ಗುರುವಾರ , ಅಕ್ಟೋಬರ್ 29, 2020
27 °C
ರುದ್ರಪ್ಪ ಬಸೇಗಣ್ಣಿ ಜನ್ಮ ಶತಮಾನೋತ್ಸವ: ಶ್ರಮಜೀವಿಗಳಿಗೆ ಸನ್ಮಾನ

ಬಯಲು ವಾಚನಾಲಯ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಹಿರಿಯ ಶ್ರಮ ಜೀವಿಗಳಿಗೆ ಸನ್ಮಾನ, ಬಯಲು ವಾಚನಾಲಯ ಉದ್ಘಾಟನೆ ಹಾಗೂ ಕೊರೊನಾ ಜಾಗೃತಿ ಕಾರ್ಯಕ್ರಮ ಮಾಡುವ ಮೂಲಕ ಕಾಯಕಯೋಗಿ ಲಿಂ.ಶರಣ ರುದ್ರಪ್ಪ ಬಸೇಗಣ್ಣಿ ಅವರ ಜನ್ಮ ಶತಮಾನೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಬಸೇಗಣ್ಣಿ ಮನೆತನದ ಲಿಂ.ರುದ್ರಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರ ಹೊಲ–ಮನೆಗಳಲ್ಲಿ ದುಡಿದಿದ್ದ 23 ಹಿರಿಯ ಶ್ರಮಜೀವಿಗಳಿಗೆ ಅಂಗಿ, ಧೋತರ, ವಸ್ತ್ರ, ಊರುಗೋಲು ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು. 

ರುದ್ರಪ್ಪನವರ ಮೊಮ್ಮಗ ಶಿವಶಂಕರ ಬಯಲು ವಾಚನಾಲಯವನ್ನು ಉದ್ಘಾಟನೆ ಮಾಡಿದರು. ಮತ್ತೊಬ್ಬ ಮೊಮ್ಮಗ ಕಿರಣಕುಮಾರ ಅವರು ಅಜ್ಜನವರ ಕಿರುಲೇಖನ ಪತ್ರಿಕೆಗಳನ್ನು ಹಾಗೂ ಮೊಮ್ಮಕ್ಕಳಾದ ಅರುಣಕುಮಾರ ಶಿವಪ್ರಸಾದ ಮಾಸ್ಕ್‌ಗಳನ್ನು ವಿತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಜೆ.ಪಿ. ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಗದೀಶ ಬಸೇಗಣ್ಣಿ ಹಾಗೂ ಶಂಭಣ್ಣ ಬಸೇಗಣ್ಣಿ ಮಾತನಾಡಿ, ಕೃಷಿ ಹಾಗೂ ಹೈಬ್ರಿಡ್ ತಳಿ ಬೀಜೋತ್ಪಾದನೆಗೆ ಬಸೇಗಣ್ಣಿ ಮನೆತನದ ಕೊಡುಗೆ ವಿವರಿಸಿದರು. ಅಂದಿನ ಕೃಷಿ ಕಾರ್ಮಿಕರಿಗಿದ್ದ ಶ್ರದ್ಧೆ, ಕಳಕಳಿ, ಪ್ರಾಮಾಣಿಕತೆ ಇಂದಿನವರಿಗಿಲ್ಲ. ಯುವಕರು ಕೃಷಿಯಿಂದ ದೂರ ಸರಿಯುತ್ತಿದ್ದಾರೆ. ಕೃಷಿಯಲ್ಲಿ ಹೆಚ್ಚು ಖರ್ಚು, ಹೆಚ್ಚು ಸಾಲ, ಹೆಚ್ಚು ಸಮಸ್ಯೆ, ಕಡಿಮೆ ಲಾಭ ಎಂಬಂತಾಗಿದೆ. ರುದ್ರಪ್ಪನವರ ಕಾಯಕ ಪ್ರಜ್ಞೆ, ಸಮಯ ಪ್ರಜ್ಞೆ ನಮಗೆಲ್ಲ ಅನುಕರಣೀಯವಾಗಿದೆ ಎಂದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ‘ಸಾಧನೆ ಇಲ್ಲದೆ ಅಳಿದರೆ ಸಾವಿಗೆ ಅವಮಾನ, ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಅಂದು ಕಾಯಕವೇ ಕೈಲಾಸವಾಗಿತ್ತು, ಇಂದು ಕಾಸಿದ್ರೆ ಕೈಲಾಸವಾಗಿದೆ. ಅಂದು ದಯವೇ ಧರ್ಮದ ಮೂಲ. ಇಂದು ಭಯವೇ ಧರ್ಮದ ಮೂಲವಾಗಿದೆ. ಒಂದು ದೇವರ ಗುಡಿ ನಿರ್ಮಾಣದಿಂದ ನೂರಾರು ಭಿಕ್ಷುಕರು ಹುಟ್ಟಿಕೊಂಡರೆ, ಒಂದು ವಾಚನಾಲಯ ನಿರ್ಮಿಸಿದರೆ ನೂರಾರು ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.

ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸವರಾಜ ಕಿತ್ತೂರ, ಗಿಡ್ಡಪ್ಪ ಕುಲಕರ್ಣಿ ಅನಿಸಿಕೆಗಳನ್ನು ಹಂಚಿಕೊಂಡರು. ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ಯಲ್ಲಪ್ಪ ಮಣ್ಣೂರ ಅತಿಥಿಯಾಗಿ ಪಾಲೊಂಡಿದ್ದರು. ರೈತಗೀತೆ ನಂತರ ರಮೇಶ ಬಸೇಗಣ್ಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.