ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವಿದ್ಯುತ್‌ ಕಾಣದ 5,518 ಕುಟುಂಬಗಳು, ಆನ್‌ಲೈನ್ ವಿದ್ಯಾಭ್ಯಾಸಕ್ಕೆ ಅಡ್ಡಿ

ಮಕ್ಕಳ ಆನ್‌ಲೈನ್‌ ವಿದ್ಯಾಭ್ಯಾಸಕ್ಕೆ ಕುತ್ತು: ‘ವರ್ಕ್‌ ಫ್ರಂ ಹೋಮ್‌’ಗೂ ತೊಡಕು
Last Updated 18 ಜನವರಿ 2022, 19:30 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿ 5,518 ಕುಟುಂಬಗಳು ವಿದ್ಯುತ್‌ ಸಂಪರ್ಕವಿಲ್ಲದೆ ರಾತ್ರಿ ವೇಳೆ ಲಾಟೀನು ಮತ್ತು ಬುಡ್ಡಿ ಬೆಳಕಲ್ಲೇ ಜೀವನ ನಡೆಸುವಂತಾಗಿದೆ. ಈ ಕುಟುಂಬಗಳು ವಿದ್ಯುತ್‌ ಬೆಳಕಿನ ನಿರೀಕ್ಷೆಯಲ್ಲಿ ದಿನದೂಡುತ್ತಿವೆ.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಹಾವೇರಿ ಜಿಲ್ಲೆಯ ಹಾವೇರಿ ವಿಭಾಗದಲ್ಲಿ 3,401 ಕುಟುಂಬಗಳು ಹಾಗೂ ರಾಣೆಬೆನ್ನೂರು ವಿಭಾಗದಲ್ಲಿ 2,117 ಕುಟುಂಬಗಳು ವಿದ್ಯುತ್‌ ಬೆಳಕಿಗಾಗಿ ಪರಿತಪಿಸುತ್ತಿವೆ.

ಅಲೆಮಾರಿಗಳು, ಬಡ ಕುಟುಂಬಗಳು, ವಿವಿಧ ಆಶ್ರಯ ಯೋಜನೆಗಳ ಫಲಾನುಭವಿಗಳು, ಒಂದೇ ಮನೆಯಿಂದ ಬೇರೆಯಾದ ಕುಟುಂಬಗಳು, ಹೊಸದಾಗಿ ಮನೆ ನಿರ್ಮಿಸಿಕೊಂಡಿರುವ ಕುಟುಂಬಗಳು... ಹೀಗೆ ವಿವಿಧ ಕುಟುಂಬಗಳ ಮನೆಗಳು ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿವೆ.

ಅನಧಿಕೃತ ಸಂಪರ್ಕ:

ಕೆಲವರು ಅನಧಿಕೃತ ಸಂಪರ್ಕ ಪಡೆದು, ವಿದ್ಯುತ್‌ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ಇಲಾಖೆಗೆ ಭಾರಿ ನಷ್ಟವಾಗುತ್ತಿದೆ. ಅಂಥ ಕುಟುಂಬಗಳು ‘ಬೆಳಕು’ ಯೋಜನೆಯಡಿ ಅರ್ಜಿ ಸಲ್ಲಿಸಿ, ಅಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿ.

ವಿದ್ಯುತ್‌ ಸೌಲಭ್ಯ ಮೂಲಸೌಕರ್ಯಗಳಲ್ಲಿ ಒಂದಾಗಿದ್ದು,ಕೋವಿಡ್-19 ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮಾಡಲು ಹಾಗೂ ಆನ್‍ಲೈನ್ ವಿದ್ಯಾಭ್ಯಾಸಕ್ಕೆ ವಿದ್ಯುತ್‌ ಸಂಪರ್ಕವಿಲ್ಲದೇ ತೀವ್ರ ತೊಡಕಾಗಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿವಾಸಿಗಳು.

ಬೆಳಕು ಯೋಜನೆ:

ರಾಜ್ಯದಲ್ಲಿ ಸುಮಾರು 25 ಸಾವಿರ ಮನೆಗಳು ವಿದ್ಯುತ್‌ ಸಂಪರ್ಕ ಹೊಂದಿಲ್ಲದಿರುವುದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ.ಎಲ್ಲಾ ಕುಟುಂಬದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಉಚಿತ ವಿದ್ಯುತ್ ಸಂಪರ್ಕ ನೀಡುವ ‘ಬೆಳಕು’ ಯೋಜನೆ ಸೌಲಭ್ಯವನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ.

ಸರ್ಕಾರದ ಇಂಧನ ಇಲಾಖೆ ವತಿಯಿಂದ 1 ಸೆಪ್ಟೆಂಬರ್‌ 2021ರಿಂದ ಬೆಳಕು ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿದಾರರು 31 ಜನವರಿ 2022ರೊಳಗಾಗಿ ತಮ್ಮ ಸಮೀಪದ ಹೆಸ್ಕಾಂನ ವಿಭಾಗ, ಉಪ-ವಿಭಾಗ, ಶಾಖಾ ಕಚೇರಿ ಅಥವಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿಯನ್ನು ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎನ್ನುತ್ತಾರೆ ಸಹಾಯಕ ಎಂಜಿನಿಯರ್‌ ರಾಜಶೇಖರ ದಾಸರ.

ಈ ಯೋಜನೆಯಡಿಯಲ್ಲಿ ವಿದ್ಯುತ್ ರಹಿತ ಮನೆಗಳ ಫಲಾನುಭವಿಗಳಿಂದ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ, ಗ್ರಾಮ ಪಂಚಾಯಿತಿ ಒದಗಿಸುವ ಪಟ್ಟಿ ಅಥವಾ ಇನ್ನಿತರೆ ದಾಖಲಾತಿಗಳನ್ನು ಪರಿಗಣಿಸಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಈ ಯೋಜನೆಯನ್ನು ಸದುಪಯೋಗ ಪಡೆಯಬೇಕು ಎಂದು ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

*
ವಿದ್ಯುತ್‌ ರಹಿತ ಮನೆಗಳಿಗೆ ‘ಬೆಳಕು’ ಯೋಜನೆಯಡಿ ಸಂಪರ್ಕ ಕಲ್ಪಿಸಲು ಹೆಸ್ಕಾಂ ಅವಕಾಶ ಕಲ್ಪಿಸಿದೆ. ಜನರು ಇದರ ಪ್ರಯೋಜನ ಪಡೆಯಲಿ
- ಕೃಷ್ಣಪ್ಪ ಹಂಡೇಗಾರ, ಪ್ರಭಾರ ಅಧೀಕ್ಷಕ ಎಂಜಿನಿಯರ್‌, ಹೆಸ್ಕಾಂ ವೃತ್ತ ಕಚೇರಿ, ಹಾವೇರಿ

*

ವಿದ್ಯುತ್‌ ಸಂಪರ್ಕವಿಲ್ಲದ ಕುಟುಂಬಗಳ ವಿವರ

ತಾಲ್ಲೂಕು;ಕುಟುಂಬಗಳು

ಹಾವೇರಿ;278

ಹಾನಗಲ್‌;1947

ಶಿಗ್ಗಾವಿ;473

ಸವಣೂರ;703

ರಾಣೆಬೆನ್ನೂರು;1021

ಹಿರೇಕೆರೂರು;594

ರಟ್ಟೀಹಳ್ಳಿ;159

ಬ್ಯಾಡಗಿ;343

ಒಟ್ಟು;5518

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT