ಮಂಗಳವಾರ, ಡಿಸೆಂಬರ್ 7, 2021
21 °C

ಸಂಸ್ಕೃತಿ ಪಸರಿಸುವ ಕಲೆಯೇ ದೊಡ್ಡಾಟ: ಪರಿಮಳಾ ಜೈನ್‌ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕನ್ನಡದ ನಿಜವಾದ ಸತ್ವವೇನಾದರೂ ಉಳಿದಿದ್ದರೆ ಅದು ಉತ್ತರ ಕರ್ನಾಟಕದ ದೊಡ್ಡಾಟ ಕಲೆಯಿಂದ ಮಾತ್ರ. ನಿರರ್ಗಳ ಶಬ್ದ ಸಂಪತ್ತು, ಕಾವ್ಯ ಲಹರಿ ಹಾಗೂ ಕನ್ನಡ ಸಂಸ್ಕೃತಿಯ ತಿರುಳು ಹಳ್ಳಿಗಾಡಿನ ಕಲೆಯಾದ ದೊಡ್ಡಾಟದಿಂದ ಉಳಿದಿದೆ ಎಂದು ಕಲಾವಿದೆ ಪರಿಮಳಾ ಜೈನ್ ಹೇಳಿದರು.

ಗೆಳೆಯರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಸಂಯುಕ್ತವಾಗಿ ದೊಡ್ಡಾಟದ ಹಿರಿಯ ಕಲಾವಿದ ದಿ.ಮಹಾದೇವಪ್ಪ ಗುಡ್ಡಪ್ಪ ಓಂಕಾರಣ್ಣನವರ ಸ್ಮರಣಾರ್ಥ ಏರ್ಪಡಿಸಿದ್ದ ‘ಮೈಲಾರಲಿಂಗೇಶ್ವರ ಮಹಾತ್ಮೆಯ ದೊಡ್ಡಾಟ ಪ್ರದರ್ಶನ’ ಮತ್ತು ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮವನ್ನು ಮದ್ದಲಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. 

ರಾಮಾಯಣ ಮತ್ತು ಮಹಾಭಾರತದ ಜೀವನ ಸಾರ ಮತ್ತು ಪ್ರಸಂಗಗಳನ್ನು ಅಳವಡಿಸಿಕೊಂಡು ಜನಪದ ಶೈಲಿಯಲ್ಲಿ ಹರಿಯುವ ದೊಡ್ಡಾಟಕ್ಕೆ ಭಾಷಾ ಗಾಂಭೀರ್ಯವಿದೆ. ಇದರಲ್ಲಿ ಅಭಿನಯಿಸುವುದರಿಂದ ಯೋಗ ಮತ್ತು ಏಕಾಗ್ರತೆ ಬೆಳೆಯುತ್ತದೆ. ಶಾಲಾ ಮಟ್ಟದಲ್ಲಿಯೇ ದೊಡ್ಡಾಟ ಕಲಿಕೆ ಆರಂಭವಾಗಬೇಕು ಎಂದು ಹೇಳಿದರು. 

ಲೇಖಕ ಕೋರಗಲ್ ವಿರೂಪಾಕ್ಷಪ್ಪ ಮಾತನಾಡಿದರು. ಜ್ಞಾನಗಂಗಾ ಶಿಕ್ಷಣ ಸಮಿತಿಯ ಚೇರ್ಮನ್‌ ಸಿ.ಎಂ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಎಲ್ಲ ಪ್ರದರ್ಶನಾ ಕಲೆಗಳು ಮೂಲೆಗುಂಪಾಗುತ್ತಿರುವ ಈ ಸಂದರ್ಭದಲ್ಲಿ ದೊಡ್ಡಾಟ ಕಲೆ ಎದ್ದು ನಿಲ್ಲುವ ಶಕ್ತಿ ಹೊಂದಿದೆ ಎಂದರು.

ಮೂವರು ದೊಡ್ಡಾಟ ಕಲಾವಿದರಾದ ಕಲಕೇರಿಯ ಫಕ್ಕೀರಪ್ಪ ಗೌರಕ್ಕನವರ, ಚನಬಸಪ್ಪ ಗಡಿಯಂಕನಹಳ್ಳಿ ( ನಾಗನೂರ ) ಹಾಗೂ ಕೋಲೂರಿನ ಮಲ್ಲೇಶಪ್ಪ ಬಜ್ಜಿ ಅವರನ್ನು ಸನ್ಮಾನಿಸಲಾಯಿತು. 

ಡಾ.ಬಸವರಾಜ ಹಳ್ಳೂರ. ವ್ಹಿ.ಎಂ. ಪತ್ರಿ, ಜಿ.ಬಿ. ಸುಣಗಾರ, ನಾಗರಾಜ ಪೂಜಾರ, ಲಿಂಗಾಚಾರಿ ಮಣಕೂರ, ರೇಣುಕಾ ಗುಡಿಮನಿ, ಸುಮಂಗಲಾ ಓಂಕಾರಣ್ಣವರ ಇದ್ದರು. ನಾಟಕ ಪ್ರದರ್ಶನವನ್ನು ಸಂಯೋಜಕ ಜಿ.ಎಂ. ಓಂಕಾರಣ್ಣನವರ ಸಂಯೋಜಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.