾಗಿರುವ ಮರಣಗಳು ಹಾಗೂ ಗಂಭೀರ ಗಾಯಗಳನ್ನು ಹೊಂದಿರುವ ಪ್ರಮಾಣಗಳನ್ನು ಪೊಲೀಸ್ ಮತ್ತು ಆಸ್ಪತ್ರೆಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತುರ್ತು ಚಿಕಿತ್ಸೆ ನೀಡಿ: ಅಪಘಾತದ ಸಂದರ್ಭದಲ್ಲಿ ತುರ್ತು ವಾಹನಗಳ ಸೇವೆಗಳ ಸಮನ್ವಯ, ಅಪಘಾತಕ್ಕೊಳಪಟ್ಟವರ ಗಾಯದ ಗಂಭೀರತೆಗನುಗುಣವಾಗಿ ಚಿಕಿತ್ಸೆಗೆ ವ್ಯವಸ್ಥೆ, ವೈದ್ಯರು ಮತ್ತು ಸಿಬ್ಬಂದಿಗಳಿಗೆ ರಸ್ತೆ ಅಪಘಾತಕ್ಕೀಡಾದವರ ನಿರ್ವಹಣೆ ಹಾಗೂ ತರಬೇತಿಗೊಳಿಸುವುದು, ತುರ್ತು ಕರೆ ದೂರವಾಣಿ 108ರ ಬಗ್ಗೆ ಪ್ರಚಾರ, ಅಪಘಾತದ ಸಂದರ್ಭದಲ್ಲಿ ಆಸ್ಪತ್ರೆಗಳ ತುರ್ತು ಚಿಕಿತ್ಸೆಗಾಗಿ ಅವಶ್ಯ ಮೂಲಸೌಕರ್ಯಗಳನ್ನು ಒದಗಿಸಿ ಚಿಕಿತ್ಸೆ ಗುಣಮಟ್ಟ ಹೆಚ್ಚಳಕ್ಕೆ ಕ್ರಮವಹಿಸಿ ಎಂದರು. 

ಜಿಲ್ಲಾ ಆಸ್ಪತ್ರೆಗೆ ಶಾಸಕರು, ಸಂಸದರ ಅನುದಾನದಲ್ಲಿ ಆಂಬುಲೆನ್ಸ್‌ ಖರೀದಿ, ಶಾಲಾ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಮಾರ್ಗಸೂಚಿಗಳ ಕುರಿತು ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಮಾತನಾಡಿ, ಅವೈಜ್ಞಾನಿಕ ರಸ್ತೆ ತಿರುವು, ರಸ್ತೆ ಉಬ್ಬುಗಳನ್ನು ತೆರವುಗೊಳಿಸುವುದು, ಸಾರ್ವಜನಿಕರ ರಕ್ಷಣೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಪೊಲೀಸರ ನೆರವಿನೊಂದಿಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಅವರು ರಸ್ತೆ ಸುರಕ್ಷತಾ ಕ್ರಮದ ಭಾಗವಾಗಿ ಇಲಾಖಾವಾರು ಕ್ರಿಯಾ ಯೋಜನೆಗಳನ್ನು ಸಭೆ ಮಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು