ಶುಕ್ರವಾರ, ಏಪ್ರಿಲ್ 16, 2021
31 °C
ಚಿಕ್ಕಬಾಸೂರು ಪ್ರಥಮ ದರ್ಜೆ ಕಾಲೇಜಿಗೆ ಸತತ ಮೂರು ವರ್ಷ ಶೇ 100ರಷ್ಟು ಫಲಿತಾಂಶ

ಗ್ರಾಮೀಣ ವಿದ್ಯಾರ್ಥಿನಿಯರ ಆಶಾಕಿರಣ

ಪ್ರಮೀಳಾ ಹುನಗುಂದ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ: ತಾಲ್ಲೂಕಿನ ಚಿಕ್ಕಬಾಸೂರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದೆ. 

ಕಳೆದ ಮೂರು ವರ್ಷಗಳಿಂದ ಕಾಲೇಜಿಗೆ ಸತತವಾಗಿ ಶೇ 100ರಷ್ಟು ಫಲಿತಾಂಶ ಬರುತ್ತಿರುವುದು, ಗುಣಮಟ್ಟದ ಬೋಧನೆಗೆ ಹಿಡಿದ ಕನ್ನಡಿಯಾಗಿದೆ. ಸ್ವಚ್ಛ ಪರಿಸರ, ಮೂಲಸೌಕರ್ಯ, ಭವ್ಯ ಕಟ್ಟಡ, ನುರಿತ ಶಿಕ್ಷಕರು ಹೀಗೆ ಒಟ್ಟಾರೆ ಕಲಿಕಾ ಸ್ನೇಹಿ ವಾತಾವರಣವು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 

4ನೇ ರ‍್ಯಾಂಕ್‌: ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. 2016–17ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಿ.ಎ ಅಂತಿಮ ವರ್ಷದಲ್ಲಿ 4ನೇ ರ‍್ಯಾಂಕ್‌‌ ಈ ಕಾಲೇಜಿನ ವಿದ್ಯಾರ್ಥಿನಿಗೆ ಸಿಕ್ಕಿದೆ. ಮೂರು ಬಾರಿ ರಾಷ್ಟ್ರೀಯ ಮಟ್ಟದ ಸೆಮಿನಾರ್‌ ಆಯೋಜಿಸುವ ಮೂಲಕ ಗ್ರಾಮೀಣ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಕಾಲೇಜಿಗೆ ಬಿ–ಗ್ರೇಡ್‌: ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಈ ಕಾಲೇಜು, ಪ್ರಸಕ್ತ ವರ್ಷ 230 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿದೆ. ಶೇ 25ರಷ್ಟು ಯುವಕರು ಮತ್ತು ಶೇ 75ರಷ್ಟು ಯುವತಿಯರು ಪ್ರವೇಶಾತಿ ಪಡೆದಿದ್ದಾರೆ. ಕಳೆದ ವಾರ ಕಾಲೇಜಿಗೆ ಭೇಟಿ ನೀಡಿದ್ದ ಸೌರಾಷ್ಟ್ರ ವಿಶ್ವವಿದ್ಯಾಲಯದ ಡಾ.ಬಲವಂತ ಶಾಂತಿಲಾಲ ನೇತೃತ್ವದ ನ್ಯಾಕ್‌ ಸಮಿತಿಯು ಕಾಲೇಜಿನ ಬೋಧನಾ ಗುಣಮಟ್ಟ, ಫಲಿತಾಂಶ, ಮೂಲಸೌಕರ್ಯ ಎಲ್ಲವನ್ನೂ ಪರಿಶೀಲಿಸಿ, ‘ಬಿ–ಗ್ರೇಡ್‌’ ನೀಡಿದೆ.

ವಿಶಾಲವಾದ ಆಟದ ಮೈದಾನ, ಕಾಲೇಜಿನ ಮುಂಭಾಗ ಕಣ್ಮನ ತಣಿಸುವ ಹಸಿರು ಸಿರಿ, 17 ಕೊಠಡಿಗಳ ಭವ್ಯ ಕಟ್ಟಡವನ್ನು ಈ ಕಾಲೇಜು ಹೊಂದಿದೆ. ಕಾಲೇಜು ಆವರಣದಲ್ಲಿ ವೈಫೈ ಸೌಲಭ್ಯ ಕೂಡಾ ಲಭ್ಯವಿದ್ದು, ‘ಡಿಜಿಟಲ್‌‌ ಲೈಬ್ರರಿ’ಯನ್ನು ಸ್ಥಾಪಿಸಿ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಲಾಗಿದೆ. 4,722 ಪುಸ್ತಕಗಳು, 3 ಜರ್ನಲ್‌ಗಳನ್ನು ಒಳಗೊಂಡ ಗ್ರಂಥಾಲಯ ವಿದ್ಯಾರ್ಥಿಗಳ ಮೆಚ್ಚಿನ ತಾಣವಾಗಿದೆ. 

ಕಂಪ್ಯೂಟರ್‌ ಲ್ಯಾಬ್‌: 13 ಕಂಪ್ಯೂಟರ್‌ಗಳಿರುವ ಸುಸಜ್ಜಿತ ಲ್ಯಾಬ್‌ ವ್ಯವಸ್ಥೆಯಿದೆ. ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ಸೌಲಭ್ಯಗಳಿವೆ. ಬಿ.ಎ ಹಾಗೂ ಬಿ.ಕಾಂ ತರಗತಿಗಳು ನಡೆಯುತ್ತಿವೆ. ಬಿಬಿಎ ಹಾಗೂ ಇನ್ನಿತರ ಕೋರ್ಸ್‌ ಆರಂಭಿಸುವಂತೆ ಕಾಲೇಜು ಅಭಿವೃದ್ಧಿ ಸಮಿತಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ ಎಂದು ಅಧ್ಯಕ್ಷರೂ ಅಗಿರುವ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಜಿಲ್ಲಾ ರಕ್ತ ಭಂಡಾರದ ಸಹಯೋಗದಲ್ಲಿ ಮೂರು ಬಾರಿ ಉಚಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಒಟ್ಟು 152 ಯುನಿಟ್‌‌ ರಕ್ತ ಸಂಗ್ರಹಿಸಲಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆಗಳನ್ನು ಆಯೋಜಿಸಿ, ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು