ಅಕ್ಕಿಆಲೂರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕೂಡ ಕಳೆದಿಲ್ಲ. ಐದೂ ಗ್ಯಾರಂಟಿಗಳ ಜಾರಿಗೆ ದಿಟ್ಟ ಕ್ರಮ ಕೈಗೊಂಡಿರುವ ಪರಿಣಾಮ ₹50 ಸಾವಿರ ಕೋಟಿಗೂ ಹೆಚ್ಚಿನ ಮಹತ್ವಾಕಾಂಕ್ಷಿ ಯೋಜನೆಗಳಿಂದ ನೇರವಾಗಿ ಜನತೆಗೆ ಪ್ರಯೋಜನವಾಗಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಕುಮಾರ ಮಹಾಶಿವಯೋಗಿಗಳ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕಳೆದ 15 ದಿನಗಳಿಂದ ವಿರೋಧ ಪಕ್ಷಗಳು ಬರೀ ಟೀಕೆಯಲ್ಲಿ ನಿರತವಾಗಿವೆ. ಯಾವುದೇ ಒಂದು ಸರ್ಕಾರಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಗೆ ಸಮಯ ಹಿಡಿಯಲಿದೆ. ಅಧ್ಯಯನ, ಪೂರ್ವ ಸಿದ್ಧತೆ ಕೈಗೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಪ್ರತಿವರ್ಷವೂ ರಾಜ್ಯದಿಂದ ಕೇಂದ್ರಕ್ಕೆ ₹2.5 ಲಕ್ಷ ಕೋಟಿ ತೆರಿಗೆ ಭರಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೇವಲ ₹50 ಸಾವಿರ ಕೋಟಿ ಮಾತ್ರ ನೀಡುತ್ತಿದೆ. ಇದುವರೆಗೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ, ರಾಜ್ಯದ ಪಾಲಿನ ಹಣ ತರುವ ಯಾವುದೇ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಕೇಂದ್ರದಿಂದ ನಮ್ಮ ಪಾಲು ಪಡೆದುಕೊಳ್ಳಲು ಕಾಂಗ್ರೆಸ್ ಶ್ರಮವಹಿಸಲಿದೆ ಎಂದು ಭರವಸೆ ನೀಡಿದರು.
ಅಲ್ಪಾವಧಿಗೆ ಶಾಸಕನಾಗಿದ್ದ ಸಂದರ್ಭದಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಜನ ವಿಶ್ವಾಸವಿಟ್ಟು ಪೂರ್ಣಾವಧಿ ಅವಕಾಶ ನೀಡಿದ್ದಾರೆ. ನಿರೀಕ್ಷೆ ಹುಸಿಗೊಳಿಸದೆ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ಹೊಸ ದೃಷ್ಟಿಯಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು, ಹಲವು ಯೋಜನೆಗಳಿಗೆ ಅನುಮೋದನೆ ಪಡೆದುಕೊಳ್ಳಲು, ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಹೆಚ್ಚು ಗಮನ ಹರಿಸಬೇಕಿದೆ. ಹೀಗಾಗಿ ತಾವೆಲ್ಲರೂ ಅಗತ್ಯ ಸಹಕಾರ ನೀಡಿದರೆ ಹೆಚ್ಚು ಸಮಯ ಈ ಕೆಲಸಗಳಿಗೆ ನೀಡಬಹುದಾಗಿದೆ. ಕ್ಷೇತ್ರವನ್ನು ಮಾದರಿಯಾಗಿಸಲು ಶ್ರಮಿಸುವೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿ.ಪಂ ಮಾಜಿ ಸದಸ್ಯರಾದ ಟಾಕನಗೌಡ ಪಾಟೀಲ, ಮಹದೇವಪ್ಪ ಬಾಗಸರ, ಕೊಟ್ರಪ್ಪ ಕುದರಿಸಿದ್ದಣ್ಣನವರ, ತಾ.ಪಂ ಮಾಜಿ ಅಧ್ಯಕ್ಷರಾದ ಎಲ್.ಕೆ.ಶೇಷಗಿರಿ, ಎಸ್.ಬಿ.ಪೂಜಾರ, ಶಾಂತಕ್ಕ ಅಂಗಡಿ, ಮಾಜಿ ಸದಸ್ಯರಾದ ಬಷೀರಖಾನ ಪಠಾಣ, ರಾಮಣ್ಣ ಶೇಷಗಿರಿ, ಮೆಹಬೂಬ ಬ್ಯಾಡಗಿ, ಮುಖಂಡರಾದ ಸದಾಶಿವ ಬೆಲ್ಲದ ಇದ್ದರು.
Cut-off box - ‘ಅಪಾಯದಲ್ಲಿ ಪ್ರಜಾಪ್ರಭುತ್ವ’ ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಿಜೆಪಿ ವೇಷ ಬದಲಿಸಿ ಬಣ್ಣದ ಮಾತುಗಳೊಂದಿಗೆ ಲೋಕಸಭೆ ಚುನಾವಣೆಯಲ್ಲಿ ಜನತೆಗೆ ಮೋಸ ಮಾಡಲು ಬರಲಿದೆ. ಪ್ರತಿಯೊಬ್ಬರೂ ಬಣ್ಣದ ಮಾತುಗಳಿಗೆ ಮರುಳಾಗದೆ ಪ್ರಜಾಪ್ರಭುತ್ವದ ಉಳಿವಿಗೆ ಮುಂದಾಗಬೇಕಿದೆ. ದೇಶದಲ್ಲಿ ಜನಪರವಾದ ಕಾಂಗ್ರೆಸ್ ಸರ್ಕಾರ ಸ್ಥಾಪಿಸಬೇಕು ಎಂದು ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.