ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿಯ ನೆಲೆವೀಡು ಶಂಕರಿಕೊಪ್ಪ

ಬನದ ಹುಣ್ಣಿಮೆಯಂದು ಜಾತ್ರಾ ಮಹೋತ್ಸವ: ಸಂತಾನ ಪ್ರಾಪ್ತಿ ನೀಡುವ ದೇವಿ
Last Updated 15 ಅಕ್ಟೋಬರ್ 2022, 12:51 IST
ಅಕ್ಷರ ಗಾತ್ರ

ಹಾನಗಲ್: ತಾಲ್ಲೂಕಿನಲ್ಲಿ ಹರಿದಿರುವ ಧರ್ಮಾ ಮತ್ತು ವರದಾ ನದಿಗಳ ಸಮೀಪದಲ್ಲಿರುವ ಶಂಕರಿಕೊಪ್ಪ ಕೃಷಿಯನ್ನೇ ಪ್ರಧಾನವಾಗಿಸಿಕೊಂಡ ಸಮೃದ್ಧ ಗ್ರಾಮ. ಈ ಗ್ರಾಮದ ಆರಾಧ್ಯ ದೇವಿ ಶ್ರೀ ಬನಶಂಕರಿ ಇಲ್ಲಿ ಅನಾದಿಕಾಲದಿಂಲೂ ನೆಲೆಸಿದ್ದು, ಭಕ್ತರಿಗೆ ಇಷ್ಟಾರ್ಥ ಕರುಣಿಸುವ ಜಾಗೃತ ದೈವವಾಗಿ ಕಂಗೊಳಿಸುತ್ತಾಳೆ.

ಸುಂದರ ಕಲ್ಲಿನ ಗುಡಿ ಗಮನ ಸೆಳೆಯುತ್ತದೆ. ಗರ್ಭಗುಡಿಯಲ್ಲಿನ ಬನಶಂಕರಿ ದೇವಿ ಮೂರ್ತಿ ಆಕರ್ಷಕವಾಗಿದೆ. ನಿತ್ಯ ಭಕ್ತರಿಂದ ಪೂಜೆಗೆ ಒಳಪಡುವ ಬನಶಂಕರಿ ದೇವಿ ಈ ಭಾಗದ ಶಕ್ತಿಸ್ವರೂಪಿಣಿಯಾಗಿದ್ದಾಳೆ.

ಈ ಗ್ರಾಮದ ಹಿರಿಯರ ಪ್ರಕಾರ ಬನಶಂಕರಿ ದೇವಿ ಇಲ್ಲಿ ಸುಮಾರು 4 ಶತಮಾನಗಳಿಂದ ನೆಲೆ ನಿಂತಿದ್ದಾಳೆ. ಈ ಕಾರಣಕ್ಕಾಗಿ ಈ ಗ್ರಾಮಕ್ಕೆ ಶಂಕರಿ ದೇವಿಯ ಹೆಸರು ಬಂದಿದೆ. ಶಂಕರಿ ಕೊಪ್ಪ ಎಂದು ಗುರುತಿಸಿಕೊಳ್ಳಲು ಬನಶಂಕರಿ ದೇವಿಯ ಮಹಿಮೆಯೇ ಮುಖ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ನಮ್ಮ ಗ್ರಾಮದ ಮಾರ್ಗವಾಗಿ ಬನಶಂಕರಿ ದೇವಿಯ ಕಲ್ಲಿನ ಮೂರ್ತಿಯನ್ನು ಬೇರೆ ಗ್ರಾಮದವರು ತಮ್ಮ ಗ್ರಾಮದಲ್ಲಿ ಪ್ರತಿಷ್ಠಾಪನೆಗಾಗಿ ಬಂಡಿಯಲ್ಲಿ ಸಾಗಿಸುತ್ತಿದ್ದ ಸಮಯದಲ್ಲಿ ದೇವಿ ಇಲ್ಲಿಯೇ ನೆಲೆ ನಿಂತಳು. ನೆಲ ಸ್ಪರ್ಶಿಸಿದ ದೇವಿ ಮೇಲೆಳಲಿಲ್ಲ. ಹೀಗಾಗಿ ದೇವಸ್ಥಾನ ನಿರ್ಮಿಸಿ ದೇವಿಯನ್ನು ಇಲ್ಲಿಯೇ ಪ್ರತಿಷ್ಠಾಪನೆ ಮಾಡಲಾಗಿತ್ತು ಎಂಬುದು ನಮ್ಮ ಹಿರಿಯರಿಂದ ತಿಳಿದುಕೊಂಡ ಐತಿಹ್ಯ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್‌ನ ಕರಬಸಪ್ಪ ಶಿವೂರ ಹೇಳುತ್ತಾರೆ.

ಪುನರ್‌ ನಿರ್ಮಾಣ:

1991 ರಲ್ಲಿ ದೇವಸ್ಥಾನ ಪುನರ್‌ನಿರ್ಮಾಣ ಮಾಡಲಾಗಿದೆ. ಸುಂದರ ಕಲ್ಲಿನ ಗುಡಿ ರಚನೆಗೊಂಡಿದೆ. ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ಇಲ್ಲಿ ಜಾತ್ರೆ ನಡೆಯುತ್ತದೆ. ನಾಲ್ಕು ದಿನ ನಡೆಯುವ ಜಾತ್ರೆಯಲ್ಲಿ ದೂರ ದೂರಿನ ಭಕ್ತರು ಭಾಗವಹಿಸುತ್ತಾರೆ. ರಥೋತ್ಸವ ಕಣ್ತುಂಬಿಕೊಳ್ಳುತ್ತಾರೆ. ದೇವಿಯ ಕೃಪೆಯಿಂದ ಗ್ರಾಮ ಸುಭಿಕ್ಷವಾಗಿದೆ.

ಸಂತಾನ ಪ್ರಾಪ್ತಿ ಕರುಣಿಸುವ ದೇವಿ ಎಂದು ಇಲ್ಲಿನ ಬನಶಂಕರಿ ದೇವಿ ಭಕ್ತರ ನಂಬಿಕೆಗೆ ಪಾತ್ರಳಾಗಿದ್ದಾಳೆ. ನೂಲಿನ ಎಳೆ ದೇವಿಗೆ ಹಾಕಿ ಹರಕೆ ಮುಟ್ಟಿಸುವ ಸಂಪ್ರದಾಯವಿದೆ. ಈ ರೀತಿಯ ಹರಕೆಯಿಂದ ಸಂತಾನ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ. ನವರಾತ್ರಿಯಂದು ಪ್ರತಿ ದಿನ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆ ನಡೆಯುತ್ತವೆ.

ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ, ದ್ಯಾಮವ್ವನ ಗುಡಿ, ಮುರಗೇಂದ್ರಸ್ವಾಮಿ ಮಠ, ಆಂಜನೇಯ ದೇವಸ್ಥಾನ, ಗಣೇಶ, ಮರೆವ್ವ, ರೇಣುಕಾಚಾರ್ಯ ದೇವಸ್ಥಾನವಿದೆ.

ಪ್ರತಿ ಹುಣ್ಣಿಮೆಗೆ ಭಕ್ತರ ದಂಡು

‘ದೂರದ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಹೋಗಲು ಅಡಚಣೆಯಾಗುವ ಭಕ್ತರು ಶಂಕರಿಕೊಪ್ಪ ಗ್ರಾಮಕ್ಕೆ ಬಂದು ಭಕ್ತಿ ಸಮರ್ಪಿಸುತ್ತಾರೆ. ಪ್ರತಿ ಹುಣ್ಣಿಮಿಗೆ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ನಮ್ಮ ದೇವಸ್ಥಾನಕ್ಕೆ ಆದಾಯದ ಮೂಲಗಳಿಲ್ಲ. ಪುರಾಣ, ಅನ್ನದಾಸೋಹ ಎಲ್ಲವೂ ಭಕ್ತರ ದೇಣಿಗೆಯಿಂದ ನಡೆಯುತ್ತದೆ. ದೇವಸ್ಥಾನ ಮುಂಭಾಗದಲ್ಲಿ ಸರ್ಕಾರದ ಅನುದಾನ ಬಳಸಿಕೊಂಡು ಯಾತ್ರಿ ನಿವಾಸ ನಿರ್ಮಿಸಲಾಗಿದೆ. ವಿಶಾಲ ಸಭಾಭವನ ಮೈದಳೆದಿದೆ. ಶ್ರಾವಣ ಮಾಸದಲ್ಲಿ ಪರಸ್ಥಳದ ಭಕ್ತರ ಪೂಜೆ, ಹರಕೆ ಬನಶಂಕರಿ ಅಮ್ಮನವರಿಗೆ ಸಲ್ಲುತ್ತದೆ’ ಎನ್ನುತ್ತಾರೆ ಗ್ರಾಮದ ಮುಖಂಡ ಭರಮಣ್ಣ ಶಿವೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT